01 June, 2009

ಫ್ರುಟ್ ಫುಲ್ ಡೆಲ್ಲಿ ವಾಸ...

ದಿಲ್ಲಿಗೆ ಬಂದು ತಪ್ಪು ಮಾಡಿದೆನೋ ಅಂತ ಅದೆಷ್ಟೋ ಸಲ ಅನ್ನಿಸಿತ್ತು. ಗೆಳೆಯ/ತಿ ಯರಿಲ್ಲ, ಊರೂ ಗೊತ್ತಿಲ್ಲ. ಸಹಿಸಲಾಗದ ಸೆಕೆ. ಚಳಿ ಅಂತ ಒದ್ದಾಡುವ ಬದಲು ಮಂಗಳೂರಲ್ಲೇ ಇದ್ದಿದ್ದರೆ ಆರಾಮಾಗಿರಬಹುದಿತ್ತು ಅಂತ. ಆದರೆ ಈ ಹಣ್ಣುಗಳ ರಾಶಿ ನೋಡುವಾಗ ಊರು, ಮನೆ, ಯಾವೂದೂ ನೆನಪಾಗುವುದಿಲ್ಲ. ಕೇವಲ ಅದರ ಸವಿಯಾದ ಸಿಹಿಯಷ್ಟೇ ಬಾಯಲ್ಲಿ ನೀರೂರಿಸುವುದು.

ದಿಲ್ಲಿಯಲ್ಲಿ ಸಾಮಾನ್ಯ ಎಲ್ಲಾ ಸೀಝನ್ ಗೂ ಒಂದೊಂದು ಹಣ್ಣುಗಳು ಖಾಯಂ. ನಾನು ಕಳೆದ ವರ್ಷ ದಿಲ್ಲಿಗೆ ಬಂದಾಗ ಇಲ್ಲಿ ಮಾವಿನ ಹಣ್ಣಿನ ಸಮಯ. ನಮ್ಮ ಊರಿಗಿಂದ ಲೇಟಾಗಿ ಇಲ್ಲಿ ಮಾವಿನ ಹಣ್ಣು ಮಾರ್ಕೆಟ್ಟಿಗೆ ಬರುವುದಾದರೂ ರುಚಿ ಮಾತ್ರ ಅದ್ಭುತ. ನಾನು ಊರಲ್ಲಿದ್ದಾಗಲೂ ತಿನ್ನದಿದ್ದಷ್ಟು ಮಾವಿನ ಹಣ್ಣು ತಿಂದು ಗೊರಟು ಬಿಸಾಡಿದ್ದಿದೆ. ದಿಲ್ಲಿಯ ಪ್ರಗತಿ ಮೈದಾನದಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದ ಮಾವಿನ ಹಣ್ಣಿನ ಮೇಳ ನಡೆಯುತ್ತದೆ. ಅಲ್ಲಿಗೆ ಲಖನೌ, ಕಾನ್ಪುರ, ಉತ್ತರಪ್ರದೇಶ ಹೀಗೆ ಹಲವು ಕಡೆಯ ಸುಮಾರು ೬೦೦ ಕ್ಕೂ ಮಿಗಿಲಿನ ವಿವಿಧ ನಮೂನೆಯ, ಜಾತಿಯ ಹಣ್ಣುಗಳು ನೋಡಲು ಮತ್ತು ದುಡ್ಡುಕೊಟ್ಟರೆ ಸವಿಯಲೂ ಸಿಗುತ್ತದೆ.

ಶಿಮ್ಲಾ, ಮಸ್ಸೂರಿ, ನೈನಿತಾಲ್, ಕಾಶ್ಮೀರ ಹಾಗೇ ಉತ್ತರಪ್ರದೇಶ, ಹರ್ಯಾಣ, ಹೀಗೆ ಚಳಿ ಮತ್ತು ಸೆಕೆ ಎರಡೂ ವತಾವರಣವಿರುವ ಪ್ರದೇಶಕ್ಕೆ ಸೆಂಟರ್ ಪ್ಲೇಸ್ ದಿಲ್ಲಿ. ಆದ್ದರಿಂದ ಇಲ್ಲಿಗೆ ಅಲ್ಲೆಲ್ಲ ಬೆಳೆಯುವ ಹೆಚ್ಚಿನ ಹಣ್ಣು ತರಕಾರಿಗಳು ಬರುತ್ತವೆ. ಹಾಗಾಗಿ ದಿಲ್ಲಿಯಲ್ಲಿ ಕೂತು ತಿನ್ನುವವರಿಗೆ ಪರ್ಮನೆಂಟಾಗಿ ಒಂದಲ್ಲಾ ಒಂದು ಹಣ್ಣುಗಳು.
ಈ ಸಲ ಊರಿಂದ ಬರುವಾಗ ೪೩ ಡಿಗ್ರಿ ಸೆಲ್ಶಿಯಸ್ ನಷ್ಟು ಸೆಕೆ. ಆದರೆ ಫ್ರಿಡ್ಜಲ್ಲಿ ತಂಪಾದ ಬಚ್ಚಂಗಾಯಿ(ಕಲ್ಲಂಗಡಿ). ಇದು ನಮ್ಮ ಊರಲ್ಲೂ ಸಿಗುತ್ತದೆ ಅಂದರೂ ಕೆಜಿಗೆ ೫ ರೂಪಾಯಿಯಂತೆ ಸಿಗಲು ಸಾಧ್ಯವಿಲ್ಲ ಅಲ್ಲವೇ?

ಕಡಿಮೆ ದರಕ್ಕೆ ಸಿಗುವುದರಿಂದ ಹೆಚ್ಚು ರುಚಿ!

ಮೊನ್ನೆ ಮೊನ್ನೆ ಮಾರ್ಕೆಟ್ಟಿಗೆ ಹೋದಾಗ ಅಕಸ್ಮತ್ತಾಗಿ ಕಂಡದ್ದು ಕೆಂಪು ಹಣ್ಣು. ಅದೇನೆಂದು ವಿಚಾರಿಸಿದಾಗ ಗೊತ್ತಾದದ್ದು ಲಿಚೀ! ಮಂಗಳೂರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ನಲ್ಲಿ ನನ್ನ ತಂಗಿಯ ಜೊತೆ ಲಿಚೀ ಫ್ಲೇವರ್ ಇರುವ ಐಸ್ ಕ್ರೀಂ ಒಮ್ಮೆ ತಿಂದಿದ್ದರೂ ರುಚಿ ಗೊತ್ತಾಗಿರಲಿಲ್ಲ. ಇಲ್ಲಿಯ ತನಕ ಕಣ್ಣಿನಿಂದ ನೋಡಿರಲೂ ಇರಲಿಲ್ಲ. ಮನೆಗೆ ತಂದು ತಿಂದಾಗಲೇ ಗೊತ್ತಾದದ್ದು ಅದರ ಅದ್ಭುತ ಸವಿ. ಸುಮಾರಾಗಿ ನಮ್ಮ ಕುಡ್ಲದ ತಾಳಿಬೊಂಡ(ಈರೋಳು)ವನ್ನು ನೆನಪಿಗೆ ತರುವ ಹಣ್ಣು.

ಹಾಗೇ ಇನ್ನೊಂದು ಹಣ್ಣು ಕರ್ಬೂಜ. ಇದರ ಜ್ಯೂಸ್ ಅಂತೂ ಅದ್ಭುತ. ಅದರಲ್ಲೂ ಸನ್ ಮೆಲನ್, ಮಸ್ಕ್ ಮೆಲನ್ ಎಂಬೆಲ್ಲ ವಿಧವಿಧ ಹಣ್ಣುಗಳು. ತುಂಬ ರಸಭರಿತ ಹಣ್ಣು. ಬಾಯಿಗಿಟ್ಟರೆ ಸಾಕು ಹಾಗೇ ಕರಗಿಹೋಗುತ್ತದೆ. ನನ್ನ ಪತಿ ‘ಅದು ಮಸ್ಕ್ ಮೆಲನ್ ಅಲ್ಲ ಮಸ್ತ ಮೆಲನ್’ ಎಂಬ ಹೊಸ ನಾಮಕರಣ ಮಾಡಿದ್ದರು.

ಲಿಚೀ ಮುಗಿದ ಮೇಲೆ ರಸಭರಿತ ಮಾವು ಅದರ ನಂತರ ಪಿಯರ್ ಫ್ರುಟ್. ೯ ನೇ ತರಗತಿಯಲ್ಲಿದ್ದಾಗ ನನ್ನ ಮಾವ ಬಾಂಬೆಯಿಂದ ಬಂದಾಗ ತಂದಿದ್ದರು ಈ ಪಿಯರ್. ಆಗ ಅಜ್ಜಿಮನೆಯಲ್ಲಿ ನಾವು ರಾಶಿ ಮಕ್ಕಳು. ಹಾಗಾಗಿ ನನ್ನ ಒಂದು ಬದಿಯ ಹಲ್ಲಿಗೆ ಮಾತ್ರ ರುಚಿಸಿಗುವಷ್ಟೇ ಸಣ್ಣ ಚೂರು ಸಿಕ್ಕಿತ್ತು. ಆದರೆ ದಿಲ್ಲಿಗೆ ಬಂದ ಮೇಲೆ ಅದನ್ನೂ ಬೇಕಾದಷ್ಟು ತಿಂದಾಯಿತು. ನೋಡಲು ಮಂಗಳೂರಲ್ಲಿ ಸಪ್ಪರ್ ಜೆಲ್ಲಿ, ದಿಲ್ಲಿಯ ಮಾಲ್ ಗಳಲ್ಲಿ ಇಂಡಿಯನ್ ಪಿಯರ್ ಅಂತ ಹೆಸರಿರುವ ಹಣ್ಣಿನಂತೆ ಈ ಪಿಯರ್ ಕೂಡ ಇದೆ. ಆದರೆ ಇದು ತುಂಬ ಮೃದು ಮತ್ತು ಸವಿಯಾದ ಹಣ್ಣು.

ಅಂತೂ ಈ ಹಣ್ಣುಗಳನ್ನೆಲ್ಲ ತಿನ್ನುವಾಗ ನಾನು ದಿಲ್ಲಿಗೆ ಬಂದು ತಪ್ಪು ಮಡಲಿಲ್ಲ ಅಂತನಿಸಿತು. ಊರಲ್ಲಿದ್ದರೆ ಯಾವುದೇ ಹಣ್ಣು ತಿನ್ನುವಾಗಲೂ ಮನೆಯಲ್ಲಿದ್ದವರಿಗೆಲ್ಲ ಕೊಟ್ಟು ನನಗೆ ಸಣ್ಣ ಚೂರೇ ಸಿಗುತ್ತಿತ್ತು. ಆದರೆ ಇಲ್ಲಿ ಮನೆಯಲ್ಲಿ ನಾನೊಬ್ಬಳೇ ಇದ್ದಾಗ ತಂಪಾದ ರುಚಿರುಚಿಯಾದ ಹಣ್ಣು ಇಡಿಇಡಿಯಾಗಿ ಗುಳುಂ....ಮರೆತು ಹೋಗಿತ್ತು ಈ ಪೀಚ್. ದಿಲ್ಲಿಯಲ್ಲಿ ಸಿಗುವ ಮತ್ತೊಂದು ಹಣ್ಣು. ಈ ಮೊದಲು ಇಂಥ ಹಣ್ಣು ಸವಿಯದ ಕಾರಣ ಹೋಲಿಕೆ ಗೊತ್ತಾಗುತ್ತಿಲ್ಲ.
ಆದರೂ.............


ನಕ್ಷತ್ರನೇರಳೆ, ಪನ್ನೇರಳೆ, ಜಂಬೂನೇರಳೆ, ತಾಳಿಬೊಂಡ, ಕುಂಟಲಹಣ್ಣು, ಮುಳ್ಳಂಕಾಯಿ ಬೇಕೆನಿಸಿದರೆ ಏನುಮಾಡಲಿ?

24 May, 2009

ಕಾಡಿನ ಕತೆಯೊಂದಿಗೆ ಹಾಜರಾದ ಜೋಗಿ...

ಜೋಗಿಯವರ ಅದ್ಭುತ ಕತಾಶೈಲಿಯಿಂದ ಹೊಮ್ಮಿದ ಮತ್ತೊಂದು ಹೊಸ ಕಾದಂಬರಿ ‘ಚಿಟ್ಟೆ ಹೆಜ್ಜೆ ಜಾಡು’. ಕಾಡಿನ ಜಾಡು ಹಿಡಿದು ಹೊರಟ ಕತೆ.
ಮರ ಹೆಮ್ಮರವಾಗಿ ಅದರ ರೆಂಬೆ ಕೊಂಬುಗಳೆಲ್ಲ ಬೆಳೆದು ದೊಡ್ಡದಾದರೂ ಅದು ಗಟ್ಟಿಯಾಗಿ ನಿಂತಿರುವುದು ಮಾತ್ರ ಅದರ ಬೇರನ್ನು ಹಿಡಿದು. ಅಂತೆಯೇ ಜೋಗಿಯವರು ಬೆಂಗಳೂರಿನ ಕಾಂಕ್ರೀಟ್ ಕಾಡಿನ, ಕೆಲಸದ ಒತ್ತಡಗಳ ಮಧ್ಯೆ ಇದ್ದರೂ ಅವರ ಬರವಣಿಗೆಯ ತುಡಿತವಿರುವುದು, (ಮೂಲವಿರುವುದು) ಅವರು ಹುಟ್ಟಿದ ಪರಿಸರದಲ್ಲೇ. ಆದ್ದರಿಂದಲೇ ಕಾಡಿನ ಕತೆಗಳನ್ನುನ್ನು ಅಷ್ಟು ನವಿರಾಗಿ, ಸಮರ್ಥವಾಗಿ ಲೇಖಕನಿಗೆ ಬರೆಯಲು ಸಾಧ್ಯವಾದುದು.
‘ಕಾಡಿನ ಕತೆ’ ‘ನದಿಯ ನೆನಪಿನ ಹಂಗು’ವಿನಂತೆ:
ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಆರಂಭವಾಗುವುದೇ ಉಪ್ಪಿನಂಗಡಿಯ ನಿರಂಜನ ಎಂಬವನ ಸಾವಿನ ಅಥವಾ ಕೊಲೆಯ ಗೊಂದಲದಿಂದ. ಮುಂದೆ ಕತೆ ಪೂರ್ತಿ ಆತನ ಸಾವಿನ ಸುತ್ತಲೇ ಸುತ್ತುತ್ತಿರಬಹುದೆಂದು ಓದುಗ ತಿಳಿದಿದ್ದರೆ ಅದು ಅವರ ದಡ್ಡತನವಷ್ಟೇ. ಕೊಲೆಯ/ಸಾವಿನ ವಿಷಯವನ್ನು ಆರಂಭದಲ್ಲಿ ಓದುಗರ ತಲೆಯೊಳಗೇರಿಸಿ, ಮುಂದೆ ಕತೆ ಹಲವು ನೈಜ ಘಟನೆಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಅಂತೆಯೇ ‘ಚಿಟ್ಟೆ ಹೆಜ್ಜೆ ಜಾಡು’ ಕೂಡಾ. ನಾಪತ್ತೆಯಾದ ಮೂವರನ್ನು ಮುಂದಿಟ್ಟು ಕತೆ ಕಾಡಿನೊಳಗಿನ ಸತ್ಯಗಳನ್ನು ಓದುಗರ ಮುಂದೆ ತೆರೆದಿಡುವಲ್ಲಿ ಸಮರ್ಥವಾಗಿದೆ.
ಪಶ್ಚಿಮ ಘಟ್ಟದ ಕಾಡಿನ ನಡುವೆ ನಡೆಯುವ ಕತೆ. ಕಾಡಿನಲ್ಲಿ ಕಳೆದು ಹೋದ ಮೂವರನ್ನು ಹುಡುಕುವ ನೆಪದಲ್ಲಿ ಬಂದ ನಿರೂಪಕನಿಗೆ ಕಾಡಿನ ಒಳಗಿನ ಮರ್ಮ ತಿಳಿಯುತ್ತದೆ.ಆರಂಭದಲ್ಲಿ ಪ್ರೀತಿಯ ವಿಷಯಕ್ಕೆ ಒಬ್ಬನನ್ನು ಕೊಲೆ ಮಾಡಲು ಉಳಿದಿಬ್ಬರ ಸಂಚಿನಿಂದ ಮೂವರು ಕಾಡಿಗೆ ಆಮಮಿಸಿ ನಾಪತ್ತೆಯಾದರು ಎಂಬ ಸೂಚನೆ. ಓದುತ್ತಾ ಓದುತ್ತಾ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಎಂಎ ಮಾಡುತ್ತಿರುವ ಹಾಗೂ ತೀವ್ರವಾದ ಪರಿಸರ ಪ್ರೇಮಿ ತನ್ವಿಯನ್ನು ಹುಡುಕಲು ಕಾಡಿಗೆ ಹೊರಟು ಬಂದವರೆಂಬ ಮಾಹಿತಿ, ಕೊನೆಗೆ ಕಂಬಳಿ ಹುಳದ ಬಾಯಿಗೆ ತುತ್ತಾದರೋ ಎಂಬ ಅನುಮಾನ. ಇದನ್ನು ಓದುವಾಗ ಕೇವಲ ಕಂಬಳಿ ಹುಳ ಮನುಷ್ಯರನ್ನು ಮುಕ್ಕಿ ತಿನ್ನಬಹುದೇ ಎಂಬ ಧಿಗಿಲುಂಟಾಗುತ್ತದೆ.
ಆದರೆ ಇದೆಲ್ಲಕ್ಕಿಂತ ಬೇರೆಯೇ ಆದ ಬಲವಾದ ಕಾರಣ ಇದೆ. ಅದೇ ಬಂಡವಾಳಶಾಹೀ ದೋರಣೆ. ಬಂಡವಳಶಾಹೀ ನೀತಿ ಮಾನವ ಜೀವನದ ಕಣಕಣದಲ್ಲೂ ಗೋಚರಿಸಿತ್ತಿರುವ ಇಂದಿನ ದಿನಗಳಲ್ಲಿ ಯಾರ ಹಂಗೂ ಇಲ್ಲದೆ ಮರ, ಗಿಡ, ಕಾಡು, ಪ್ರಾಣಿ, ಪಕ್ಷಿ, ಚಿಟ್ಟಗಳಿರುವ ಸುಂದರ, ಸ್ವಚ್ಛಂದವಾದ ಪರಿಸರ, ವಾತಾವರಣವನ್ನು ಬಿಟ್ಟೀತೇ?
ಭಾರತದ ನದಿಗಳನ್ನೆಲ್ಲ ಜೋಡಿಸುವ ನ್ಯಾಷನಲ್ ಲಿವರ್ ಲಿಂಕ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬರುವ ನೇತ್ರಾವತೀ-ಹೇಮಾವತಿ ಯೋಜನೆಯನ್ನು ಕಾರ್ಯಗತಗೊಳಿಸಲು ಬಂದಿರುವ ನೆದರ್ಲ್ಯಾಂಡ್ ಸಂಸ್ಥೆಯವರ ಕೈವಾಡವಿರುವ ಸ್ಪಷ್ಟ ಸೂಚನೆ ದೊರೆಯುತ್ತದೆ. ಈ ಯೋಜನೆಯ ವಿರುದ್ಧ ಹೋರಾಡಲು ಹೋದ ತನ್ವಿ ನೀರಿನ ಸೆಳೆತದ ವಿರುದ್ಧ ದಿಕ್ಕಿಗೆ ಈಜಾಡಲು ಹೋಗಿ ಕೊಚ್ಚಿಹೋದಂತೆ ಮಾಯವಾದಳು ಎಂಬ ಸೂಚನೆ ಕಾದಂಬರಿಕರ ಮುಂದಿಡುತ್ತಾನೆ. ಆಕೆಯನ್ನು ಹುಡುಕಲು ಬಂದ ಮೂವರೂ ನಿಗೂಢವಾಗಿ ನಾಪತ್ತೆಯಾಗುತ್ತಾರೆ. ಕಾಡಿನ ಒಳಗೆ ಹಾಗೂ ಅದರ ಸುತ್ತಲಿನ ಪರಿಸರದ ಆಗುಹೋಗುಗಳನ್ನು ಅಂತಾರಷ್ಟ್ರೀಯ ಸಂಸ್ಥೆಯವರಿಗೆ ತಿಳಿಸಲು ಪಟ್ಟಣದ, ಮನುಷ್ಯರ ಸಹವಾಸವೇ ಬೇಡವೆಂದು ಕಾಡಿನೊಳಗೆ ಮನೆಮಾಡಿ ಕುಳಿತಿರುವಂತೆ ಕಾಣಿಸಿಕೊಳ್ಳವ, ಗುಢಾಚಾರದ ಕೆಲಸ ಮಡುವ ಭೋಜರಾಜ. ಆದರೆ ಈ ಎಲ್ಲ ವಿವರಗಳೇ ಅಂತಿಮ ಸತ್ಯವೆಂದು ಎಲ್ಲೂ ಕಾದಂಬರಿಕಾರ ಹೇಳಿಕೊಳ್ಳವುದಿಲ್ಲ. ಓದುಗರ ಗಮನಕ್ಕಷ್ಟೇ ತರುವ ಕೆಲಸವಿದೆ.
ಫಾರೆಸ್ಟ್ ಆಫೀಸರ್ ವಾಗ್ಲೆ, ಅಲ್ಲೇ ನೌಕರಿಯಲ್ಲಿರುವ ಮುಗ್ಧನಂತೆ ನಟಿಸುವ ಸಾಂತು, ಕೃಷ್ಣಪ್ಪ, ಫಾರಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ನೌಕರಿಗಾಗಿ ಹಪಹಪಿಸುವ ಕೆಂಚ ಇವರೆಲ್ಲರ ಬದುಕೂ ಸುಂದರ ಪ್ರಕೃತಿತಂತೆ ಗೋಚರಿಸುವ ಕಾಡಿನೊಳಗೆ ನಡೆಯುವ ಕೆಟ್ಟ ರಾಜಕೀಯದಲ್ಲಿ ಲೀನವಾದುದು ಎಂಬ ಅಂತಿಮ ಸತ್ಯ ನಿರೂಪಕನಿಗೂ ಓದುಗರಿಗೂ ಅರ್ಥವಾಗುತ್ತದೆ.
ಕಾದಂಬರಿಯ ಕೊನೆಯ ಹಂತದಲ್ಲಿ ಬರುವ ಮುಧೋಳ ನಾಯಿ ಮತ್ತು ನಿರೂಪಕನ ನಡುವೆ ನಡೆಯುವ ಸಂಘರ್ಷವಂತೂ ಅದ್ಭುತ ರೋಚಕತೆಗೆ ಹಿಡಿದ ಕನ್ನಡಿ.
ಕೊನೆಗೂ ಕಾದಂಬರಿ ಓದುಗರನ ಮುಂದೆ ಹಲವು ನಿಗೂಢಗಳಿಗೆ ಅರ್ಥ ಕಲ್ಪಿಸದೆ ಮುಗಿದುಬಿಡುತ್ತದೆ.
ಕಾದಂಬರಿ ಓದುತ್ತಿದ್ದರೆ ಬೇಡವೆಂದರೂ ತೇಜಸ್ವಿಯವರ ಬರಹಗಳು ನೆನಪಿಗೆ ಬರುತ್ತವೆ. ಜೋಗಿಯವರದೇ ಆದ ‘ರಾಯಭಾಗದ ರಹಸ್ಯ ರಾತ್ರಿ’ ಕಥಾ ಸಂಕಲನದಲ್ಲಿರುವ ರೋಚಕ ಕತೆಗಳು ಮನಸೊಳಗೆ ಮುತ್ತಿಡುತ್ತವೆ.
"ತುಂಬಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚಂದ್ರ ಸೂರ್ಯನಾಗಿರುತ್ತಿದ್ದ." ಇಂತಹ ಸುಂದರ ಸಾಲುಗಳು ಅಲ್ಲಲ್ಲಿ ಓದುಗರಿಗೆ ಮುದನೀಡುತ್ತದೆ.
ನಿರೂಪಕ ಆತನ ಗೆಳೆಯ ಶಿವು, ಫಾರೆಸ್ಟ ಡಿಪಾರ್ಟ್‌ಮೆಂಟಿನಲ್ಲಿ ಸಣ್ಣ ಹುದ್ದೆಯಲ್ಲಿರುವ ಸಾಂತು ಆತನ ಗೆಳೆಯ ಕೆಂಚ ಇವರೆಲ್ಲ ಕಳೆದು ಹೋದ ಮೂವರನ್ನು ಹುಡುಕುತ್ತಾ ಕಾಡಲ್ಲಿ ಸಾಗುತ್ತಿದ್ದಂತೆ ಅವರ ಹಿಂದಿನಿಂದ ಕಾಡಿನಲ್ಲಿ ನಾವೂ ಸಾಗುತ್ತಿದ್ದೇವೆಯೇನೋ ಎಂಬಷ್ಟರ ಮಟ್ಟಿಗೆ ಕಾಡಿನ ವರ್ಣನೆ ಆಪ್ತವಾಗಿದೆ.

ಅಂತಿಮ ಸಂದೇಶ: ಕೊನೆಗೂ ಕಾದಂಬರಿ ಓದಿದ ಮೇಲೆ ನಮಗೆ ನೀಡುವ ಸಂದೇಶವೇನು ಎಂಬುದು ಕಾದಂಬರಿಯ ಸಾಲುಗಳಲ್ಲೇ ಓದಿ. "ಜಾಗತೀಕರಣ ನಮ್ಮ ಕಲೆಗಳನ್ನೂ ಸಾಹಿತ್ಯವನ್ನೂ ಭಾಷೆಯನ್ನೂ ಕೊಲ್ಲವ ಹಾಗೆ. ನಮ್ಮ ಚಟುವಟಿಕೆಗಳನ್ನೂ ನಿಯಂತ್ರಿಸತೊಡಗುತ್ತದೆ. ನಮ್ಮ ಸಹಜ ಉಲ್ಲಾಸ, ಪ್ರತಿಭಟನೆ, ಸಾತ್ವಿಕ ಸಿಟ್ಟು, ಕಾಡಿನ ಪ್ರೀತಿ ಕೂಡ ಯಾರದೋ ಪಾಲಿಗೆ ಪ್ರಾಣಕಂಟಕವಾಗಿ ಕಾಣಿಸುತ್ತದೆ."

"ಇನ್ನು ಬರೆಯುವುದಿಲ್ಲ ಎಂಬ ಆಶ್ವಾಸನೆ ಪದೇ ಪದೇ ಸುಳ್ಳಾಗಿದೆ" ಎಂದು ಜೋಗಿಯವರು ತಮ್ಮ ‘ರಾಯಭಾಗದ ರಹಸ್ಯ ರಾತ್ರಿ' ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಹಾಗೇ "ಕಾಡಿನ ಕತೆಗಳ ಸರಣಿಯಲ್ಲಿ ಇದು ಕೊನೆಯದು" ಎಂಬ ಅವರ ಈ ಹೇಳಿಕೆಯೂ ಆಶ್ವಾಸನೆಗಷ್ಟೇ ಸೀಮಿತವಾಗಿರಲಿ ಎಂದು ನಾವು ಬಯಸೋಣವೇ?

18 May, 2009

ಕತೆ ಫೋಟೋಗ್ರಾಫ್ ಇದ್ದಹಾಗೆ, ಕಾದಂಬರಿ ವೀಡಿಯೋ ಇದ್ದಹಾಗೆ_ ಎಂದ ಬರಹಗಾರ

1. ನಿಮ್ಮ ಪ್ರಕಾರ ಕತೆ ಅಂದರೇನು? ಕತೆ ಹುಟ್ಟುವ ಕ್ಷಣ ಯಾವುದು?
_ ಕತೆ ಅಂದರೆ ಬದುಕು, ಪ್ರೀತಿಸುವ ಕ್ರಮ, ಬದುಕುವ ರೀತಿ, ಅರ್ಥವಾಗದೇ ಇರುವುದನ್ನು ಅರ್ಥಮಾಡಿಕೊಳ್ಳವ ವಿಧಾನ. ಬದುಕು ಸಾಮಾನ್ಯವಾಗಿ ವರದಿಗಳಲ್ಲಿ ತೆರೆದುಕೊಳ್ಳತ್ತದೆ. ಅಲ್ಲಿ ಹೀಗಾಯಿತು, ಇಂಥ ಸಂಗತಿ ನಡೆಯಿತು ಎಂದು ನಾವು ಪರಿಚಿತರ ಬಳಿ ಹೇಳಿಕೊಳ್ಳತ್ತೇವೆ. ನಾನು ಚೆನ್ನಾಗಿದ್ದೇನೆ, ಮದುವೆಯಾಯ್ತು. ಮೂರು ಮಕ್ಕಳು, ಮೊದಲನೆ ಮಗಳಿಗೆ ನಾಡಿದ್ದು ಮದುವೆ ಎಂದು ನಮ್ಮ ಸಂಪರ್ಕದಲ್ಲಿರುವ ಮಂದಿಗೆ ಹೇಳುತ್ತೇವೆ. ಅದು ಕೂಡ ವರದಿಯೇ. ಆದರೆ ಅದರ ಹಿಂದಿನ ತುಮುಲ, ತಲ್ಲಣಗಳನ್ನು ಸಂತೋಷ ಮತ್ತು ಉಲ್ಲಾಸಗಳನ್ನು ನಾವು ತೀರಾ ಆತ್ಮೀಯರ ಜೊತೆಗಷ್ಟೆ ಹಂಚಿಕೊಳ್ಳತ್ತೇವೆ. ಆಪ್ತರಿಗಷ್ಟೇ ಅದು ದಾಟಿಕೊಳ್ಳತ್ತದೆ.
ಕತೆಯೆಂದರೆ ಅಂತದ್ದೊಂದು ಸಂತೋಷವನ್ನು, ನೋವನ್ನು ಒಳಗುದಿಯನ್ನು ಎಲ್ಲರಿಗೂ ದಾಟಿಸುವ ರೀತಿ. ಅದು ಕಲೆಯಾದಾಗ ಅಲ್ಲಿ ನಾವು ಮಾಯವಾಗಿ ಓದುಗ ತನ್ನನ್ನು ತಾನು ಕಂಡುಕೊಳ್ಳತ್ತಾನೆ. ನನಗೂ ನನ್ನ ಹೆಂಡತಿಗೂ ಜಗಳವಾಯಿತು ಅಂದರೆ ಅದು ಮಾಮೂಲು ಸಂಗತಿ. ರುದ್ರಪಟ್ಟಣದ ಶರಶ್ಚಂದ್ರನೂ ಅವನ ಹೆಂಡತಿ ಮನೋರಮೆಯೂ ಅವತ್ತು ಬೆಳ್ಳಂಬೆಳಗ್ಗೆ ಶರಂಪರ ಬೈದಾಡಿಕೊಂಡರು ಎಂದರೆ ಅದು ಕತೆ.
ಕತೆ ಹುಟ್ಟುವ ಕ್ಷಣದ ಬಗ್ಗೆ ನನಗೆ ಗೊತ್ತಿಲ್ಲ. ಸುಮ್ಮನಿದ್ದಾಗಲೊ ತುಂಬ ಬಿಜಿಯಾಗಿದ್ದಾಗಲೊ ಮನಸ್ಸಿಗೆ ಸಾಲು ಹೊಳೆಯುತ್ತದೆ. ಎಂದೋ ಕಂಡದ್ದು, ಅರ್ಥಮಾಡಿಕೊಳ್ಳಲಾಗದೇ ಇದ್ದದ್ದು ಮನಸ್ಸಿನ ಮುಂದೆ ಪ್ರತ್ಯಕ್ಷವಾಗುತ್ತದೆ. ಅದು ಹಾಗಾಗದೇ ಇರಬಹುದು. ಸುಮ್ಮನೆ ಕೂತು ಏಕಾಂತವನ್ನು ಆನಂದಿಸುವುದಕ್ಕೆಂದೂ ನಾನು ಬರೆದದ್ದಿದೆ. ಅದಕ್ಕೊಂದು ಕ್ಷಣ ಬೇಕೆಂದು ನನಗನಿಸಿಲ್ಲ.
2. ಸಣ್ಣಕತೆ ಮತ್ತು ಕದಂಬರಿ ಇವುಗಳ ನಡುವಿನ ವ್ಯತ್ಯಾಸವೆನು? ನಿಮ್ಮ ಬರವಣಿಗೆಯ ಹಿನ್ನೆಲೆಯಿಂದ ಹೇಳಿ.
_ ನನ್ನ ಪ್ರಕಾರ ಸಣ್ಣಕತೆ ಮತ್ತು ಕಾದಂಬರಿಗೆ ಅಂತ ವ್ಯತ್ಯಾಸವೇನೂ ಇಲ್ಲ. ಒಂದು ಕ್ಷಣಭಂಗುರವನ್ನು ಹಿಡಿದಿಡುತ್ತದೆ. ಇನ್ನೊಂದು ಅನಂತದತ್ತ ಕೈಚಾಚುತ್ತದೆ. ಕತೆ ಫೋಟೋಗ್ರಾಫ್ ಇದ್ದ ಹಾಗೆ, ಕಾದಂಬರಿ ವೀಡಿಯೋ ಇದ್ದ ಹಾಗೆ. ನನ್ನ ಕತೆಗಳಲ್ಲಿ ಕಾದಂಬರಿಯ ಛಾಯೆ, ಕಾದಂಬರಿಯಲ್ಲಿ ಕತೆಯ ಕ್ಷಣಿಕತೆ ಕಾಣಿಸೀತು. ನಾನು ಕತೆಯೆಂದು ಆರಂಭಿಸಿದ್ದು ಕಾದಂಬರಿಯಾದದ್ದೂ ಇದೆ, ಕಾದಂಬರಿ ಬರೆಯಬೇಕೆಂದುಕೊಂಡದ್ದು ಕತೆಯಾಗಿ ಮುಗಿದದ್ದೂ ಇದೆ.
3. ನೀವು ಮೆಚ್ಚುವ ಕತೆಗಾರ ಯಾರು? ಯಾಕೆ?
_ ನಾನು ತುಂಬ ಮೆಚ್ಚುವ ಕತೆಗಾರ ಲಂಕೇಶ್. ಅವರು ಸುಮ್ಮನೆ ಕತೆಗಳನ್ನು ಹೇಳತ್ತಾ ಹೋದರು. ಅವರ ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಗಿಳಿಯು ಪಂಜರದೊಳಿಲ್ಲ, ನಾನಲ್ಲ, ಒಂದು ಬಾಗಿಲು, ಕಲ್ಲು ಕರಗುವ ಸಮಯ ಮುಂತಾದ ಕತೆಗಳಲ್ಲಿ ಏನನ್ನೂ ಹೇಳದೆ ಎಲ್ಲವನ್ನೂ ಒಳಗೊಳ್ಳತ್ತಾರೆ. ಅವರಷ್ಟೇ ನಾನು ಮೆಚ್ಚುವ ಮತ್ತೊಬ್ಬ ಕತೆಗಾರ ತೇಜಸ್ವಿ, ಅವರು ಕೂಡ ಭಾರವಿಲ್ಲದೆ ಕತೆ ಹೇಳುತ್ತಾರೆ, ಲವಲವಿಕೆಯಿಂದ ಹೇಳತ್ತಾರೆ. ಇಂಥದ್ದೇ ಹೇಳಬೇಕೆಂಬ ಪೂರ್ವಾಗ್ರಹವಿಲ್ಲದೆ ಹೇಳತ್ತಾರೆ. ಹಾಗೆ ಹೇಳವುದೇ ನನಗಿಷ್ಟ.
4. ನೀವು ಮೆಚ್ಚುವ ಕಾದಂಬರಿಕಾರ ಯಾರು?
_ ಕಾದಂಬರಿಕಾರರ ಪೈಕಿ ನನಗೆ ಕುವೆಂಪು ಅಚ್ಚುಮೆಚ್ಚು. ಅವರ ಕಾನೂರ ಹೆಗ್ಗಡತಿ ನನಗೆ ಆಲ್ ಟೈಮ್ ಫೇವರೇಟ್. ಕಾನೂರ ಹೆಗ್ಗಡತಿ ನನ್ನನ್ನು ಮತ್ತೊಂದು ಬದುಕಿಗೆ ಪರಿಚಯಿಸಿದ ಕೃತಿ. ಅದು ಅಚ್ಚಗನ್ನಡದ ಕಾದಂಬರಿ ಎಂಬ ಕಾರಣಕ್ಕೂ ನನಗಿಷ್ಟ. ಹಾಗೇ ಬೌದ್ಧಿಕ ಕಾರಣಕ್ಕೆ ನನಗೆ ಅನಂತಮೂರ್ತಿ ಇಷ್ಟ. ಅವರ ಅವಸ್ಥೆ ಕಾದಂಬರಿಯನ್ನು ನಾನು ಮತ್ತೆ ಮತ್ತೆ ಓದಿ ಸಂತೋಷಪಟ್ಟಿದ್ದೇನೆ. ಈಗ ಥಟ್ಟನೆ ಹೇಳಿದಾಗ ಹೊಳೆಯುವ ಮತ್ತೊಂದು ಕಾದಂಬರಿ ಕರ್ವಾಲೋ. ಅದು ಅಪೂರ್ವ ಪಾತ್ರ ಸೃಷ್ಟಿಗೆ ಸಾಕ್ಷಿ.

5. ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಇದೆಯೇ?
_ ಸಾಮಾಜಿಕ ಜವಾಬ್ದಾರಿ ಯಾರಿಗಿಲ್ಲ. ಆದರೆ ಆ ಹೆಸರೇಕೋ ನನಗೆ ಅಲರ್ಜಿ. ಸಮಾಜದಲ್ಲಿ ಬದುಕುವ ಎಲ್ಲರೂ ಎಲ್ಲರ ಸಂತೋಷಕ್ಕೂ ಜವಾಬ್ದಾರರೇ. ಸಾಹಿತಿಗಳು ತಾವೇನೋ ಮಹಾ ವ್ಯಕ್ತಿಗಳು ಎಂದು ಭಾವಿಸಬೇಕಿಲ್ಲ. ಉಳಿದವರಷ್ಟೇ ಅವರೂ ಬಾಧ್ಯರು. ಅವರಿಗೆ ಬರೆಯುವ ಶಕ್ತಿ ಇದೆ, ಬರೆಯುತ್ತಾರೆ. ಹೀಗಾಗಿ ಅವರ ಅಭಿಪ್ರಾಯಗಳು ಎಲ್ಲರನ್ನೂ ತಲಪುತ್ತವೆ, ಅಷ್ಟೇ ವ್ಯತ್ಯಾಸ.

6. ವರ್ತಮಾನದ ಸಾಹಿತ್ಯದ ಗತಿ ಹೇಗಿದೆ? ಅದರ ಗುಣಮಟ್ಟ ಯಾವ ರೀತಿಯಲ್ಲಿದೆ? ಓದುಗರಿಗೆ ಹೇಗೆ ತಲುಪುತ್ತಿದೆ?
_ ನನ್ನ ಪ್ರಕಾರ ರಂಜನೆಗಾಗಿ ಸಾಹಿತ್ಯ, ನೆಮ್ಮದಿಗಾಗಿ ಸಾಹಿತ್ಯ, ಬದಲಾವಣೆಗಾಗಿ ಸಾಹಿತ್ಯ ಎಂಬ ಮೂರು ವರ್ಗಗಳಿವೆ. ಈ ಮೂರೂ ಮುಖ್ಯವೇ, ನಾನು ಮೂರನ್ನೂ ಮೆಚ್ಚುತ್ತೇನೆ. ಆದರೆ ನಾನೀಗ ಓದುವುದು ನೆಮ್ಮದಿಗಾಗಿ. ಮನಸ್ಸನ್ನು ಹದಗೊಳಿಸುವುದಕ್ಕಾಗಿ. ಚಕಿತಗೊಳಿಸುವ, ಬೆರಗಾಗಿಸುವ ಕೌತುಕವನ್ನು ಉಳಿಸುವ ಸಾಹಿತ್ಯ ನಂಗಿಷ್ಟ. ಅದೇ ಕಾರಣಕ್ಕೆ ತೇಜಸ್ವಿ ಮೆಚ್ಚುಗೆಯಾಗುತ್ತಾರೆ.
ರಂಜನೆಗಾಗಿ ಓದಿದವರ ಪೈಕಿ ಟಿ.ಕೆ. ರಾಮರಾವ್ ಅಚ್ಚುಮೆಚ್ಚು. ಪರಿವರ್ತನೆಯ ಹಾದಿಯನ್ನು ಕ್ರಮಿಸಿದವರ ಪೈಕಿ ನಮ್ಮ ವಚನಕಾರರು ಮತ್ತು ಈ ಕಾಲದ ದೇವನೂರು ಮಹಾದೇವ, ತುಂಬಾಡಿ ರಾಮಯ್ಯ, ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮುಂತಾದವರಿ ಇಷ್ಟ.
ಈಗಲೂ ನಾನು ನೆಮ್ಮದಿಗಾಗಿ ಓದುವುದು ವಿವೇಕ ಶಾನುಭಾಗ, ಸತ್ಯನಾರಾಯಣ, ಜಯಂತ ಕಾಯ್ಕಿಣಿ ಮುಂತಾದವರನ್ನು.

7. ಬಂಡವಾಳಶಾಹಿಯ ಇವತ್ತಿನ ಸಮಾಜದಲ್ಲಿ ಸಾಹಿತಿಯ ಪಾತ್ರವೇನು?
_ ಆರ್ಥಿಕ ಬದಲಾವಣೆಗೂ ಸಾಹಿತ್ಯಕ್ಕೂ ಸಂಬಂಧವಿಲ್ಲ. ಅಂಥ ಚಳವಳಿಗಳನ್ನೆಲ್ಲ ಸಾಹಿತ್ಯದಲ್ಲಿ ತರಲು ಹೊರಟರೆ ಸಾಹಿತ್ಯ ಪ್ರಣಾಳಿಕೆಯಾಗುತ್ತದೆ. ಸಾಹಿತ್ಯ ಯಾವುದನ್ನು ಅಂಟಿಸಿಕೊಳ್ಳದೆ ಎಲ್ಲವನ್ನು ಒಳಗೊಂಡಿರಬೇಕು. ವಿವೇಕ ಶಾನುಭಾಗರ ‘ಹುಲಿ ಸವಾರಿ’ ಕತೆಯಂತಿರಬೇಕು. ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯಲ್ಲಿ ಮಂದಣ್ಣ ಮತ್ತು ಕರ್ವಾಲೋ ಎಂಬ ಎರಡು ಪಾತ್ರಗಳಿವೆ. ಈ ಪಾತ್ರಗಳನ್ನು ಎದುರು ಬದುರು ನಿಲ್ಲಿಸಿದಾಗ ನಿಚ್ಚಳವಾಗುವ ಜಗತ್ತು ಸಾಹಿತ್ಯದಲ್ಲಿ ಮಾತ್ರ ಸಾಧ್ಯ ಎಂಬ ನಂಬಿಕೆ.

8. ಮಾಧ್ಯಮಗಳ ಮೇಲೆ ನಿಯಂತ್ರಣ ಬೇಕಾ?
_ ಮಾಧ್ಯಮದ ಮೇಲೆ ನಿಯಂತ್ರಣ ಇರಬೇಕು ಎಂದು ಎಷ್ಟೋ ಬಾರಿ ಅನಿಸುತ್ತದೆ. ವ್ಯಕ್ತಿಗಳ ಖಾಸಗಿ ಬದುಕನ್ನು ಬಹಿರಂಗವಾಗಿಸುವ ರೀತಿ ಆಕ್ಷೇಪಣೀಯ. ಒಬ್ಬ ವ್ಯಕ್ತಿಯ ಅವಮಾನದ ಕ್ಷಣವನ್ನು, ಸಂಕಟವನ್ನು ಮಾಧ್ಯಮ ಪ್ರತಿಬಿಂಬಿಸಬಾರದು. ಅದು ಕಲೆ ಮತ್ತು ಸಾಹಿತ್ಯದ ಕೆಲಸ. ಹೆಂಡತಿ ಸುಟ್ಟು ಸತ್ತಾಗ, ಮಗ ಯುದ್ಧದಲ್ಲಿ ಸತ್ತಾಗ ನಿಮಗೇನನ್ನಿಸುತ್ತದೆ ಎಂದು ಕೇಳುವುದು ಅಮಾನವೀಯ. ಕಲೆಗಿರುವ ಮಾನವೀಯ ಗುಣವನ್ನು ಮಾಧ್ಯಮ ಕಳಕೊಂಡಿದೆ.

9. ದೃಶ್ಯ ಮಾಧ್ಯಮದಲ್ಲಿ ತಾವು ಮಾಡಿದ ಕೆಲಸಗಳ ವಿವರ?
_ ನಾನು ಒಂದಷ್ಟು ಸೀರಿಯಲ್ಲುಗಳಿಗೆ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದೇನೆ. ಮೂರು ಸಿನೆಮಾಗಳಿಗೆ ಕೆಲಸ ಮಾಡಿದ್ದೇನೆ. ನಾನು ಚಿತ್ರಕತೆ, ಸಂಭಾಷಣೆಬರೆದ ಮೊದಲ ಟಿವಿ ಧಾರಾವಾಹಿ ಶಿಕಾರಿ. ಕತೆ, ಚಿತ್ರಕತೆ, ಸಂಭಾಷಣೆ ಬರೆದ ಧಾರಾವಾಹಿ ಸುಮಾರಿ ಇಪ್ಪತ್ತು. ಅವುಗಳಲ್ಲಿ ಜನಪ್ರಿಯವಾದವು ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇ ಬರುತಾವ ಕಾಲ, ಮನೆಯೊಂದು ಮೂರು ಬಾಗಿಲು, ಶರಪಂಜರ, ಭೆಳ್ಳಿ ತೆರೆ, ಕಲ್ಯಾಣಿ, ಯಜ್ಞಕುಂಡ...
ಸಿನೆಮಾಗಳು ಅನಂತಮೂರ್ತಿ ಕತೆ ಆಧರಿಸಿದ ಮೌನಿ, ಕಾಡ ಬೆಳದಿಂಗಳು, ಕೇರಾಫ್ ಫುಟ್‌ಪಾತ್
10. ದೃಶ್ಯ ಮಾಧ್ಯಮದ ಬಗೆಗೆ ಸೆಳೆತ ಬೆಳೆಯಲಿ ಕಾರಣ?
_ ಟಿವಿ ಧೃಶ್ಯ ಮಾಧ್ಯಮಕ್ಕೆ ಸೆಳೆತ ಮುಖ್ಯವಾಗಿ ಹಣ ಮತ್ತು ಗೆಳೆಯರ ಓತ್ತಾಯ. ಇವತ್ತಿಗು ಅದನ್ನು ನಾನು ಸಾಹಿತ್ಯಕ ಕ್ರಿಯೆ ಎಂದು ಭಾವಿಸಿಲ್ಲ. ಅದೊಂದು ಗುಮಾಸ್ತಗಿರಿ ಅಷ್ಟೇ. ಸಿನೆಮಾ ಸಾಹಿತ್ಯದ ಹಾಗೇ ಕಲಾ ಮಾಧ್ಯಮ. ಅದು ನನಗೆ ಖುಶಿಕೊಟ್ಟಿದೆ.

11. ದೃಶ್ಯ ಮಾಧ್ಯಮದ ಸಾಧ್ಯತೆ ಮತ್ತು ಸವಾಲುಗಳೇನು?
_ ದೃಶ್ಯ ಮಾಧ್ಯಮವೇ ಇವತ್ತಿನ ಪ್ರಭಾವೀ ಮಾಧ್ಯಮ. ಅದರ ಮೂಲಕ ಹೇಳುವಷ್ಟು ಸಮರ್ಥವಾಗಿ ಬೇರೆ ಯಾವ ಮಧ್ಯಮಗಳಲ್ಲಿ ಹೇಳುವುದು ಕಷ್ಟ. ಹೇಳಲು ಸಾಧ್ಯವಾದರೂ ಬೇರೆ ಮಾಧ್ಯಮ ಕೆಲವೇ ಮಂದಿಗೆ ತಲುಪುತ್ತದೆ. ಒಂದು ಕತೆಯನ್ನೋ ಕಾದಂಬರಿಯನ್ನೋ ಹತ್ತು ಸಾವಿರ ಮಂದಿ ಓದಬಹುದು. ಸಿನೆಮಾ ಆದಾಗ ಲಕ್ಷಾಂತರ ಮಂದಿ ನೋಡುತ್ತಾರೆ.
ದೃಶ್ಯ ಮಾಧ್ಯಮದ ಮುಂದಿರುವ ಸವಾಲೆಂದರೆ ಆರ್ಥಿಕತೆ. ಅದು ತನ್ನನ್ನು ತಾನು ಸಮಭಾಳಿಸಿಕೊಳ್ಳುವಷ್ಟು ಸಮರ್ಥವಾಗಿರಬೇಕು.

12. ಬರವಣಿಗೆಯ ಬೆಳವಣಿಗೆಯಲ್ಲಿ ಅಂತರ್ಜಾಲದ ಪಾತ್ರವೇನು?
_ ಅಂತರ್ಜಾಲ ಬರಹಗಾರದಲ್ಲದವರನ್ನೂ ಬರಹಗಾರರನ್ನಾಗಿಸಿತು. ಆದರೆ ಬರೆದದ್ದು ಬೇಗ ಎಲ್ಲರನ್ನೂ ತಲಪುವಂತೆ ಮಾಡಿತು. ಆದರೆ ಬರಹದ ಆಯುಸ್ಸನ್ನು ಕಡಿಮೆ ಮಾಡಿತು. ಓದು ಮರೆಯುವಂತೆ ಮಾಡಿದ್ದರಲ್ಲಿ ಅಂತರ್ಜಾಲದ ಪಾತ್ರ ದೊಡ್ಡದು. ಅದು ಅಕ್ಷರ ಲೋಕವನ್ನು ಬೆಳೆಸಿದಷ್ಟು ಅಳಿಸಲೂ ಕಾರಣವಾಗಿರಬಹುದು.

13. ನಿಮ್ಮ ಬರವಣಿಗೆಯ ತಾತ್ವಿಕತೆಯೇನು?
_ ತಾತ್ವಿಕತೆಯ ಬಗ್ಗೆ ನನಗೆ ನಂಬಿಕೆ ಇಲ್ಲ.

14. ನೀವು ಕಂಡುಕೊಂಡಂತೆ ನಿಮ್ಮ ಅನನ್ಯತೆಯೇನು?
_ ಗೊತ್ತಿಲ್ಲ. ಅದನ್ನು ನೀವೇ ಹೇಳಬೇಕು. ನಾನು ಖುಶಿಯಲ್ಲಿದ್ದಾಗ ಬರೆಯುತ್ತೇನೆ. ಅದು ನನ್ನ ನೋವಿನ, ಧ್ಯಾನಸ್ಥ ಸ್ಥಿತಿಯ ಪ್ರತಿಬಿಂಬವಲ್ಲ. ಅಂಥದ್ದರಲ್ಲಿ ನನಗೆ ನಂಬಕೆ ಇಲ್ಲ.

*********************************

ಸಂದರ್ಶನ ಒಂದೂ ಅರ್ಥವಾಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಖಂಡಿತಾ ಹೇಳುತ್ತೇನೆ. ಇನ್ನು ತಡ ಮಾಡಲಾರೆ. ಕನ್ನಡದಲ್ಲಿ ೪ ಕಾದಂಬರಿ, ೪ ಕಥಾ ಸಂಕಲನ ಹಾಗೂ ಅಂಕಣ ಬರಹದ ಪುಸ್ತಕಗಳನ್ನು ಬರೆದವರು. ಅದಕ್ಕಿಂತಲೂ ಹೆಚ್ಚಾಗಿ ತುಂಬ ಆಪ್ತವಾಗಿ ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ, ಬ್ಲಾಗ್ ಲೋಕದಲ್ಲಿ ನಿಮಗೆಲ್ಲ ತುಂಬ ಸುಪರಿಚಿತರಾದ ಜೋಗಿಯವರು.
ಇದಕ್ಕೂ ಮೊದಲ ಬರಹದಲ್ಲಿ ನಾನು ಹೇಳಿದ್ದೆ. ಎಂಫಿಲ್‌ಗಾಗಿ ನಾನು ಜೋಗಿಯವರ ಕತೆ, ಕಾದಂಬರಿಗಳ ಕುರಿತ ಹಾಗೆ ಅಧ್ಯಯನ ಮಾಡಿದ್ದೆ ಎಂದು. ಹಾಗೆ ಕೆಲವು ಪ್ರಶ್ನೆಗಳನ್ನೂ ಜೋಗಿಯವರಲ್ಲಿ ಕೇಳಿದ್ದೆ. ಅವರು ನೀಡಿದ ಉತ್ತರ ನನಗಂತೂ ಇಷ್ಟವಾಗಿತ್ತು. ನಿಮಗೂ ಖುಶಿ ನೀಡಬಹುದೆಂಬ ನಂಬಿಕೆಯಿಂದ ಬ್ಲಾಗಿನಲ್ಲಿ ಹಾಕಿದೆ.
ಈ ವಿಷಯವನ್ನು ಆರಂಭದಲ್ಲೇ ಹೇಳಿದ್ದರೆ ನಾನು ಕೇಳಿದ ಪ್ರಶ್ನೆ ಅವರು ನೀಡಿದ ಉತ್ತರ ಎರಡನ್ನೂ ನೀವು ಓದದೇ ಇರಬಹುದೆಂಬ ಭಯದಿಂದ ಹಾಗೂ ತುಸು ಭಿನ್ನವಾಗಿರಲೆಂದು ಕೊನೆಗೆ ಹೇಳಿದೆ.
ಅಂದ ಹಾಗೆ ನಾನು ನನ್ನ ಪ್ರಬಂಧವನ್ನು ಲೇಟ್ ಆಗಿ ಸಬ್ಮಿಟ್ ಮಾಡಿದ್ದೆ. ಆದ ಕಾರಣ ಜೋಗಿಯವರ ಯಾಮಿನಿ, ಹಿಟ್ ವಿಕೆಟ್ ಹಾಗೂ ರಾಯಭಾಗದ ರಹಸ್ಯ ರಾತ್ರಿ ಕೃತಿಗಳನ್ನು ನನ್ನ ಅಧ್ಯಯನಕ್ಕೆ ಒಳಪಡಿಸಲಾಯಿತು. ಇನ್ನೂ ತಡ ಮಾಡಿದ್ದರೆ ಈಗ ಅವರು ಬರೆಯುತ್ತಿರುವ ಹೊಸ ಕಾದಂಬರಿ "ಚಿಟ್ಟೆ ಹೆಜ್ಜೆ ಜಾಡು"ವನ್ನೂ ಸೇರಿಸಬಹುದಿತ್ತು!!!
ಫೋಟೋ : ಅವಧಿ

09 May, 2009

ತೆರೆದ ಪುಟ

ಊರಿಗೆ ಹೋಗಿ ಬಂದೆ. ಸುಮಾರು ಮೂರು ತಿಂಗಳು ಅದು ಹೇಗೆ ಕಳೆದು ಹೋಯಿತೋ... ಬೇಸರ...
ಊರಿಂದ ಬಂದು ವಾರವಾಗುತ್ತಾ ಬಂದರೂ ಬ್ಲಾಗಿಗೆ ಬರೆಯಲು ವಿಷಯ ತುಂಬಾ ಇದ್ದರೂ ವಾಕ್ಯಗಳೇ ಮೂಡುತ್ತಿಲ್ಲ ಮನಸ್ಸಲ್ಲಿ.
ಮಂಗಳೂರಲ್ಲಿದ್ದಾಗ ಸಮಯ ಹೇಗೆ ಕಳೆಯುವುದೆಂದು ಗೊತ್ತಾಗದ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲದವರು ಎಂಫಿಲ್ ಪದವಿಗೆ ಅರ್ಜಿ ಕರೆದಿದ್ದರು. ಪೇಪರಿನಲ್ಲಿ ನನ್ನ ಕಣ್ಣಿಗೆ ಕಂಡ ಆ ಜಾಹಿರಾತಿಗೆ ಪತಿಯ ಅನುಮತಿ ಪಡೆದು ಕೂಡಲೇ ಅರ್ಜಿ ಹಾಕಿದ್ದೆ. ೩ ತಿಂಗಳು ತರಗತಿಗೂ ಹೋದೆ. ಮತ್ತೆ ಎಂ.ಎ ತರಗತಿಯಲ್ಲಿ ಕುಳಿತ ಅನುಭವ. ಮಜವಾಗಿತ್ತು.
ಹಂಪಿಯವರು ಎಂಫಿಲ್‌ಗಾಗಿ ಸಿದ್ಧ ಮಾಡಿದ ವಿಷಯಗಳು ಮಾತ್ರ ಪರೀಕ್ಷೆ ಪಾಸಾದರೂ ಅರ್ಥವಾಗಿರಲಿಲ್ಲ, ಈಗಲೂ...
ಪರೀಕ್ಷೆ ಬರೆದು ಪಾಸಾಗುವುದೇ ಸುಲಭ ಅಂತ ಅನ್ನಿಸಲು ಶುರುವಾದದ್ದು ಮಾತ್ರ ೧೦೦ ಪುಟದ ಥೀಸೀಸ್ ಬರೆಯಬೇಕೆಂದು ಹೇಳಿದಾಗ!
ಯಾವುದರ ಬಗ್ಗೆ, ಏನು ಬರೆಯಬೇಕೆಂದೇ ಅರ್ಥವಾಗಲಿಲ್ಲ. ಅದೇ ಹಳೇ ವಿಷಯಗಳಾದ ಪಂಪ, ಬಸವಣ್ಣ, ಕುಮಾರವ್ಯಾಸ, ಕುವೆಂಪು, ಕಾರಂತ - ಇವರ ಕೃತಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು-ಒಂದು ಅಧ್ಯಯನ, ತೌಲನಿಕ ಅಧ್ಯಯನ ಎಂದೆಲ್ಲ ಹಳೆಯ ವಿಷಯಗಳ ಕುರಿತು ಅಧ್ಯಯನ ಮಾಡುವುದು ಯಾಕೋ ನನ್ನ ಮನಸಿಗೆ ಕಿರಿಕಿರಿ. ಹೊಸ ವಿಷಯದ ಬಗ್ಗೆ ಬರೆಯಬೇಕೆಂದು ಬಹಳ ಅನಿಸುತ್ತಿತ್ತು. ಅದೇ ಸಂದರ್ಭದಲ್ಲಿ ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಓದುತ್ತಿದ್ದೆ. ತುಂಬಾ ಇಷ್ಟವಾಯಿತು. ಮಡುವುದಾದರೆ ಜೋಗಿಯವರ ಕೃತಿಗಳ ಬಗ್ಗೇ ಅಂತ ನಿರ್ಧರಿಸಿದೆ. ನಮ್ಮ ಸರ್ ಹತ್ತಿರ ವಿಷಯ ಪ್ರಸ್ತಾಪಿಸಿದೆ. ಅವರು ಬೇರೆ ಬೇರೆ ವಿಷಯ ಹೇಳಿದರೂ ನನಗೆ ಒಪ್ಪಲು ಮನಸ್ಸಾಗಲಿಲ್ಲ.
ಜೋಗಿಯವರೂ ಅವರ ಕೆಲವು ಪುಸ್ತಕ ಕಳುಹಿಸಿಕೊಟ್ಟರು.
ಆದರೆ ನನಗೆ ಹೇಗೆ ಬರೆಯಬೇಕು? ಯಾವ ವಿಷಯ ಮುಖ್ಯವಾಗಿಸಿ ಬರೆಯಬೇಕೆಂದು ಒಂದೂ ತಿಳಿಯಲಿಲ್ಲ. ನಮ್ಮ ಮಾರ್ಗದರ್ಶಕರ ಬಳಿ ಕೇಳಿದರೆ "ನೀವು ಮೊದಲು ಬರೆದು ಮುಗಿಸಿ ಮತ್ತೆ ಅದಕ್ಕೆ ಕಾಮೆಂಟ್ ಮಾಡ್ತೇನೆ" ಎಂದು ಹೇಳಿದರು. ಅದೇ ಸಮಯಕ್ಕೆ ಸರಿಯಾಗಿ ಡೆಲ್ಲಿಗೆ ಬರಬೇಕಾಯಿತು, ನನ್ನ ಉದಾಸೀನವೂ ಸೇರಿತು. ಎಂಫಿಲ್ ಹೆಳೆಯಲ್ಲಿ ಊರಲ್ಲಿ ಎರಡೆರಡು ತಿಂಗಳು ಕಳೆದರೂ ಒಂದು ಅಕ್ಷರ ಮುಂದೆ ಸಾಗಲಿಲ್ಲ. ಡೆಲ್ಲಿಗೆ ಬಂದೆ. ಹಾಗೇ ಎಂಫಿಲ್ ಮೂಲೆಯಲ್ಲಿ ದೂಡುತ್ತಾ ಬಂದೆ.
ಕೊನೆಗೆ ಏಪ್ರಿಲ್‌ಗೆ ಪ್ರಬಂಧ ಕೊಡದೇ ಹೋದರೆ ಕ್ಯಾನ್ಸಲ್ ಆಗುತ್ತದೆ ಎಂಬ ಪತ್ರ ನನ್ನ ಕೈ ಸೇರಿದ ಮೇಲೆ ಚುರುಕುಮುಟ್ಟಿತು. ಇನ್ನು ಮುಗಿಸದೇ ಇದ್ದರೆ ನನಗೇ ಅವಮಾನ ಎಂದು ತೀರ್ಮಾನಿಸಿ ಊರಿಗೆ ಹೋದೆ.
ಮನೆಯಲ್ಲಿದ್ದರೆ ಅವರಿವರನ್ನು ಕಾಮೆಂಟ್ ಮಾಡುತ್ತಾ ತೋಟ ಸುತ್ತಾಡುತ್ತಾ, ನಕ್ಷತ್ರ ಹಣ್ಣು, ಗೇರು ಹಣ್ಣು ತಿನ್ನುತ್ತಾ ಮದುವೆ, ಮುಂಜಿ ಎಟೆಂಡ್ ಮಡುತ್ತಾ ಟೈಮ್ ಹಾಳುಮಾಡುತ್ತಾನೆಂದು ನಾನು ಸೀದಾ ನನ್ನ ಆತ್ಮೀಯ ಗೆಳತಿ ದಿವ್ಯಳ ಮನೆಗೆ ಹೋದೆ. ಜೋಗಿಯವರ ‘ಯಾಮಿನಿ’ ಕಾದಂಬರಿಯ ಹೀರೋ ಚಿರಾಯು ಮೊಬೈಲ್ ರೇಂಜ್ ಸಿಗದ ಕಡೆಗೆ ಹೋಗಿ ಬರೆಯುತ್ತಾನೆ. ಹಾಗೆ ನಾನೂ ಸುಮರು ೨ ತಿಂಗಳು ತಪಸ್ಸಿಗೆ ಕುಳಿತ ಹಾಗೆ ಗೆಳತಿ ಮನೆಯ ಕಂಪ್ಯೂಟರ್ ಮುಂದೆ ಕುಳಿತು ಬರೆಯ ತೊಡಗಿದೆ. ಆಕೆ ಪತಿ ಧನಂಜಯ್ ಸರ್ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಸಹಾಯ ಮಾಡಿದ್ದರು.
ಅದೇನು ಕಾಕತಾಳಿಯವೋ ಗೊತ್ತಿಲ್ಲ! ನಾನು ಜೋಗಿಯವರ ಕೃತಿಗಳನ್ನು ಹಿಡಿದು ಅರ್ಥವಾಗದೇ ಒದ್ದಾಡುತ್ತಿದ್ದಾಗ ಸಮಯ, ಸರಿಯಾಗಿ ಅವರ ಪುಸ್ತಕಗಳಿಗೆ ವಿಮರ್ಶೆ ಬರೆಯ ತೊಡಗಿದ್ದವರು ಹಿರಿಯರಾದ ಬೆಳ್ಮಣ್ ಕಾಲೇಜಿನಲ್ಲಿ ಪ್ರಿನ್ಸಿಪಾಲರಾದ ಡಾ.ಜನಾರ್ದನ ಭಟ್ ಅವರು. ಸಾಹಿತ್ಯದ ಕುರಿತ ಹಾಗೆ ಅವರಿಗಿರುವ ಪಾಂಡಿತ್ಯ ಜೊತೆಗೆ ಅವರ ಸರಳತನ ನೋಡಿ ಬೆರಗಾಗಿದ್ದೆ. ನನ್ನ ವಿಷಯದ ಕುರಿತ ಹಾಗೆ ತುಂಬ ಸಲಹೆ ನೀಡಿದರು. ನಮ್ಮ ಅಧಿಕೃತ ಮಾರ್ಗದರ್ಶಕರಿಗೆ ಬರೆದ ವಿಷಯವನ್ನು ತೋರಿಸಿ ಓಕೆ ಮಾಡಿಸಿ ಅಂತೂ ಇಂತೂ ನನ್ನ ಕೆಲಸ ಮುಗಿಸಿ ಬಂದೆ.
ನಾನು ಬರೆದದ್ದರಲ್ಲಿ ಹಲವು ತಪ್ಪುಗಳಿರಬಹುದು. ಅದನ್ನೆಲ್ಲ ಮನ್ನಿಸಿ ಹಂಪಿಯವರು ನನಗೆ ಎಂಫಿಲ್ ಪದವಿ ನೀಡಬಹುದೇ ಎಂಬ ನಿರೀಕ್ಷೆಯಲ್ಲಿ ಈಗ ಕಾಯುತ್ತಿದ್ದೇನೆ.
ಈ ಎಲ್ಲ ಕೆಲಸದಿಂದ, ಮನೆಗೆ ಹೋಗಿ ಬಂದ ಕುಶಿಯಿಂದ ಬ್ಲಾಗಿಗೆ ಬರೆಯಲು ಅಕ್ಷರಗಳು ನಿಧಾನವಾಗ ಸಾಗುತ್ತಿದೆ ಎಂಬ ನೆವನವನ್ನು ನಿಮ್ಮ ಮುಂದಿಡುತ್ತಿದ್ದೇನೆ.

17 March, 2009

ವಿಚಾರ ಸಂಕಿರಣ ಎಂಬ ಹರಕೆ.....

ಕಾಲೇಜು ದಿನಗಳ ನಂತರ ಅಪ್ಪಟ ಸಾಹಿತ್ಯಿಕವಾದ, ಥಿಯರಿಟಿಕಲ್ ಆದ ಭಾಷಣ ಕೇಳಿರಲಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಕಿಟೆಲರ ಬಗ್ಗೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅನಿವಾರ್ಯ ಕಾರಣದಿಂದ ಹೊಗಲೇ ಬೇಕಾಯಿತು. ಶೈಕ್ಷಣಿಕ ಶಿಸ್ತಿನಿಂದ ದೂರವಾಗಿ ಅದಾಗಲೇ ೩ ವರ್ಷವಾಗುತ್ತಾ ಬಂತು. ಆದ್ದರಿಂದ ಇಂದು ಅಂಥ (ಬೋರಿಂಗ್)ಭಾಷಣ ಕೇಳುವಂಥ ತಾಳ್ಮೆಯಾಗಲೀ ಆಸಕ್ತಿಯಾಗಲೀ ಕಡಿಮೆಯಾಗುತ್ತಿದೆ.
ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಎಂದು ಹೆಸರಿದ್ದರೂ ಅಲ್ಲಿ ಯಾವ ಬಿಳಿ ಅಥವಾ ಕರಿ ತಲೆಗಳು ಕಾಣಿಸಲಿಲ್ಲ. (ವಿದೇಶಗಳಿಗೆ ಆಗಾಗ ಸರಕಾರಿ ಯಾ ಸಂಸ್ಥೆಗಳ ಖರ್ಚಿನಲ್ಲಿ ಭೇಟಿ ನೀಡುವ ನಮ್ಮ ವಿಧ್ವಾಂಸರಿಗೇ ಹಾಗೆ ಸಂಭೋಧಿಸಿರಬಹುದೇ?) ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ.
ಕನ್ನಡದಲ್ಲಿ ಮೊದಲಿಗೆ ನಿಘಂಟು ರಚಿಸಿದವರು ಕಿಟೆಲ್ ಎಂದು ಸಣ್ಣ ತರಗತಿಯಿಂದಲೂ ಕಲಿತ, ಕೇಳಿದ ವಾಕ್ಯದ ಹೊರತಾಗಿ ಅಲ್ಲಿ ಮಂಡಿತವಾದ ಭಾಷಣದಿಂದೇನೂ ಎಫ್ಫೆಕ್ಟ್ ಆಗಲಿಲ್ಲ. ಕಾರಣ ಇಷ್ಟೇ- ಅಲ್ಲಿ ಬಂದವರೆಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ದೊಡ್ಡ ಮಂಡೆಯವರು! ನಾಲ್ಕು ಪುಸ್ತಕಗಳನ್ನಿಟ್ಟು ತಯಾರಿಸಿದ ಪ್ರಬಂಧಗಳು. ಒಂದಿಬ್ಬರಂತೂ ಪೇಪರ್ ಪ್ರೆಸಂಟೇಶನ್ ಅಂದರೆ ಪಕ್ಕಾ ಪೇಪರ್ ಮುಂದಿಟ್ಟು ಸ್ಪೀಡಾಗಿ ಓದುತ್ತಿದ್ದರು. (ಸಣ್ಣ ತರಗತಿಯಲ್ಲಿ ಮೇಷ್ಟ್ರು ಒಬ್ಬೊಬ್ಬರನ್ನೇ ನಿಲ್ಲಿಸಿ ಪಾಠ ಓದಿಸುತ್ತಿದ್ದುದು ನೆನಪಾಯಿತು.) ಅನುಸ್ವಾರ, ವಿಸರ್ಗ, ಬಿಂದು ಹೀಗೆ ಹಲವು ಶಬ್ದಗಳು ಕೂತು ತೂಕಡಿಸುತ್ತಿದ್ದ ನನ್ನ ತಲೆಗೆ ಬಡಿಯುತ್ತಲೇ ಇತ್ತು. ವರ್ಷಗಟ್ಟಲೆ ಪಾಟ ಹೇಳಿಕೊಡುತ್ತಿದ್ದ ಮೇಷ್ಟ್ರುಗಳಿಗೆ ತಾವು ಓದಿ ಅಧ್ಯಯನ ಮಾಡಿದ ವಿಷಯದಲ್ಲಿ ನಾಲ್ಕು ಪಾಯಿಂಟ್ ಇಟ್ಟು ನೆರೆದಿದ್ದ ಹತ್ತು ಜನರ ಮುಂದೆ ಹೇಳಲು ಸಾಧ್ಯವಿಲ್ಲವೆ? ಬೇಸರವಾಯಿತು.
ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ.
ಕನ್ನಡ ಸಾಹಿತ್ಯಕ್ಕೆ ಅಪಾರವದ ಕೊಡುಗೆ ನೀಡಿದ ಕಿಟೆಲರ ಬಗ್ಗೆ ಗೌರವ ಇದೆ.(ಆತನ ಕೊಡುಗೆಯ ಹಿಂದೆ ಸಾಕಷ್ಟು ಒತ್ತಡದ, ಆದೇಶದ ಅನಿವಾರ್ಯ ಕಾರಣಗಳಿದ್ದವು,) ಆದರೆ ಇಂದು ಇಂತಹ ಸೆಮಿನಾರ್ ಗಳನ್ನು ಮಾಡುವುದು ಎಷ್ಟು ಪ್ರಸ್ತುತ? ಕಿಟೆಲರ ಸಾಧನೆಯನ್ನು ನಾಲ್ಕು ಜನರಿಗೆ ತಲಪಿಸುವ ಕೆಲಸ, ಆತನ ಹಾದಿಯಲ್ಲಿ ಸಾಗುವ ಪ್ರಯತ್ನ ಹೀಗೆ ಹಲವಾರು ಉತ್ತರಗಳು ಬರಬಹುದು. ಆದರೆ ಅಂತರ್ಜಾಲ ಇರುವ ಇಂದಿನ ಸಂದರ್ಭದಲ್ಲಿ ಆ ಕೆಲಸಗಳೆಲ್ಲ ಕಾರ್ಯರೂಪಕ್ಕೆ ಖಂಡಿತಾ ಬರುವುದಿಲ್ಲ. ಅಲ್ಲದ ಅಲ್ಲಿಗೆ ಬಂದವರೆಲ್ಲ ಕೂದಲು ಬೆಳ್ಳಗಾದವರು, ಭಾಷಣ ಮಾಡಿದವರೂ ಅವರ ಹೊತ್ತಿಗೆ ಬಂದು ತಮ್ಮ ಕೆಲಸವಾದ ನಂತರ ಕಳಚಿಕೊಂಡವರೇ.
ಇಂತಹ ಕಾರ್ಯಕ್ರಮ ಮಾಡಲು ಶೈಕ್ಷಣಿಕ ಸಂಸ್ಥೆಗಳಿಗೆ ಒಂದಷ್ಟು ದುಡ್ಡು ಬರುತ್ತದೆ. ಬ್ಯಾಂಕ್ ನವರೂ ದಾನ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಹಣ ಹೀಗೆ ಖರ್ಚು ಮಾಡಿದರೆ, ಸ್ವಲ್ಪ ಈಗಾಗಲೇ ತುಂಬಿದ ಕಿಸೆಗಳಿಗೆ ಸೇರುತ್ತವೆ. ಮರುದಿನ ಪೇಪರಿನಲ್ಲಿ ಭಾಷಣ ಮಾಡಿದ, ಸಭಾ ಕಾರ್ಯಕ್ರಮದ ಫೋಟೋ, ಮ್ಯಾಟರ್ ನೊಂದಿಗೆ ಮುಕ್ತಾಯವಾಗುತ್ತದೆ.
ನಮ್ಮ ಸಮಾಜದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಓದಲು ದುಡ್ಡಿಗಾಗಿ ಕಷ್ಟಪಡುತ್ತರೋ, ಲೆಕ್ಕ ಸಿಕ್ಕದು. ಅಂತಹ ವಿದಾರ್ಥಿಗಳಿಗಾದರು ಈ ದುಡ್ಡನ್ನು(ಕಿಟೆಲರ ಹೆಸರಿನಲ್ಲಿ) ನೀಡಿದರೆ ಅವರು ಮನಪೂರ್ವಕವಾಗಿ ನಮಿಸಬಹುದು. ಕುತೂಹಲಕ್ಕಾದರೂ ಕಿಟೆಲರ ಸಾಧನೆಯನ್ನು ಗುರುತಿಸುತ್ತಿದ್ದರೋ... ಆದರೇನು ಮಾಡುವುದು ಇದನ್ನೆಲ್ಲ ಹೇಳುವವರಾರು? ಹೇಳಿದರೆ ಮಾಡುವವರಾರು?
ಕೊನೆಯಲ್ಲಿ ಮುಖ್ಯಾಂಶ:-ಅಷ್ಟು ವಯಸ್ಸಾದರೂ, ತನ್ನ ಸಣ್ಣ ದೇಹದ ಪುಟು ಪುಟು ಹೆಜ್ಜೆಯಿಡುತ್ತಾ ಸ್ಟೇಜಿಗೆ ಬಂದು ಮೈಕ್ ಮುಂದೆ ನಿಂತು ಭಾಷಣ ಮಾಡಿದ ಶ್ರೀನಿವಾಸ ಹಾವನೂರರ ಅಗಾಧ ಪಾಂಡಿತ್ಯಕ್ಕೂ ಚುರುಕು ನಡಿಗೆಗೂ ಬೆರಗಾದೆ!!!

13 March, 2009

ಅಜ್ಜನ ಸಾವು!

ಬರವಣಿಗೆಯಲ್ಲಿ ಪೀಠಿಕೆ, ಉಪಸಂಹಾರ ಎಂಬೆಲ್ಲ ಶಿಸ್ತು ಅಳವಡಿಕೆ ಸದ್ಯದ ಈ ಬರಹದಲ್ಲಿ ಅನಗತ್ಯ. ನೇರವಾಗಿ ವಿಷಯಕ್ಕೇ ಬರುತ್ತೇನೆ.
ಜೋಗಿಯವರ ನದಿಯ ನೆನಪಿನ ಹಂಗು, ರಾಯಭಾಗದ ರಹಸ್ಯ ರಾತ್ರಿ, ಕಾಡು ಹಾದಿಯ ಕತೆಗಳು ಮೊದಲಾದ ಕೃತಿಗಳನ್ನು ಓದುತ್ತಿರುವಾಗ ಇದೆಲ್ಲ ಸಾದ್ಯವಾ? ವಾಸ್ತವವಾ? ಹೀಗೂ ಉಂಟೇ? ಎಂಬೆಲ್ಲ ಪ್ರಶ್ನೆಗಳು ಕಾದುತ್ತಿತ್ತು.
ಕೆಲವು ಸ್ತ್ರೀ, ಪುರುಷ ಪಾತ್ರಗಳೆಲ್ಲ ಇದ್ದಕ್ಕಿದ್ದಂತೆ ನಾಪತ್ತೆಯಾಗುವುದೋ, ನಿಗೂಢವಾಗಿ ಸಾಯುವುದೋ, ಸತ್ತು ಭೂತವೋ, ದೆವ್ವವೋ ಆಗಿ ಕಾಡುತ್ತದೆ ಎಂದು ಜನ ನಂಬುವುದು_ ಇದೆಲ್ಲ ನನಗೆ ಹೊಸ ಜಗತ್ತಿನಂತೆ, ವಿಚಿತ್ರವಾಗಿ ಕಾಣಿಸುತ್ತಿತ್ತು.
ಹಾಗೇ ಜೋಗಿಯವರು ತಾವು ಕಂಡ ಹಳ್ಳಿಯ ಬದುಕಿನ ಸೂಕ್ಷ್ಮತೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವ ಅದ್ಭುತ ಶೈಲಿಗೂ ಬೆರಗಾಗುತ್ತಿದ್ದೆ.
ನಮ್ಮೂರಲ್ಲೂ ಇಂಥಾ ಕತೆಗಳಿಲ್ಲವೇ? ಇದ್ದರೆ ಯಾಕೆ ನನ್ನ ಅನುಭವಕ್ಕೆ ಬರಲಿಲ್ಲ? ನನ್ಯಾಕೆ ಗಮನಿಸಲಿಲ್ಲ? ಎಂದೆಲ್ಲ ಕಥಾಸಂಕಲನ ಓದಿದ ಮೇಲೆ ನನ್ನನ್ನು ಕಾಡಲು ಶುರುವಾಯಿತು. ಶಾಲೆ, ಕಾಲೇಜು, ಪ್ರೀತಿ, ಮದುವೆ, ಸಂಸಾರ ಎಂದು ನಾನು ನನ್ನ ವ್ಯೂಹದೊಳಗೇ ಸಾಗುತ್ತಿದ್ದೆ. ನನ್ನ ಗಮನಕ್ಕೆ ಬಂದರೂ ಅದು ಮುಖ್ಯವಾಗಲಿಲ್ಲ.
ಈಗ ಊರಿಗೆ ಬಂದು ೧ ವಾರದೊಳಗೆ ೨ ಆತ್ಮಹತ್ಯಾ ಪ್ರಕರಣ ಕೇಳಿದೆ. ಅದರಲ್ಲಿ ಒಂದಂತೂ ಬಹಳ ವಿಚಿತ್ರವಾಗಿದೆ, ನಿಮಗೂ ಕುತೂಹಲವೆನಿಸಬಹುದು.
ಸುಮಾರು ಎಪ್ಪತ್ತು ವರ್ಷ ಮೀರಿದೆ ಅಂದರೆ ಅಜ್ಜನಲ್ಲದೆ ಹುಡುಗನಾಗಲು ಸಾಧ್ಯವೇ? ಮಾಟ, ಮಂತ್ರ ಮಾಡುತ್ತಾ, ಇದ್ದ ತೋಟ ನೋಡಿಕೊಂಡು ಮಗ ಸೊಸೆ ಮೊಮ್ಮಕ್ಕಳ ಜೊತೆ (ಹಾಯಾಗಿ ಎಂದು ಹೇಳಲಾರೆ) ಇದ್ದವರು. ಮಾಟ ಮಾಡಿಸುವುದರಿಂದಾಗಿ ನಮ್ಮ ಊರಲ್ಲಿ ಆ ವ್ಯಕ್ತಿ ತಕ್ಕ ಮಟ್ಟಿಗೆ ಫೇಮಸ್!
ಸಾಯೋ ಗಂಟೆ ಗಳಿಗೆ ಸರಿಯಾಗಿದ್ದರೆ ಡೈರೆಕ್ಟ್ ಸ್ವರ್ಗ ಸೇರಬಹುದೆಂದು ಆ ದಿನ ಪಂಚಾಂಗ ನೋಡುತ್ತಿದ್ದರಂತೆ. (ದಿನ ಗಂಟೆ ಮುಹೂರ್ತ ನೋಡಿ ಸಿಸೇರಿಯನ್ ಮಾಡಿಸುವಂತೆ!) ಹುಟ್ಟಲು ಮಾತ್ರವಲ್ಲ ಸಾಯಲೂ ದಿನ ನೋಡುತ್ತಾರೆಂದಾಯಿತು. ಸಾಯೋ ಕೆಲ ದಿನ ಮೊದಲು ಬಿದಿರು ಕಡಿಸಿ, ಮಣ್ಣಿನ ಹೊಸ ಅಳಗೆ(ಪಾತ್ರ), ಹೊಸ ಪಂಚೆ ಎಲ್ಲ ತಂದಿಟ್ಟಿದ್ದರಂತೆ.(ಇನ್ನು ಮಗನಿಗೇನೂ ಕೆಲಸವಿಲ್ಲ!) ಹಾಗೆ ಯಾರಲ್ಲೋ ಚಟ್ಟಕ್ಕಾಗಿ ಮರ ಕಡ್ಪೆರ ಜನ ತಿಕ್ವೆರಾ(ಮರ ಕಡುಹಿಸಲು ಜನ ಸಿಗಬಹುದೇ) ಅಂತಲೂ ವಿಚಾರಿಸುತ್ತಿದ್ದರಂತೆ.
ಆ ರಾಮ ಸತ್ತದ್ದೂ ನೀರಿನಿಂದ ಈ ರಾಮ ಸಾಯುವುದೂ ನೀರಿನಿಂದಲೇ ಎಂದು ತನ್ನನ್ನು ದೈವತ್ವಕ್ಕೇರಿಸಿದ ಮಾತು ಇತ್ತಂತೆ. ಆತ್ಮಹತ್ಯೆ ಮಾಡುವ ಮೊದಲು ಎಲ್ಲ ಪೂರ್ವ ತಯಾರಿ ಮಾಡಿದ್ದ ಅಜ್ಜ.
ಈ ಎಲ್ಲ ಮುನ್ಸೂಚನೆ ಕೊಟ್ಟರೂ ಮನೆಯವರಿಗೆ ಆತ್ಮಹತ್ಯೆಯ ವಾಸನೆ ಬಡಿಯಲಿಲ್ಲವೋ? ಬಡಿದರೂ ಮೂಗು, ಬಾಯಿ ಮುಚ್ಚಿ ಕುಳಿತಿದ್ದರೋ? ಗೊತ್ತಿಲ್ಲ.
ಕೆರೆಯ ಬುಡದಲ್ಲಿ ಚಪ್ಪಲಿ, ಕನ್ನಡಕ ಇಟ್ಟು ಅಜ್ಜ ಡೈ(ವ್) ಹೊಡೆದೇ ಬಿಟ್ಟರು.
ಈಗ ನಮ್ಮೂರಲ್ಲಿ ಕೆರೆಗೆ ಹೋದ ಅಜ್ಜ ಕಾಲು ಜಾರಿ ಬಿದ್ದರು ಎಂದು ಆಡಿಕೊಳ್ಳುತ್ತದ್ದಾರೆ.
ಅಂತೆಯೇ ಮಾಟ ಮಂತ್ರ ಮಾಡುತ್ತಿದ್ದಾಗ ಅವರ ಬಳಿಗೆ ಬಂದ ಹೆಂಗಸರನ್ನು ಅಜ್ಜ ತಂತ್ರ ಮಾಡಿ......(ಯೋಚಿಸಿ) ಎಂಬ ಸಣ್ಣ ಧ್ವನಿಯೂ ಕೇಳಿ ಬರುತ್ತಿದೆ.
ಅಷ್ಟಕ್ಕೂ ಅಜ್ಜ ಸಾಯುವುದಕ್ಕಿದ್ದ ಕಾರಣ?
ಜೋಗಿಯವರ ಕೆಲವು ಕತೆಗಳಂತೆ ನಿಗೂಢವೂ ಅಸ್ಪಷ್ಟವೂ ಆಗಿದೆ.
ಅಜ್ಜ ನೋಡಿದ ಪಂಚಾಗ ಸರಿಯಿದ್ದು ಗಂಟೆ ಘಳಿಗೆ ಎಲ್ಲ ಸ್ವರ್ಗಮುಖಿಯಾಗಿದ್ದರೆ ಸುಖಿಯಾಗಿರಬಹುದು, ದೆವ್ವವಾಗಿ ಬಂದು ಕಾಡಲಾರ ಎಂಬ ನಂಬಿಕೆ!

04 March, 2009

ಕೊಳಚೆ ನಾಯಿ ಕೋಟಿಪತಿ_ ಮೂಡಿಸಿದ ಪ್ರಶ್ನೆಗಳು!

ಆಸ್ಕರ್ ಪ್ರಶಸ್ತಿ ಬಂದಾಗಿನಿಂದ ಕೊಳಚೆ ನಾಯಿ ಕೋಟಿಪತಿಗೆ ಬಂದಷ್ಟು ಕಾಮೆಂಟ್ ಗಳು ಇನ್ಯಾವುದೇ ಸಿನೆಮಾಕ್ಕೂ ಬಂದಿರಲಿಕ್ಕಿಲ್ಲ. ಅಷ್ಟು ಸಾಲದೆಂಬಂತೆ ನನ್ನದೂ ಎರಡು ತಕರಾರಿದೆ.
ಸ್ಲಂಡಾಗ್-ಎಂಟು ಆಸ್ಕರ್ ಬಾಚಿಕೊಳ್ಳುವಂತಾ ಸಿನಿಮಾವೇನೂ ಅಲ್ಲ. ಅದಕ್ಕಿಂತ ಈ ಮೊದಲು ಆಸ್ಕರ್ ಬುಡದವರೆಗೆ ಹೋಗಿ ಬಂದ ನಮ್ಮ ಆಮೀರ್ ಖಾನ್ ನಟನೆಯ ಲಗಾನ್ ‘ ತಾರೇ ಜಮೀನ್ ಪರ್ ನೂರು ಪಾಲು ಚೆನ್ನಾಗಿದ್ದುವು. ಇದರ ನಿರ್ದೇಶಕರು, ತಯಾರಕರೆಲ್ಲ ಭಾರತೀಯರು ಅನ್ನುವ ಕಾರಣಕ್ಕೋ, ಆಸ್ಕರ್ ವಿತರಕರಿಗೆ ಸಿನಿಮಾ ಅರ್ಥವಾಗಲಿಲ್ಲವೋ ಅಥವಾ ಆಮೀರ್ ಖಾನರ ದುರದೃಷ್ಟವೋ ಪ್ರಶಸ್ತಿ ದೊರಕಲಿಲ್ಲ.
ಎ.ಆರ್ ರೆಹಮಾನರು ಅದ್ಭುತ ಸಂಗೀತ ನಿರ್ದೇಶಕರು. ಅದರಲ್ಲಿ ಎರಡು ಮಾತಿಲ್ಲ. ಆಸ್ಕರ್ ಪ್ರಶಸ್ತಿ ಅವರಿಗೆ ಲಭಿಸಿದ್ದಕ್ಕೆ ನೂರು ಪ್ರಣಾಮಗಳು. ಆದರೆ ಜೈಹೋ ಅಂಥಾ ಅದ್ಭುತ ಸಂಗೀತದ ಹಾಡೇನೂ ಅಲ್ಲ. ಅದಕ್ಕಿಂತ ಎಷ್ಟೋ ಉತ್ತಮ ಹಾಡುಗಳನ್ನು ರೆಹಮಾನ್ ಸಾಹೇಬರು ಈ ಮೊದಲು ನೀಡಿದ್ದಾರೆ. ಅಲ್ಲದೆ ಭಾರತೀಯ ಸಿಮಿಮಾ ರಂಗದಲ್ಲೂ ಬಹಳ ಉತ್ತಮ ಹಾಡುಗಳಿವೆ. ಆದರೇನು ಮಾಡುವುದು ಈ ಮೊದಲು ಬಂದಂತಹ ನಮ್ಮ ಉತ್ತಮ ಸಂಗೀತದ ಹಾಡುಗಳು ಆಸ್ಕರ್ ವಿತರಕರ ಕಿವಿಗೆ ಇಂಪಾಗಿ ಕೇಳಿಸಲಿಲ್ಲವೇನೋ! ಅಥವಾ ಸ್ಲಂ ಡಾಗ್ ಗೆ ಆಸ್ಕರ್ ಬಂದ ಕಾರಣ ಅದರ ಹಾಡಿಗೂ ಕೊಟ್ಟರೇನೋ.
ಅದೇನೇ ಇರಲಿ, ಸ್ಲಂ ಡಾಗ್-ಮಿಲೆನೇರ್ ಮಾತ್ರ ನಮ್ಮಲ್ಲಿ ಕೆಲವು ಚಿಂತಿಸುವಂತಹ ಅಂಶಗಳನ್ನು ಹಾಗೇ ಬಿತ್ತಿ ಹೋಗಿವೆ ಎಂಬುದು ಮಾತ್ರ ಸತ್ಯ.
ಆತ ಕ್ರಿಶ್ಚನ್ ಈತ ಮುಸ್ಲಿಂ ಎಂಬ ಯಾವ ಧರ್ಮದ ನೆಲೆಯಿಂದಲೂ ಈ ಮಾತುಗಳನ್ನ ಬರೆಯುತ್ತಿಲ್ಲ.ಆದರೆ ಇಂಥಾ ಸಿನೆಮಾ ಯಾಕೆ ಇಲ್ಲಿಯವರೆಗೆ ಒಬ್ಬ ಭಾರತೀಯ ನಿರ್ದೇಶಿಸಲಿಲ್ಲ?
ಭಾರತೀಯ ಖಂಡಿತಾ ಇಂತ ಸಿನೆಮಾ ನಿರ್ದೇಶಿಸಲಾರ. ಯಾಕೆಂದರೆ ಆತನಿಗೆ ನಮ್ಮ ದೇಶದ ಮೇಲೆ ಅಭಿಮಾನವಿದೆ. ತನ್ನ ದೇಶದ ಕೊಳಕು-ಹುಳುಕನ್ನು ಒಬ್ಬ ಭಾರತೀಯ ಸಿನೆಮಾದ ಮೂಲಕ ಲೋಕಕ್ಕೆ ಸಾರಲಾರ ಅನ್ನುತ್ತೀರಾ?
ಖಂಡಿತಾ ಇಲ್ಲ. ದುಡ್ಡು ಸಿಗುವುದಾದರೆ! ದೇಶ ಭಕ್ತಿ, ಆತ್ಮ ಸಾಕ್ಷಿ ಎಲ್ಲವೂ ಆಮೇಲೆ. ದುಡ್ಡಿನ ಮುಂದೆ ಇದೆಲ್ಲವೂ ಗೌಣ ಅಥವಾ ಸೆಕೆಂಡರಿ.
ಹಾಗಾದರೆ ನಮ್ಮ ದೇಶದ ಕತೆ ನಮ್ಮ ದೇಶದ ಸಿನೆಮಾ ರಂಗದವರ ಕಣ್ಣಿಗೆ ಯಾಕೆ ಬೀಳಲಿಲ್ಲ? ಯಾಕೆಂದರೆ ಭಾರತವೇ ಹಾಗಿದೆ. ನಮಗೆ ನಮ್ಮ ದೇಶದ ಕೊಳಕು ಹುಳಕಿನಲ್ಲಿ ಬದುಕು ಅಭ್ಯಾಸವಾಗಿದೆ. ಹಾಗಾಗಿ ಅಲ್ಲಿ ಕಣ್ಣಿಗೆ ಕತೆ ಕಾಣಲು ಹೇಗೆ ಸಾಧ್ಯ? ಆದ್ದರಿಂದಲೇ ಒಬ್ಬ ವಿದೇಶಿಗನಿಗೆ ಇದು ಸಾಧ್ಯವಾಯಿತು.
ಸಿನೆಮಾ ೮೦೦ ಕೋಟಿ ರೂ ಲಾಭಗಳಿಸಿತು. ಅದರಿಂದ ನಮ್ಮ ಸ್ಲಂಗಳಿಗೇನು ಲಭಿಸಿತು? ಎಂಬ ಪುಕಾರು ಬಂತು. ಒಪ್ಪತಕ್ಕ ಮಾತೇ. ಆದರೆ ವಿದೇಶಿಗರು ನಮ್ಮ ಸ್ಲಂಗಳನ್ನು ಉದ್ದಾರ ಮಾಡುವುದಕ್ಕಿಂತಲೂ ಮೊದಲು ನಾವೇನು ಮಾಡುದೆವು? ಸಿನೆಮಾ ನೋಡಿದ ಮೇಲಾದರೂ ಸ್ಲಂಗಳ ಸ್ಥಿತಿ ಏನಾಯಿತು? ನಮ್ಮವರು ಏನು ಮಾಡಿದರು?
ಉತ್ತರ ಪ್ರತಿಭಟನೆ! ಯಾಕೆ? ಯಾವುದರ ವಿರುದ್ದ? ಯಾವ ಉದ್ದೇಶಕ್ಕಾಗಿ? ಇದ್ಯಾವುದಕ್ಕೂ ನಮ್ಮಲ್ಲಿ ಉತ್ತರವಿಲ್ಲ.
ಸಿನೆಮ ಫೇಮಸ್ ಆದ ಮೇಲಂತೂ ನಮ್ಮ ಸ್ಲಂಗಳು ಪ್ರವಾಸಿ ತಾಣವಾಯಿತು ಎಂಬ ಪುಕಾರು.
ಖಂಡಿತಾ ನಮ್ಮ ದೇಶ ಇದಕ್ಕೆ ಪ್ರವಸಿ ತಾಣವಾಗುವುದು ಬೇಡ. ಅಷ್ಟಕ್ಕೂ ಪ್ರವಾಸಿ ತಾಣವನ್ನಾಗಿ ಮಾಡುವವರು ಯಾರು? ನಮ್ಮವರಲ್ಲವೇ? ಪ್ರವಾಸಿ ತಾಣವಾಗಬೇಕಾದ ಅದೆಷ್ಟೋ ಉತ್ತಮ ಜಾಗಗಳಲ್ಲಿ ಪ್ರವಾಸಿಗರು ಹೋಗಿ ಉಳಕೊಳ್ಳುಲು ವ್ಯವಸ್ಥೆಗಳಿಲ್ಲದೆ ಪರದಾಡುವ ಸ್ಥಿತಿ! ಇದೇ ನಮ್ಮ ದೇಶದ ದುರಂತ ಅನ್ನುವುದು.
ಇನ್ನಾದರೂ ಕೊಳಚೆ ನಾಯಿ ಕೋಟಿಪತಿಯ ಬಗ್ಗೆ ಪುಕಾರು, ತಕರಾರುಗಳನ್ನು ನಿಲ್ಲಸಿ ನಮ್ಮ ದೇಶದ ಉದ್ಧಾರವನ್ನು ಹೇಗೆ ಮಾಡುವುದೆಂದು ನಿರ್ಧರಿಸಿ ಅದರತ್ತ ಸಾಗೋಣವೇ?
ಹಾಗಾದರೆ ಇದನ್ನು ನಿರ್ಧರಿಸುವರಾರು? ಕಾರ್‍ಯರೂಪಕ್ಕೆ ತರುವವರಾರು? ನಾನಾ? ನೀವಾ? ಸರಕಾರದವರಾ? ದೇಶದಲ್ಲಿರುವವರೆಲ್ಲರಾ?
ಮತ್ತೆ ನನ್ನತ್ತ ಕೈ ತೋರಿಸುವ ಬದಲು ನಿಮ್ಮತ್ತ ಕೈ ತೋರಿಸಿ ಪ್ರಶ್ನೆಯಿಂದಲೇ ಮುಗಿಸಬೇಕಾ???

01 March, 2009

ಸರ್ಕಸ್ ನೋಡಿ ತಲೆ ಹಾಳಾಗಿ...

ಕ್ಷಮಿಸಿ, ಇಷ್ಟು ತಡವಾಗಿ ಕನ್ನಡದ ಸರ್ಕಸ್ ಸಿನೆಮಾದ ಬಗ್ಗೆ ಬರೆಯುತ್ತಿರುವುದಕ್ಕೆ ಜೊತೆಗೆ ಬೈಯುತ್ತಿರುವುದಕ್ಕೆ!
ಖಂಡಿತವಾಗಿಯೂ ಆ ಸಿನೆಮಾದ ಡೈರೆಕ್ಟರ್ ದಯಾಲ್ ಪದ್ಮನಾಭನ್, ಪ್ರೊಡ್ಯೂಸರ್, ಗೊಲ್ಡನ್ ಸ್ಟಾರ್ ಗಣೇಶ್ ಯಾರನ್ನೂ ಕ್ಷಮಿಸೊಲ್ಲ. ಅಷ್ಟಕ್ಕೂ ಕ್ಷಮಿಸೋಕ್ಕೆ ನಾನು ಯಾರು ಅಂತ ಕೇಳಬೇಡಿ! ಗಣೇಶ್ ಬಗ್ಗೆ ಇದ್ದ ಸಣ್ಣ ಅಭಿಮಾನವೂ ಇಲ್ಲದಾಯಿತು.
ಸತ್ಯಕ್ಕೂ ಈ ಸಿನೆಮಾ ತಯಾರಿಸಿದ ಉದ್ದೇಶವೇನು ನನಗಂತೂ ಅರ್ಥವಾಗಿಲ್ಲ. ನಿಮಗೇನಾದರೂ ಅರ್ಥವಾದರೆ ತಿಳಿಸಿ.
ಸಿನೆಮಾ ನೋಡಿ ಪ್ರೇಕ್ಷಕರ ಮನಸ್ಸು ಉಲ್ಲಾಸದಾಯಕವಾಗಬೇಕು ಇಲ್ಲವೇ ಮನ ಕಾಡುವಂತಿರಬೇಕು, ಸಿನೆಮಾ ನೋಡಿದ ತ್ರಪ್ತಿಯಾದರೂ ಸಿಗಬೇಕು ಅದು ಬಿಟ್ಟು ಸಿನೆಮಾ ನೋಡಿ ತಲೆ ಹಾಳಾಗುವಂತಿದ್ದರೆ?
ಜೀವನದಲ್ಲಿ ಅದೆಷ್ಟೋ ಸಮಯವನ್ನು ನಿದ್ದೆ ಮಾಡಿಯೋ, ಕಾಡು ಹರಟೆ ಹೊಡೆದೂ ವ್ಯರ್ಥ ಮಾಡಿದ್ದೇನೆ. ಅದಕ್ಕೆ ಅಂಥಾ ಬೇಸರವೇನೂ ಇಲ್ಲ. ಆದರೆ ಸರ್ಕಸ್ ಸಿನೆಮಾ ನೋಡಿ ೩ ಗಂಟೆ ಹಾಳಾಯಿತಲ್ಲ ಅನ್ನೋದು ಅದಕ್ಕಿಂತ ಹೆಚ್ಚಿನ ಬೇಸರ!
ನಮ್ಮ ಕನ್ನಡ ಸಿನೆಮಾದವರು ಅದ್ಯಾಕೆ ಇಂಥ ಸಿನೆಮಾ ತಯಾರಿಸುತ್ತಾರೋ ನಾ ಕಾಣೆ. ಅಷ್ಟು ದುಡ್ಡು ಹೆಚ್ಚಾಗಿದ್ದರೆ ಬಡವರಿಗೆ ದಾನ ಮಾಡಿದ್ದರೆ ಅವರಾದರೂ ಈ ಪ್ರೊಡ್ಯೂಸರ್ ಗಳನ್ನು ಜೀವನ ಪೂರ್ತಿ ಸ್ಮರಿಸುತ್ತಿದ್ದರೇನೋ. ಸಿನೆಮಾ ನೋಡಿ ಪ್ರೇಕ್ಷಕರ ಬೈಗುಳಗಳಿಗಿಂತ! ಶ್ರೇಷ್ಟ ಕೆಲಸ ಮಾಡುದ ಪುಣ್ಯವಾದರೂ ಬರುತ್ತಿತ್ತು.
ದೇಶ ಭಕ್ತಿ, ಉಗ್ರಗಾಮಿಗಳ ಬಗ್ಗೆ ಅದೆಷ್ಟೋ ಸಿನೆಮಾಗಳು ಬಂದಿವೆ. ಆದರೆ ಇಂಥಾ ಸಿನೆಮಾ ಯಾವ ಭಾಷೆಯಲ್ಲೂ ಬಂದಿರಲಿಕ್ಕಿಲ್ಲವೇನೋ.
ಇತ್ತೀಚೆಗೆ ಬಂದ ಎ ವೆಡ್ನಸ್ಡೇ, ಮುಂಬೈ ಮೇರಿ ಜಾನ್ ಎಂತ ಅದ್ಭುತ ಸಿನೆಮಾಗಳು. ಕನ್ನಡದಲ್ಲಿ ಯಾಕೆ ಇಂಥಾ ಸಿನೆಮಾಗಳು ಬರುವುದಿಲ್ಲ?
ಒಂದೊಮ್ಮೆ ನಮ್ಮ ಕನ್ನಡದವರೇನಾದರೂ ಅಂಥದ್ದೇ ಸಿನಮಾ ತಯಾರಿಸಬೇಕೆಂದು ಹೊರಟರೆ ಹೇಗಿರುತ್ತಿತ್ತು? ಅನಗತ್ಯ ಹಾಡುಗಳು, ಹಾಡಿಗೋಸ್ಕರ ಕುಣಿತ, ಕುಣಿತಕ್ಕಾಗಿ ಲವ್ ಸ್ಟೋರಿ. ಒಟ್ಟಿನಲ್ಲಿ ಕಲಸು ಮೇಲೋಗರ!ಖಂಡಿತವಾಗಿಯೂ ಅಂತಹ ಉತ್ತಮ ಚಿತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ!
ಕನ್ನಡ ಸಿನೆಮಾದವರು ಹಿಂದಿಯದ್ದನ್ನೇ ತಥಾವತ್ತಾಗಿ ಕೋಪಿ ಹೊಡೆಯಿರಿ ಎಂದು ಹೇಳುತ್ತಿಲ್ಲ. ನಮ್ಮ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ಸಂಗೀತದಂತೆ! (ಹೀಗೆ ಬರೆದದ್ದು ಗೊತ್ತಾದರೆ ಗುರ್ ಅಂದಾರು.) ಕೋಪಿ ಹೊಡೆದರೂ ಗೊತ್ತಾಗದಂತಿರಬೇಕು.
ಇನ್ನಾದರೂ ನಮ್ಮ ಚಿತ್ರರಂಗದವರು ಪರಭಾಷಾ ಸಿನೆಮಾದ ಐಡಿಯಾಗಳನ್ನು ಸ್ವೀಕರಿಸಿ ಉತ್ತಮ ಸಿನೆಮಾ ತಯಾರಿಸಲಿ ಎಂಬುದೇ ನನ್ನ ವಿನಯಪೂರ್ವಕವಾದ ವಿನಂತಿ.
ಇನ್ನು ಸರ್ಕಸ್ ಸಿನೆಮಾದ ಕತೆಯನ್ನಂತೂ ಬರೆಯೋದಿಲ್ಲ. ಅದನ್ನ ನೋಡಿ ನನ್ನ ತಲೆಯಂತೂ ಹಾಳಾಗಿದೆ. ಇನ್ನು ನನ್ನ ಈ ಬರವಣಿಗೆಯಲ್ಲಿ ಕತೆ ಬರೆದು ನಿಮ್ಮ ತಲೆ ಹಾಳು ಮಾಡಿದ ಅಪವಾದ ನನಗೆ ಬರುವು ಇಷ್ಟವಿಲ್ಲ.
ಒಟ್ಟಿನಲ್ಲಿ ಗಣೇಶನನ್ನು ಮುಂದಿನ ಒಲಿಂಪಿಕ್ ಓಟಕ್ಕೆ ಈಗಲೇ ನಿರ್ದೇಶಕರು ತಯಾರುಗೊಳಿಸಿದಂತೆ ಕಾಣುತ್ತದೆ . ರೈಲಿನ ವೇಗಕ್ಕಿಂತ ಸ್ಪೀಡಿನಲ್ಲಿ! ಚಿನ್ನವೋ ಬೆಳ್ಳಿ ಪದಕವೋ ಬಂದರೆ ಅನುಮಾನವಿಲ್ಲ. ಆದ್ದರಿಂದ ಸಿನೆಮಾ ನಿರ್ದೇಶಕರಿಗೆ, ಪ್ರೊಡ್ಯೂಸರಿಗೆ ಹಾಗೂ ಗಣೇಶ್ ಗೆ ಆಲ್ ದಿ ಬೆಸ್ಟ...!!!


31 January, 2009

ಪುಕ್ಕಟೆ ಪುರಾಣ


ಪುಕ್ಕಟೆ ಸಿಗುತ್ತದೆಯೆಂದರೆ ಇಂಡಿಯಾದಲ್ಲಿ ಜನ ಏನನ್ನು ಸ್ವೀಕರಿಸಲೂ ಸಿದ್ಧ. ಅದಕ್ಕೆ ನಾನೂ ಹೊರತಲ್ಲ!
ಆಗ ಹೆಗಲಿಗೆ ಮಣ ಭಾರದ ಚೀಲ ಏರಿಸಿ, ಕಾಲು ಹಾಕಲೂ ಆಗದ ಬಸ್ಸಲ್ಲಿ ೧ ಗಂಟೆ ಪ್ರಯಾಣಿಸಿ ಶಾಲೆಗೆ ಹೋಗುತ್ತಿದ್ದ ಕಾಲ. ಶಾಲೆ, ಮನೆ ಎರಡೇ. ಬೇರೆ ಪ್ರಪಂಚದ ಅರಿವು ಕಡಿಮೆ. ಧರ್ಮ, ಅರ್ಥ...ಗಳ ಬಗ್ಗೆಯೂ ಅಷ್ಟೊಂದು ತಿಳುವಳಿಕೆ ಇಲ್ಲ. ಮೇಷ್ಟ್ರು ಪಾಠ ಹೇಳಿಕೊಟ್ಟುದರಲ್ಲಿ ನನಗೆಷ್ಟು ತಿಳಿಯಿತೋ ಅಷ್ಟೆ. ಅನುಮಾನ, ನನ್ನೊಳಗೆ ಜಿಜ್ಷಾಸೆ ಯಾವುದೂ ಇಲ್ಲ.
ಒಂದು ದಿನ ನಮ್ಮ ಶಾಲೆಗೆ ಕ್ರೈಸ್ತ ಸಂಸ್ಥೆಯವರು ಅವರ ಧರ್ಮ ಪ್ರಚಾರದ "ಹಳೆಯ ಒಡಂಬಡಿಕೆ" ಎಂಬ ನೀಲಿ ಬೈಂಡಿನ ಪುಸ್ತಕವನ್ನು ತಂದು ಮಕ್ಕಳಿಗೆಲ್ಲ ದರ್ಮಕ್ಕೆ ಹಂಚಿದರು. ಅಲ್ಲದೆ ಅದರ ಕುರಿತು ಏನೇನೇ ಹೇಳಿದ್ದರು(ಈಗ ನೆನೆಪಿಲ್ಲ). ಆ ಪುಸ್ತಕ ಇವತ್ತಿಗೂ ಮನೆಯ ಕಾಪಾಟಿನಲ್ಲಿ ಭದ್ರವಾಗಿದೆ. ಪುಸ್ತಕಕದ ಪುಟ ಮಾತ್ರ ತೆರೆದಿಲ್ಲ!"
ಪುಕ್ಕಟೆ ಸಿಗುವುದಾದರೆ ನನಗೊಂದು ನನ್ನಪ್ಪಂಗೊಂದು ಇರಲಿ" ಎಂದು ಕೈ ಮುಂದು ಮಾಡುವಂತ ಜನ ನಾವು.
ನಾವೆಲ್ಲ ಮಕ್ಕಳು ಸಾಲಾಗಿ ಹೋಗಿ ಕೊಟ್ಟ ಪುಸ್ತಕವನ್ನು ತಂದು ನಮ್ಮ ಜಾಗದಲ್ಲಿ ಕುಳಿತೆವು. ಆದರೆ ಒಬ್ಬ ಮುಸ್ಲಿಂ ಹುಡುಗಿಯನ್ನು ಹೊರತಾಗಿ.
ನನಗೆ ಕುಳಿತಲ್ಲೇ ಆಶ್ಚರ್‍ಯ! ಪುಕ್ಕಟೆ ಕೊಡೋ ಪುಸ್ತಕವನ್ನು ಆಕೆಗೆ ಸ್ವೀಕರಿಸಲೇನು? ಆಕೆಯಲ್ಲಿ ಹೋಗಿ ಕೇಳುವಷ್ಟು ಧೈರ್ಯ ಸಾಲಲಿಲ್ಲ. ಮೊದಲೇ ಆಕೆ ತರಗತಿಯಲ್ಲಿ ಸ್ವಲ್ಪ ಧಿಮಾಕಿನ ಹುಡುಗಿ. ಆಗಲೇ ಹುಡಗರಲ್ಲಿ ಮಾತಾಡುವಳು. ಆಶ್ಚರ್ಯವಾ? ಹುಡುಗರಲ್ಲಿ ಮಾತಾಡಿದರೆ ತಪ್ಪೇನು. ಈಗ ಅದು ಸಂಗತಿಯೇ ಅಲ್ಲ. ಸಾಮಾನ್ಯ. ಆದರೆ ನಾನು ಹೋಗುತ್ತಿದ್ದುದು ಬಹಳ ಹಳ್ಳಿ ಶಾಲೆ. ಹೆಸರಿಗೆ ತಕ್ಕಂತೆ ಕುರುಡಾಗಿತ್ತು ಆ ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು... ಕರೆಂಟ್ ಇನ್ನೂ ಬಂದಿರಲಿಲ್ಲ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ನೀರಿಲ್ಲ. ಕುಡಿಯಲು ದೂರದಿಂದ ಪಾಳಿಯ ಪ್ರಕಾರ ನೀರು ತಂದು ಶಾಲೆಯ ಪ್ರಾಂಗಣದಲ್ಲಿಡಬೇಕಾಗಿತ್ತು.ಸಾಲದ್ದಕ್ಕೆ ನಮ್ಮ ಮೇಷ್ಟ್ರುಗಳೂ ಭಯಂಕರ ಸ್ಟ್ರಿಕ್ಟು. ಅದರಲ್ಲೂ ಇವತ್ತಿಗೂ ನನ್ನ ಕನಸಲ್ಲಿ ಬಂದು ಹೆದರಿಸುವವರು ಲೆಕ್ಕದ ಮೇಷ್ಟ್ರು. ಅದ್ಯಕೋ ಗೊತ್ತಿಲ್ಲ ಹೆಚ್ಚಾಗಿ ಗಣಿತದ ಮೇಷ್ಟ್ರುಗಳೇ ಜೋರಿರುತ್ತಾರೆ. ಆದರೂ ನನ್ನ ಶಾಲೆ. ಮೇಷ್ಟ್ರುಗಳ ಬಗ್ಗೆ ಅಭಿಮಾನ ಖಂಡಿತಾ ಇದೆ. ವಿಶಯ ಎಲ್ಲಿಂದ ಎಲ್ಲಗೋ ಹೋಯಿತು. ಆ ಮೇಷ್ಟ್ರ ಬಗೆಗೆ ಹೇಳುವಂಥದ್ದು ಬಹಳ ಇದೆ. ಇನ್ನೊಮ್ಮೆ ಬರೆಯುತ್ತೇನೆ.
ಅಂಥ ಲೆಕ್ಕದ ಮೇಷ್ಟ್ರಗೇ ಎದುರುತ್ತರ ಕೊಟ್ಟ ಹುಡುಗಿ ಆಕೆ. ಇನ್ನು ನಾನು ಹೇಗೆ ಹೋಗಿ ಕೇಳುವುದು? ಪುಸ್ತಕ ಯಾಕೆ ಸ್ವೀಕರಿಲಿಲ್ಲ? ಎಂದು.
ಇವತ್ತು ನಾನೇ ಕೂತು ಯೋಚಿಸಿದಾಗ ಸಿಕ್ಕ ಉತ್ತರ ಇದಾಗಿರಬಹುದೇ?
ಆವರಣ ಕಾದಂಬರಿ ಓದಿ, ಇವತ್ತಿನ ಉಗ್ರಗಾಮಿ ಸಂಘಟನೆಗಳ ಉದ್ದೇಶ ನೋಡಿದರೆ....
ಆಕೆಗೆ ಆಗಲೇ ತನ್ನ ಮುಸ್ಲಿಂ ಧರ್ಮದ ಬಗೆಗೆ ಅಚಲವಾದ ಪ್ರೀತಿ ವಿಶ್ವಾಸ ಇದ್ದಿರಬಹುದೇ?
ತನ್ನ ಧರ್ಮ ಬಿಟ್ಟು ಬೇರೆ ಯಾವ ಧರ್ಮದ ಬಗೆಗಿನ ಅರಿವು ತನಗೆ ಬೇಡ ಎಂದು ಆಗಲೇ ನಿರ್ಧರಿಸಿರಬಹುದೇ?
ಪುಕ್ಕಟೆ ಕೊಟ್ಟರೂ ಅನ್ಯ ಧರ್ಮದ ಬಗೆಗಿನ ಪುಸ್ತಕ, ತನಗೆ ಅಗತ್ಯವಿಲ್ಲ ಎಂಬ ಧೋರಣೆಯೇ?
ತಾನು ಓದದ ಪುಸ್ತಕ ಮನೆಯಲ್ಲಿಟ್ಟು ಪ್ರಯೋಜನವೇನು?ಎಂಬ ನಿಲುವೇ?
ಅರ್ಥವಾಗುತ್ತಿಲ್ಲ...

27 January, 2009

ಮಾತು ಆಡಿದರೆ ಮುಗಿಯಿತು...

ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿರೋ ಬಹಳ ದೊಡ್ಡ ಮೈದಾನ(ಪ್ರಗತಿ ಮೈದಾನ)ದಲ್ಲಿ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ ಅನ್ನೋ ಪ್ರದರ್ಶನ ನಡೆದಿತ್ತು. "ಹೋಗೋಣ 355 ನಂಬರ್ ಬಸ್ ಹತ್ಕೊಂಡು ನನ್ನ ಕಛೇರಿಗೆ ಬಾ" ಅಂತ ಗಂಡ ಕರೆದದ್ದಕ್ಕೆ ಬ್ಯಾಗ್ ಏರಿಸಿ ಹೊರಟೆ.
ನಮ್ಮ ಜೊತೆಗೆ ಅವರ ಗೆಳೆಯ ಆತನ ಹೆಂಡತಿ ಬರುತ್ತೇವೆಂದು ಹೇಳಿದ್ದಕ್ಕೆ ನಾವು ಕಛೇರಿಯಲ್ಲಿ ಕಾದೆವು ಕಾದೆವು. ಅವರುಗಳ ಪತ್ತೆ ಇಲ್ಲ! ಅದು ಬೇರೆ ಆ ದಿವಸ ಪ್ರದರ್ಶನದ ಕೊನೆಯ ದಿನವಾಗಿತ್ತು. ಬರುತ್ತೇವೆಂದು ಹೇಳಿದವರನ್ನು ಬಿಟ್ಟು ಹೋಗುವಂತಿಲ್ಲ, ಹೋದರೆ ಇಡಿಯಾಗಿ ಪ್ರದರ್ಶನವನ್ನು ನೋಡುವಷ್ಟು ಸಮಯವಿರಲಿಲ್ಲ. ಇನ್ನೇನು ಮಾಡುವುದು? ಎಂದು ಮಂಡೆ ಬಿಸಿ ಮಾಡುತ್ತಾ ಕೂತೆವು. ಕೊನೆಗೆ "ಈ ಸಲ ಬೇಡ ಮುಂದಿನ ವರ್ಷ ಯಾರಿಗೂ ಕಾಯುವುದು ಬೇಡ ನಾವೇ ಹೋಗೋಣ ಈಗ ನನ್ನನ್ನು ಬಸ್ ಸ್ಟ್ಯಾಂಡ್ ತನಕ ಬಿಡು ಮನೆಗೆ ಹೋಗುತ್ತೇನೆ" ಎಂದು ಹೇಳಿ ಹೊರಟೆ.

ಘಟನೆ_೧

"ಬಂದ ದಾರಿಗೆ ಸುಂಕವಿಲ್ಲ" ಅಲ್ಲ. ಬಸ್‌ಗೆ ಕಂಡಕ್ಟರ್‌ಗೆ ಹತ್ತು ರೂಪಾಯಿ ಕೊಟ್ಟು ಕುಳಿತೆ.
ನನ್ನ ಪಕ್ಕದಲ್ಲೇ ಬಂದು ನಿಂತ ವ್ಯಕ್ತಿ ಆತನ ಕೆಲವು ದೊಡ್ಡ ದೊಡ್ಡ ಪುಸ್ತಕಗಳನ್ನು ನನ್ನ ಕೈಗಿತ್ತ. ಅರೆ! ನಂ ಮಂಗ್ಳೂರ್ ಬುದ್ದಿ ಜನ ಇಲ್ಲೂ ಇದಾರಾ? ಅಂತ ಮನ್ಸಲ್ಲೇ ಯೋಚಿಸ್ತಾ ಇದ್ದಾಗ "ಲೋ ಮಚಾ ಈ ಬಸ್ ಹಾಸ್ಟೇಲ್ ತನಕ ಹೋಗುತ್ತಲ್ಲ?"
ದಿಲ್ಲಿಯಲ್ಲಿ ಕನ್ನಡ ಮಾತಾಡೋರು? ನನ್ ಕಿವಿ ನೆಟ್ಟಗಾಯಿತು.
"ಏನೋ ಮಾರಾಯಾ ಥೂ ನಂ ಹಾಸ್ಟೇಲ್ ಅಂತೂ...ಈ ಸಲ ಬಿಟ್ ಬಿಡ್ತೀನಿ. ಕಣೋ. ಮೂರು ಸಾವಿರ ವಾಪಾಸ್ ಕೊಡ್ತಾರಲ್ಲ?ಕೊಡ್ದೆ ಏನು ನಂದು ಗವರ್‍ನಮೆಂಟ್ ಸೀಟ್ . ಏನು ನೀರಿಲ್ಲ ಏನಿಲ್ಲ.ಬೆಳಗ್ಗೆ ಬೇಗ ಹೋದ್ರೂ ಬಿಸಿ ನೀರಿಲ್ಲ ಕಣೋ. ನೆನ್ನೆ ಪಲ್ಯ ಚೆನಾಗ್ ಮಾಡಿದ್ರಲ್ಲ, ಅದೇನೋ ಸೊಪ್ಪಿಂದು..." ಹೀಗೆ ಸಂಭಾಷಣೆ ನಡೆಯುತ್ತಿತ್ತು.
ಅಪರೂಪಕ್ಕೆ ಪರವೂರಲ್ಲಿ ಕನ್ನಡದವರು ಸಿಕ್ಕಾಗ ಕರ್ನಾಟಕದಲ್ಲಿ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂತೆ ಕನ್ನಡ, ಕನ್ನಡಿಗರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೂ ನಾನು ಸುಮ್ಮನೆ ಕುಳಿತು ಅವರುಗಳ ಸಂಭಾಷಣೆ ಕೇಳುತ್ತಿದ್ದೆ.
ಆತ ಕೊಟ್ಟ ಪುಸ್ತಕದಲ್ಲಿ ಯಾವ್ದೋ ಮೇಲ್ ಐಡಿ ಇತ್ತು. ನನ್ನ ಕಾಲ ಮೇಲಿದ್ದ ಆ ಪುಸ್ತಕವನ್ನ ಇನ್ನೊಬ್ಬ ಇಣುಕಿ ನೋಡಿದ. (ಫಿಮೇಲ್ ಐಡಿ ಇರಬಹುದೇನೋ ಅಂತ)
"ಲೋ ಅದು ಅವ್ರ ಬುಕ್ ಅಲ್ಲ ಕಣೋ...ಅವ್ರ ಮೇಲ್ ಐಡಿ ಅಂತ ನೋಡ್ತಾ ಇದ್ಯಾ? ಅದು ನಂ ಸರ್‌ದು...ಈ ಬಸ್ ಚೆನ್ನಾಗಿದ್ಯಯಲ್ಲ. ಕೆಲವು ಬಸ್ ಏನು ಗಲೀಜಿರುತ್ತೆ ಮಾರಾಯ, ಯಾಕೆ ಬಸ್ ನಿಂತು ಬಿಡ್ತು?"
"ಅದೇ ಮೇಲಿಂದ ಟ್ರೇನ್ ಹೋಗ್ತಾ ಇದ್ಯಲ್ಲ!",
"ತಲೆ ನಿಂದು".
ಹೀಗೆ ಅವ್ರ ಡೈಲಾಗ್‌ಗಳು ಮುಂದುವರಿಯುತ್ತಿತ್ತು. ಕುಳಿತಲ್ಲೇ ನಂಗೆ ನಗು. ಈ ಹುಡುಗರು ನನ್ ಬಗ್ಗೆ ಇನ್ನು ಏನೆಲ್ಲಾ ಹೇಳ್ತಾರೆ ಅನ್ನೋ ಕುತೂಹಲ. ಅಷ್ಟೊತ್ತಿಗೆ ಅವರಿಗೆ ಹಿಂದೆ ಸೀಟ್ ಸಿಕ್ತು. ಆ ಹುಡುಗ ನನ್ನತ್ರ ಪುಸ್ತಕ ಕೇಳಿ "ಥ್ಯಾಂಕ್ಯೂ" ಅಂದಾಗ "ಪರವಾಗಿಲ್ಲ , ಥ್ಯಾಂಕ್ಯೂ ಎಲ್ಲ ಬೇಡ ಬಿಡಿ" ಅಂದೆ.
ನಿಂತಲ್ಲೇ ಶಾಕ್ ಕೊಟ್ಟಂಗಾಯ್ತು ಅವರಿಗೆ. "ಮೇಡಮ್ಮು ಕನ್ನಡದವ್ರಾ? ಮೊದಲೇ ಹೇಳೋದಲ್ವಾ?" ಅಂತ ಜೋರಾಗಿ ಹೇಳಿದಾಗ ಬಸ್ಸಲ್ಲಿದ್ದವರೆಲ್ಲ ನಮ್ಮತ್ತ ತಿರುಗಿ ನೋಡಿದರು.
"ಏನೇನು ಡಯಲಾಗ್ ಹೇಳ್ತೀರಾ ಅಂತ ಕೇಳ್ಕಂಡು ಮತ್ತೆ ನಿಮ್ಮತ್ರ ಮಾತಾಡುವ ಅಂತಿದ್ದೆ" ಅಂದೆ.
ಪಾಪ ಹುಡುಗರು ಐಎಸ್ ಕೋಚಿಂಗಿಗೆ ಮೈಸೂರು, ಕಾರವಾರದಿಂದ ಬಂದವರಂತೆ.

ಘಟನೆ_

ಹೀಗೇ ಇನ್ನೊಂದು ಘಟನೆ ನನಗಾಗಿತ್ತು. ಕಾಲೇಜಿಗೆ ಹೋಗುತ್ತಿದ್ದ ಸಮಯ. ನನ್ನ ಸೌಂಡ್ ಬಾಕ್ಸ್ ಒಳಗೆ ವಾಲ್ಯೂಮ್ ಸ್ವಲ್ಪ ದೊಡ್ಡದಾಗಿ ಫಿಕ್ಸ್ ಮಾಡಿದಾನೆ ಆ ಭಗವಂತ!
ಆಗ ಮಂಗಳೂರಿನಲ್ಲಿ ಮರಕಡ ಸ್ವಾಮಿಗಳ ಬಗ್ಗೆ ಏನೋ ಗುಸು ಗುಸು, ಬಿಸಿ ಬಿಸಿ ಚರ್ಚೆ ಜೋರಾಗೇ ನಡೆಯುತ್ತಿತ್ತು. ಅದನ್ನ ನನ್ನ ಮುಸ್ಲಿಂ ಗೆಳತಿಯೊಬ್ಬಳ ಹತ್ತಿರ ಹೇಳುತ್ತಿದ್ದೆ. ಆಕೆಗೆ ಮಾತ್ರವಲ್ಲ ಬಸ್ಸಲ್ಲಿದ್ದವರಿಗೆಲ್ಲ ಕೇಳುವಷ್ಟು ಜೋರಾಗಿ ಸ್ಪಿರಿಟ್ಟಲ್ಲಿ ಹೇಳುತ್ತಿದ್ದೆ. ಅದರ ಜೊತೆ ಒಡಿಯೂರು ಸ್ವಾಮಿಗಳು ಮರದ ಗೆಲ್ಲಿನಲ್ಲಿ ಮಂಗನಂತೆ ಹಾರಾಡುವುದನ್ನು (ಸ್ವತಃ ನಾನು ನೋಡಿಲ್ಲ. ನೋಡಿದವರು ಹೇಳಿದ್ದನ್ನು ಕೇಳಿದ್ದೇನೆ.) ಅವರ ಬಗೆಗಿನ ಊಹಾಪೋಹವನ್ನೆಲ್ಲ ನನಗೆ ಗೊತ್ತಿದ್ದ ಪಾಂಡಿತ್ಯವನ್ನು ಆಕೆಯ ಎದುರು ಪ್ರದರ್ಶಿಸುತ್ತಿದ್ದೆ. ಪ್ರಪಂಚದ ಗೊಡವೆಯೂ ಇಲ್ಲದೆ!
ಇದ್ದಕ್ಕಿದ್ದಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತ ಸುಮಾರು ೫೦ ವರ್ಷದ ಹೆಂಗಸೊಬ್ಬಳು "ಸ್ವಾಮಿಗಳ ಬಗ್ಗೆ ನಿಮಗೇನು ಗೊತ್ತು? ಅವ್ರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಾವು ಅವರ ಭಕ್ತರು" ಅನ್ನಬೇಕೆ?
ನನ್ನ ಎದೆ ದಸಕ್ ಎಂದಿತು. ಕುಳಿತಲ್ಲೆ ಮೈ ಬಿಸಿಯಾಯಿತು. ಆಕೆ ಬಸ್ಸಲ್ಲಿದ್ದವರೆಲ್ಲರೆದುರು ನನ್ನ ಮೇಲೆ ಎಗರಾಡಿದರೆ? ನನ್ನತ್ರ ಎದುರುತ್ತರ ಕೊಡುವಷ್ಟು ಪಾಂಡಿತ್ಯವೂ ಇಲ್ಲ, ಧೈರ್ಯವೂ ಇಲ್ಲ. ನನ್ನ ಪುಣ್ಯಕ್ಕೆ ಹಾಗೇನೂ ಆಗಿಲ್ಲ.

ಘಟನೆ_೩

ನನ್ನ ಅತ್ತೆಗೂ ಹೀಗೇ ಆಗಿತ್ತಂತೆ. ಅಜ್ಜಿ ಮನೆಗೆ ಹೋದಾಗ ನಾವೆಲ್ಲ ನೆಂಟರು ಸೇರಿರುವಾಗ ಹಳೆಯ ಘಟನೆಗಳ ಕುರಿತು ಮೆಲುಕು ಹಾಕುವ ಪದ್ದತಿ.
ನನ್ನ ಸೋದರಮಾವನಿಗೆ ಪುತ್ತೂರಿನಲ್ಲಿ "ಕಲ್ಪವೃಕ್ಷ" ಅನ್ನುವ ಐಸ್ ಕ್ರೀಮ್ ಪಾರ್ಲರ್ ಇತ್ತು. ನಾನು ಸಣ್ಣದಿರುವಾಗ ಪುತ್ತೂರಿಗೆ ಹೋದರೆ ಖಾಯಂ ಮಾವನ ಅಂಗಡಿಯಲ್ಲಿ ಪುಕ್ಕಟೆ ಗಡ್‌ಬಡ್. ನನ್ನಂತವರು ಪುಕ್ಕಟೆ ತಿಂದು ತಿಂದು ಲಾಸ್ ಆಗಿ ಐಸ್ ಕ್ರೀಮ್ ಜೊತೆ ಅಂಗಡಿಯೂ ಕರಗಿ ಹೋಯಿತೋ? ಗೊತ್ತಿಲ್ಲ.
ಅತ್ತೆ ಕ್ಯಾಶಿಯರ್ ಕುರ್ಚಿಯಲ್ಲಿ ಕುಳಿತಿದ್ದ ದಿನ ನಾಲ್ಕೈದು ಹುಡುಗರು ಐಸ್ ಕ್ರೀಮ್ ತಿನ್ನುತ್ತಾ ಅತ್ತೆಯ ಜೊತೆ ಮಾತನಾಡಲು ತೊಡಗಿದರಂತೆ. ವಿಶಯ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಧರ್ಮದ ಬಗ್ಗೆ ತಿರುಗಿತಂತೆ.
"ಮುಸ್ಲಿಂ ಜನರೇ ಮೋಸ, ಅವರ ವರ್ತನೆಯೇ ವಿಚಿತ್ರ, ಯಾರನ್ನು ನಂಬಿದರೂ ಅವರನ್ನು ನಂಬಬಾರದು" ಅಂತೆಲ್ಲಾ ಅತ್ತೆಯ ಭಾಷಣ.
ಅವರೆಲ್ಲಾ ಇಸ್ ಕ್ರೀಮ್ ತಿಂದು ದುಡ್ಡು ಕೊಡುವಾಗ "ಅಕ್ಕ ನಾವೂ ನೀವು ಬೈದ ಜಾತಿಗೇ ಸೇರಿದವರು." ಅಂದಾಗ ಅತ್ತೆ ಸುಸ್ತಂತೆ!
ಅದಕ್ಕೇ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ದೂರುವ ವಿಶಯ ಮಾತಾಡಬೇಡಿ. ಮಾತನಾಡಿದರೂ ಹೊಗಳುವ ವಿಶಯ ಮಾತಾಡಿ.

12 January, 2009

ಚಳಿ ಚಳಿ ತಾಳೆನು ದಿಲ್ಲಿ ಚಳಿಯಾ...


ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಮೈಗೆ ಥರ್ಮಲ್ ವೇರ್, ಮೇಲಿಂದ ಅಂಗಿ, ಅದರ ಮೇಲಿಂದ ಸ್ವೆಟರ್, ಶಾಲು. ಇದಿಷ್ಟು ಸಾಕಾಗಿಲ್ಲವೆಂದರೆ ಜಾಕೆಟ್ಟು, ಕಾಲಿಗೆ ಸಾಕ್ಸು. ಮಣದ ಭಾರದ ಬಟ್ಟೆ ಹೇರಿಕೊಂಡರೂ ಮೈ ನಡುಗಿಸುತ್ತದೆ ದಿಲ್ಲಿ ಚಳಿ.
ಜೀವನದಲ್ಲಿ ಈತನಕ ಇಷ್ಟು ಅಂಗಿ ಹಾಕಿಯೇ ಇಲ್ಲ. ಅದು ಬಿಡಿ ಸ್ವೆಟರ್ ಹಾಕಿದ ನೆನಪೂ ಇಲ್ಲ. ಕಳೆದ ವರ್ಷ ಅಮ್ಮಮ್ಮ (ಅಜ್ಜಿ) ಕಾಶಿಗೆ ಹೋಗಿದ್ದಾಗ ನನಗಾಗಿ ಒಂದು ಸ್ವೆಟರ್ ತಂದಿದ್ದರು. ಅಮ್ಮಮ್ಮ ಹೇಗೂ ಗಿಫ್ಟ್ ಕೊಡುವಾಗ ಉಪಯೋಗಕ್ಕೆ ಬಾರದ ಸ್ವೆಟರ್ ಕೊಡುವ ಬದಲು ಡ್ರೆಸ್ಸಾದರೂ ತಂದಿದ್ದರೆ ಚೆನ್ನಾಗಿತ್ತು ಅಂತ ಮನಸೊಳಗೇ ಅಂದುಕೊಂಡು, ಒಮ್ಮೆ ಹಾಕಿ ಕಪಾಟೊಳಗಿಟ್ಟಿದ್ದೆ.ಈಗ ಗೊತ್ತಾಯಯ್ತು. ಅಮ್ಮಮ್ಮನ ಸಿಕ್ಸ್ ಸೆನ್ಸಿಗೆ ಆಗಲೇ ಗೊತ್ತಿತ್ತೇನೊ ನಾನು ಮುಂದೆ ದಿಲ್ಲಿಯ ಚಳಿ ಅನುಭವಿಸಲಿರುವೆನೆಂದು. ಈಗ ಮನೆಯಲ್ಲಿ ದಿನಾ ನನ್ನನ್ನು ಚಳಿಯಿಂದ ಕಾಪಾಡ್ತಿರೋದು ಅದೇ ಸ್ವೆಟರ್. ಅಮ್ಮಮ್ಮನಿಗೆ ೪ ಡಿಗ್ರಿ ಸೆಲ್ಶಿಯಸ್ ಚಳಿಯಷ್ಟು ಆಳವಾದ ಥ್ಯಾಂಕ್ಸ್ ಹೇಳಲೇ ಬೇಕು.
ಇಲ್ಲಿ ತನಕ ಕಾಸರಗೋಡು, ಮಂಗಳೂರಲ್ಲಿದ್ದ ನಂಗೆ ಚಳಿ ಎಂದರೇನೆಂದು ಅನುಭವಿಸಿ ಖಂಡಿತಾ ಗೊತ್ತಿರಲಿಲ್ಲ. ಅಲ್ಲಿಂದ ನೇರ ಇಂಥ ಘನಘೋರ ಚಳಿ ಪ್ರದೇಶಕ್ಕೆ ಬಂದರೆ? ಬಾಣಲಿಯಿಂದ ಪ್ರಿಡ್ಜಿಗೆ ಬಿದ್ದಂತಾಗುತ್ತದೆ. ಅಬ್ಬಬ್ಬಾ! ಒಮ್ಮೆಯಂತೂ ಶರೀರದ ಕಂಡೆನ್ಸರ್ ವೀಕ್ ಆಗೋದು ಗ್ಯಾರೆಂಟಿ.
ಮೈಯಲ್ಲಿ ಜ್ವರ! ಮೂಗಲ್ಲಿ ಸೊರ ಸೊರ!
ಆದರೂ ಈ ವಾತಾವರಣವೂ ಒಂಥರಾ ಮಜಾ. ಇಷ್ಟಲ್ಲಾ ಅಂಗಿ ಹಾಕ್ಬೇಕಲ್ಲಾ ಅನ್ನೋ ಬೇಜಾರಿನ ಹೊರತಾಗಿ ದಿನಾ ಬಟ್ಟೆ ತೊಳೆಯೋ ಕೆಲಸ ಇಲ್ಲ. ಮನೆ ಎಸಿಗಿಂತ ಕೂಲ್. ಬೆಚ್ಚಗೆ ರಜಾಯಿ ಹೊದ್ದು ಮಲಗೋ ಸುಖ ಈಗಲೇ ಅನುಭವಿಸಬೇಕು. ಬೆಳಗ್ಗೆ ಗಂಟೆ ಎಂಟಾದರೂ ಬೆಳಕಿಲ್ಲ. ಬಿಸಿ ಬಿಸಿ ಹಬೆಯಾಡೋ ಚಾಹ ಕುಡಿಯಲು ಮಜಾ ಬರುವುದೇ ಈಗ.
ಬೆಳಗ್ಗೆ ಮನೆಯಿಂದ ಹೊರಗೆ ಕಾಲಿಟ್ಟೆಯೋ ನೂರು ಇನ್ನೂರು ಮೀಟರ್ ದೂರಕ್ಕಿಂತ ಆಚೆ ಏನು ಕಾಣಿಸೋದಿಲ್ಲ. ೨೦೦೭ರ ಗಿನ್ನಿಸ್ ವರ್ಲ್ಡ ರೆಕಾರ್ಡಿನ ಪ್ರಕಾರ ವಿಶ್ವದ ಅತಿ ದೊಡ್ಡ ಮತ್ತು ಅಗಲವಾಗ ಹಿಂದೂ ದೇವಾಲಯ ಎಂದು ಪ್ರಸಿದ್ದಿಪಡೆದ ಅಕ್ಷರಧಾಮ ದೇವಸ್ಥಾನವಿರುವುದು ನಮ್ಮ ಮನೆಯಿಂದ ೨ಕಿಮೀ. ದೂರದಲ್ಲಿ. ಸದ್ಯ ಒಂದು ಮಧ್ಯಾಹ್ನ ಆ ದಾರಿಯಾಲ್ಲಾಗಿ ಹೋದರೆ ಅಕ್ಷರಧಾಮ ನಾಪತ್ತೆ. ಪೂರ್ತಿಯಾಗಿ ಮಂಜು ಮುಸುಕು!
ಮಧ್ಯಾಹ್ನ ಹೋದರೆ ಇಂಡಿಯಾ ಗೇಟೂ ಇಲ್ಲ, ರಾಷ್ಟ್ರಪತಿ ಭವನವೂ ಇಲ್ಲ!
ದೇಶದ್ದಲ್ಲೆಲ್ಲ ಉಗ್ರಗಾಮಿಗಳ ಹಾವಳಿ. ಇಲ್ಲಿ ಜನರೆಲ್ಲ ಉಗ್ರಗಾಮಿಗಳಂತೆ, ಕಣ್ಣು ಮೂಗಿನ ಹೊರತಾಗಿ ಬೇರೆಲ್ಲ ಭಾಗ ಫುಲ್ ಪ್ಯಾಕ್.
ಡೆಲ್ಲಿಯ ಅಂದವಿರುವುದು ಇಲ್ಲಿನ ದೊಡ್ಡ ದೊಡ್ಡ ಪಾರ್ಕ್ ಮತ್ತು ವೃತ್ತ(ಸರ್ಕಲ್, ಗೋಲ್ ಚಕ್ಕರ್)ದಿಂದ. ಖಂಡಿತವಾಗಿಯೂ ನಮ್ಮ ಮಂಗಳೂರಿನ ಕದ್ರಿ ಪಾರ್ಕ್, ಪಂಪ್‌ವೆಲ್ ವೃತ್ತದಂತಿಲ್ಲ. ಚಂದವಾಗಿ ಇಟ್ಟಿದ್ದಾರೆ. ಚಳಿಗಾಲದಲ್ಲಿ ಇಂತಹ ಪಾರ್ಕು, ವೃತ್ತ, ಹೂದೋಟಗಳಿಗೆ ಹೋದರೆ ಅಂದದ ಹೂವುಗಳ ಚೆಂದದ ನೋಟ ಬೋನಸ್. ನಮುನಮೂನೆ ಕಣ್ಸೆಳೆವ ಬಣ್ಣಗಳ ಡೇಲಿಯಾ, ಸೇವಂತಿಗೆ ಹೂವು ಹಾಕಲು ಬೇಕಾದಷ್ಟು ಬಟ್ಟೆ, ಇರಲು ಸರಿಯಾದ ಮನೆ ಉಳಿದ ಎಲ್ಲ ಸೌಕರ್ಯ ಇದ್ದವರಿಗೆ ಮಾತ್ರ ಚಳಿಗಾಲದ ಈ ಮಜ. ಹೇಳಿಕೇಳಿ ನಮ್ಮದು ಬಡ ರಾಷ್ಟ್ರ! ಬಡತನ ನಮ್ಮ ದೇಶದ ರಾಜಧಾನಿಯನ್ನು ಬಿಡಲು ಸಾದ್ಯವೇ? ಚಂದದ ರಸ್ತೆಗಳ ನಡುವೆ ಅಷ್ಟೇ ಚಂದದ ವೃತ್ತ, ಪಕ್ಕದಲ್ಲಿ ಹರುಕಲು ಬಟ್ಟೆ ಹಾಕಿ ನಡುಗುವ ದೇಹ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಇಂತಹವರು ತಮ್ಮ ದೇಹವನ್ನು ಅದೆಷ್ಟು ಬಟ್ಟೆಗಳಿಂದ ರಕ್ಷಿಸಬಹುದು? ಊಟ, ಬಟ್ಟೆ, ಮನೆ ಸರಿಯಾಗಿಲ್ಲದ ಅದೆಷ್ಟೋ ಜನರು ಇಂತಹ ಘನಘೋರ ಚಳಿಯಲ್ಲಿ ಇನ್ನೇನಾಗಲು ಸಾದ್ಯ? "ಚಳಿಯಿಂದ ಉತ್ತರಭಾರತದಲ್ಲಿ ಇಷ್ಟು ಜನರ ಸಾವು" ಅಂತ ಪೇಪರಿನಲ್ಲಿ ಓದುವಾಗ ಮೊದಲು ಆಶ್ಚರ್ಯ ಆಗುತ್ತಿತ್ತು. ಈಗ ಅದರ ಅರ್ಥವೇನೆಂದು ತಿಳಿಯಿತು.
ಅದೇನಾದರೂ ಇರಲಿ, ಒಮ್ಮೆ ಡೆಲ್ಲಿಗೆ ಬಂದು ಚಳಿಯ ಅನುಭವ ಪಡೆಯಿರಿ.