09 May, 2009

ತೆರೆದ ಪುಟ

ಊರಿಗೆ ಹೋಗಿ ಬಂದೆ. ಸುಮಾರು ಮೂರು ತಿಂಗಳು ಅದು ಹೇಗೆ ಕಳೆದು ಹೋಯಿತೋ... ಬೇಸರ...
ಊರಿಂದ ಬಂದು ವಾರವಾಗುತ್ತಾ ಬಂದರೂ ಬ್ಲಾಗಿಗೆ ಬರೆಯಲು ವಿಷಯ ತುಂಬಾ ಇದ್ದರೂ ವಾಕ್ಯಗಳೇ ಮೂಡುತ್ತಿಲ್ಲ ಮನಸ್ಸಲ್ಲಿ.
ಮಂಗಳೂರಲ್ಲಿದ್ದಾಗ ಸಮಯ ಹೇಗೆ ಕಳೆಯುವುದೆಂದು ಗೊತ್ತಾಗದ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲದವರು ಎಂಫಿಲ್ ಪದವಿಗೆ ಅರ್ಜಿ ಕರೆದಿದ್ದರು. ಪೇಪರಿನಲ್ಲಿ ನನ್ನ ಕಣ್ಣಿಗೆ ಕಂಡ ಆ ಜಾಹಿರಾತಿಗೆ ಪತಿಯ ಅನುಮತಿ ಪಡೆದು ಕೂಡಲೇ ಅರ್ಜಿ ಹಾಕಿದ್ದೆ. ೩ ತಿಂಗಳು ತರಗತಿಗೂ ಹೋದೆ. ಮತ್ತೆ ಎಂ.ಎ ತರಗತಿಯಲ್ಲಿ ಕುಳಿತ ಅನುಭವ. ಮಜವಾಗಿತ್ತು.
ಹಂಪಿಯವರು ಎಂಫಿಲ್‌ಗಾಗಿ ಸಿದ್ಧ ಮಾಡಿದ ವಿಷಯಗಳು ಮಾತ್ರ ಪರೀಕ್ಷೆ ಪಾಸಾದರೂ ಅರ್ಥವಾಗಿರಲಿಲ್ಲ, ಈಗಲೂ...
ಪರೀಕ್ಷೆ ಬರೆದು ಪಾಸಾಗುವುದೇ ಸುಲಭ ಅಂತ ಅನ್ನಿಸಲು ಶುರುವಾದದ್ದು ಮಾತ್ರ ೧೦೦ ಪುಟದ ಥೀಸೀಸ್ ಬರೆಯಬೇಕೆಂದು ಹೇಳಿದಾಗ!
ಯಾವುದರ ಬಗ್ಗೆ, ಏನು ಬರೆಯಬೇಕೆಂದೇ ಅರ್ಥವಾಗಲಿಲ್ಲ. ಅದೇ ಹಳೇ ವಿಷಯಗಳಾದ ಪಂಪ, ಬಸವಣ್ಣ, ಕುಮಾರವ್ಯಾಸ, ಕುವೆಂಪು, ಕಾರಂತ - ಇವರ ಕೃತಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು-ಒಂದು ಅಧ್ಯಯನ, ತೌಲನಿಕ ಅಧ್ಯಯನ ಎಂದೆಲ್ಲ ಹಳೆಯ ವಿಷಯಗಳ ಕುರಿತು ಅಧ್ಯಯನ ಮಾಡುವುದು ಯಾಕೋ ನನ್ನ ಮನಸಿಗೆ ಕಿರಿಕಿರಿ. ಹೊಸ ವಿಷಯದ ಬಗ್ಗೆ ಬರೆಯಬೇಕೆಂದು ಬಹಳ ಅನಿಸುತ್ತಿತ್ತು. ಅದೇ ಸಂದರ್ಭದಲ್ಲಿ ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಓದುತ್ತಿದ್ದೆ. ತುಂಬಾ ಇಷ್ಟವಾಯಿತು. ಮಡುವುದಾದರೆ ಜೋಗಿಯವರ ಕೃತಿಗಳ ಬಗ್ಗೇ ಅಂತ ನಿರ್ಧರಿಸಿದೆ. ನಮ್ಮ ಸರ್ ಹತ್ತಿರ ವಿಷಯ ಪ್ರಸ್ತಾಪಿಸಿದೆ. ಅವರು ಬೇರೆ ಬೇರೆ ವಿಷಯ ಹೇಳಿದರೂ ನನಗೆ ಒಪ್ಪಲು ಮನಸ್ಸಾಗಲಿಲ್ಲ.
ಜೋಗಿಯವರೂ ಅವರ ಕೆಲವು ಪುಸ್ತಕ ಕಳುಹಿಸಿಕೊಟ್ಟರು.
ಆದರೆ ನನಗೆ ಹೇಗೆ ಬರೆಯಬೇಕು? ಯಾವ ವಿಷಯ ಮುಖ್ಯವಾಗಿಸಿ ಬರೆಯಬೇಕೆಂದು ಒಂದೂ ತಿಳಿಯಲಿಲ್ಲ. ನಮ್ಮ ಮಾರ್ಗದರ್ಶಕರ ಬಳಿ ಕೇಳಿದರೆ "ನೀವು ಮೊದಲು ಬರೆದು ಮುಗಿಸಿ ಮತ್ತೆ ಅದಕ್ಕೆ ಕಾಮೆಂಟ್ ಮಾಡ್ತೇನೆ" ಎಂದು ಹೇಳಿದರು. ಅದೇ ಸಮಯಕ್ಕೆ ಸರಿಯಾಗಿ ಡೆಲ್ಲಿಗೆ ಬರಬೇಕಾಯಿತು, ನನ್ನ ಉದಾಸೀನವೂ ಸೇರಿತು. ಎಂಫಿಲ್ ಹೆಳೆಯಲ್ಲಿ ಊರಲ್ಲಿ ಎರಡೆರಡು ತಿಂಗಳು ಕಳೆದರೂ ಒಂದು ಅಕ್ಷರ ಮುಂದೆ ಸಾಗಲಿಲ್ಲ. ಡೆಲ್ಲಿಗೆ ಬಂದೆ. ಹಾಗೇ ಎಂಫಿಲ್ ಮೂಲೆಯಲ್ಲಿ ದೂಡುತ್ತಾ ಬಂದೆ.
ಕೊನೆಗೆ ಏಪ್ರಿಲ್‌ಗೆ ಪ್ರಬಂಧ ಕೊಡದೇ ಹೋದರೆ ಕ್ಯಾನ್ಸಲ್ ಆಗುತ್ತದೆ ಎಂಬ ಪತ್ರ ನನ್ನ ಕೈ ಸೇರಿದ ಮೇಲೆ ಚುರುಕುಮುಟ್ಟಿತು. ಇನ್ನು ಮುಗಿಸದೇ ಇದ್ದರೆ ನನಗೇ ಅವಮಾನ ಎಂದು ತೀರ್ಮಾನಿಸಿ ಊರಿಗೆ ಹೋದೆ.
ಮನೆಯಲ್ಲಿದ್ದರೆ ಅವರಿವರನ್ನು ಕಾಮೆಂಟ್ ಮಾಡುತ್ತಾ ತೋಟ ಸುತ್ತಾಡುತ್ತಾ, ನಕ್ಷತ್ರ ಹಣ್ಣು, ಗೇರು ಹಣ್ಣು ತಿನ್ನುತ್ತಾ ಮದುವೆ, ಮುಂಜಿ ಎಟೆಂಡ್ ಮಡುತ್ತಾ ಟೈಮ್ ಹಾಳುಮಾಡುತ್ತಾನೆಂದು ನಾನು ಸೀದಾ ನನ್ನ ಆತ್ಮೀಯ ಗೆಳತಿ ದಿವ್ಯಳ ಮನೆಗೆ ಹೋದೆ. ಜೋಗಿಯವರ ‘ಯಾಮಿನಿ’ ಕಾದಂಬರಿಯ ಹೀರೋ ಚಿರಾಯು ಮೊಬೈಲ್ ರೇಂಜ್ ಸಿಗದ ಕಡೆಗೆ ಹೋಗಿ ಬರೆಯುತ್ತಾನೆ. ಹಾಗೆ ನಾನೂ ಸುಮರು ೨ ತಿಂಗಳು ತಪಸ್ಸಿಗೆ ಕುಳಿತ ಹಾಗೆ ಗೆಳತಿ ಮನೆಯ ಕಂಪ್ಯೂಟರ್ ಮುಂದೆ ಕುಳಿತು ಬರೆಯ ತೊಡಗಿದೆ. ಆಕೆ ಪತಿ ಧನಂಜಯ್ ಸರ್ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಸಹಾಯ ಮಾಡಿದ್ದರು.
ಅದೇನು ಕಾಕತಾಳಿಯವೋ ಗೊತ್ತಿಲ್ಲ! ನಾನು ಜೋಗಿಯವರ ಕೃತಿಗಳನ್ನು ಹಿಡಿದು ಅರ್ಥವಾಗದೇ ಒದ್ದಾಡುತ್ತಿದ್ದಾಗ ಸಮಯ, ಸರಿಯಾಗಿ ಅವರ ಪುಸ್ತಕಗಳಿಗೆ ವಿಮರ್ಶೆ ಬರೆಯ ತೊಡಗಿದ್ದವರು ಹಿರಿಯರಾದ ಬೆಳ್ಮಣ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾದ ಡಾ.ಜನಾರ್ದನ ಭಟ್ ಅವರು. ಸಾಹಿತ್ಯದ ಕುರಿತ ಹಾಗೆ ಅವರಿಗಿರುವ ಪಾಂಡಿತ್ಯ ಜೊತೆಗೆ ಅವರ ಸರಳತನ ನೋಡಿ ಬೆರಗಾಗಿದ್ದೆ. ನನ್ನ ವಿಷಯದ ಕುರಿತ ಹಾಗೆ ತುಂಬ ಸಲಹೆ ನೀಡಿದರು. ನಮ್ಮ ಅಧಿಕೃತ ಮಾರ್ಗದರ್ಶಕರಿಗೆ ಬರೆದ ವಿಷಯವನ್ನು ತೋರಿಸಿ ಓಕೆ ಮಾಡಿಸಿ ಅಂತೂ ಇಂತೂ ನನ್ನ ಕೆಲಸ ಮುಗಿಸಿ ಬಂದೆ.
ನಾನು ಬರೆದದ್ದರಲ್ಲಿ ಹಲವು ತಪ್ಪುಗಳಿರಬಹುದು. ಅದನ್ನೆಲ್ಲ ಮನ್ನಿಸಿ ಹಂಪಿಯವರು ನನಗೆ ಎಂಫಿಲ್ ಪದವಿ ನೀಡಬಹುದೇ ಎಂಬ ನಿರೀಕ್ಷೆಯಲ್ಲಿ ಈಗ ಕಾಯುತ್ತಿದ್ದೇನೆ.
ಈ ಎಲ್ಲ ಕೆಲಸದಿಂದ, ಮನೆಗೆ ಹೋಗಿ ಬಂದ ಕುಶಿಯಿಂದ ಬ್ಲಾಗಿಗೆ ಬರೆಯಲು ಅಕ್ಷರಗಳು ನಿಧಾನವಾಗ ಸಾಗುತ್ತಿದೆ ಎಂಬ ನೆವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

2 comments:

ಸಂದೀಪ್ ಕಾಮತ್ said...

ನಿಮಗೆ ಶೀಘ್ರ ಎಂಫಿಲ್ ಸಿಗಲಿ ಅನ್ನೋ ಹಾರೈಕೆ:)

actually ಚಿರಾಯು ಮೊಬೈಲ್ ರೇಂಜ್ ಸಿಗದ ಕಡೆ ಹೋಗಿದ್ದಲ್ಲ ಅವನು Spice SIM ಹಾಕಿಸ್ಕೊಂಡಿದ್ದನಂತೆ ;)

ಇನ್ನೊಂದು ವಿಷಯ ! ಫೋಟೋ ತೆಗೆಯುವಾಗ ಫೋಟೋಗ್ರಾಫರ್ ನ ನೋಡ್ಬೇಕು ಅಂತ ದೊಡ್ಡೋರು ಹೇಳಿದ್ದಾರೆ:)

ರಾಘವ ಶರ್ಮ said...

God Bless You

Mphil ಖಂಡಿತಾ ಸಿಗುತ್ತೆ...