24 May, 2009

ಕಾಡಿನ ಕತೆಯೊಂದಿಗೆ ಹಾಜರಾದ ಜೋಗಿ...

ಜೋಗಿಯವರ ಅದ್ಭುತ ಕತಾಶೈಲಿಯಿಂದ ಹೊಮ್ಮಿದ ಮತ್ತೊಂದು ಹೊಸ ಕಾದಂಬರಿ ‘ಚಿಟ್ಟೆ ಹೆಜ್ಜೆ ಜಾಡು’. ಕಾಡಿನ ಜಾಡು ಹಿಡಿದು ಹೊರಟ ಕತೆ.
ಮರ ಹೆಮ್ಮರವಾಗಿ ಅದರ ರೆಂಬೆ ಕೊಂಬುಗಳೆಲ್ಲ ಬೆಳೆದು ದೊಡ್ಡದಾದರೂ ಅದು ಗಟ್ಟಿಯಾಗಿ ನಿಂತಿರುವುದು ಮಾತ್ರ ಅದರ ಬೇರನ್ನು ಹಿಡಿದು. ಅಂತೆಯೇ ಜೋಗಿಯವರು ಬೆಂಗಳೂರಿನ ಕಾಂಕ್ರೀಟ್ ಕಾಡಿನ, ಕೆಲಸದ ಒತ್ತಡಗಳ ಮಧ್ಯೆ ಇದ್ದರೂ ಅವರ ಬರವಣಿಗೆಯ ತುಡಿತವಿರುವುದು, (ಮೂಲವಿರುವುದು) ಅವರು ಹುಟ್ಟಿದ ಪರಿಸರದಲ್ಲೇ. ಆದ್ದರಿಂದಲೇ ಕಾಡಿನ ಕತೆಗಳನ್ನುನ್ನು ಅಷ್ಟು ನವಿರಾಗಿ, ಸಮರ್ಥವಾಗಿ ಲೇಖಕನಿಗೆ ಬರೆಯಲು ಸಾಧ್ಯವಾದುದು.
‘ಕಾಡಿನ ಕತೆ’ ‘ನದಿಯ ನೆನಪಿನ ಹಂಗು’ವಿನಂತೆ:
ಜೋಗಿಯವರ ‘ನದಿಯ ನೆನಪಿನ ಹಂಗು’ ಕಾದಂಬರಿ ಆರಂಭವಾಗುವುದೇ ಉಪ್ಪಿನಂಗಡಿಯ ನಿರಂಜನ ಎಂಬವನ ಸಾವಿನ ಅಥವಾ ಕೊಲೆಯ ಗೊಂದಲದಿಂದ. ಮುಂದೆ ಕತೆ ಪೂರ್ತಿ ಆತನ ಸಾವಿನ ಸುತ್ತಲೇ ಸುತ್ತುತ್ತಿರಬಹುದೆಂದು ಓದುಗ ತಿಳಿದಿದ್ದರೆ ಅದು ಅವರ ದಡ್ಡತನವಷ್ಟೇ. ಕೊಲೆಯ/ಸಾವಿನ ವಿಷಯವನ್ನು ಆರಂಭದಲ್ಲಿ ಓದುಗರ ತಲೆಯೊಳಗೇರಿಸಿ, ಮುಂದೆ ಕತೆ ಹಲವು ನೈಜ ಘಟನೆಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ. ಅಂತೆಯೇ ‘ಚಿಟ್ಟೆ ಹೆಜ್ಜೆ ಜಾಡು’ ಕೂಡಾ. ನಾಪತ್ತೆಯಾದ ಮೂವರನ್ನು ಮುಂದಿಟ್ಟು ಕತೆ ಕಾಡಿನೊಳಗಿನ ಸತ್ಯಗಳನ್ನು ಓದುಗರ ಮುಂದೆ ತೆರೆದಿಡುವಲ್ಲಿ ಸಮರ್ಥವಾಗಿದೆ.
ಪಶ್ಚಿಮ ಘಟ್ಟದ ಕಾಡಿನ ನಡುವೆ ನಡೆಯುವ ಕತೆ. ಕಾಡಿನಲ್ಲಿ ಕಳೆದು ಹೋದ ಮೂವರನ್ನು ಹುಡುಕುವ ನೆಪದಲ್ಲಿ ಬಂದ ನಿರೂಪಕನಿಗೆ ಕಾಡಿನ ಒಳಗಿನ ಮರ್ಮ ತಿಳಿಯುತ್ತದೆ.ಆರಂಭದಲ್ಲಿ ಪ್ರೀತಿಯ ವಿಷಯಕ್ಕೆ ಒಬ್ಬನನ್ನು ಕೊಲೆ ಮಾಡಲು ಉಳಿದಿಬ್ಬರ ಸಂಚಿನಿಂದ ಮೂವರು ಕಾಡಿಗೆ ಆಮಮಿಸಿ ನಾಪತ್ತೆಯಾದರು ಎಂಬ ಸೂಚನೆ. ಓದುತ್ತಾ ಓದುತ್ತಾ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಎಂಎ ಮಾಡುತ್ತಿರುವ ಹಾಗೂ ತೀವ್ರವಾದ ಪರಿಸರ ಪ್ರೇಮಿ ತನ್ವಿಯನ್ನು ಹುಡುಕಲು ಕಾಡಿಗೆ ಹೊರಟು ಬಂದವರೆಂಬ ಮಾಹಿತಿ, ಕೊನೆಗೆ ಕಂಬಳಿ ಹುಳದ ಬಾಯಿಗೆ ತುತ್ತಾದರೋ ಎಂಬ ಅನುಮಾನ. ಇದನ್ನು ಓದುವಾಗ ಕೇವಲ ಕಂಬಳಿ ಹುಳ ಮನುಷ್ಯರನ್ನು ಮುಕ್ಕಿ ತಿನ್ನಬಹುದೇ ಎಂಬ ಧಿಗಿಲುಂಟಾಗುತ್ತದೆ.
ಆದರೆ ಇದೆಲ್ಲಕ್ಕಿಂತ ಬೇರೆಯೇ ಆದ ಬಲವಾದ ಕಾರಣ ಇದೆ. ಅದೇ ಬಂಡವಾಳಶಾಹೀ ದೋರಣೆ. ಬಂಡವಳಶಾಹೀ ನೀತಿ ಮಾನವ ಜೀವನದ ಕಣಕಣದಲ್ಲೂ ಗೋಚರಿಸಿತ್ತಿರುವ ಇಂದಿನ ದಿನಗಳಲ್ಲಿ ಯಾರ ಹಂಗೂ ಇಲ್ಲದೆ ಮರ, ಗಿಡ, ಕಾಡು, ಪ್ರಾಣಿ, ಪಕ್ಷಿ, ಚಿಟ್ಟಗಳಿರುವ ಸುಂದರ, ಸ್ವಚ್ಛಂದವಾದ ಪರಿಸರ, ವಾತಾವರಣವನ್ನು ಬಿಟ್ಟೀತೇ?
ಭಾರತದ ನದಿಗಳನ್ನೆಲ್ಲ ಜೋಡಿಸುವ ನ್ಯಾಷನಲ್ ಲಿವರ್ ಲಿಂಕ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬರುವ ನೇತ್ರಾವತೀ-ಹೇಮಾವತಿ ಯೋಜನೆಯನ್ನು ಕಾರ್ಯಗತಗೊಳಿಸಲು ಬಂದಿರುವ ನೆದರ್ಲ್ಯಾಂಡ್ ಸಂಸ್ಥೆಯವರ ಕೈವಾಡವಿರುವ ಸ್ಪಷ್ಟ ಸೂಚನೆ ದೊರೆಯುತ್ತದೆ. ಈ ಯೋಜನೆಯ ವಿರುದ್ಧ ಹೋರಾಡಲು ಹೋದ ತನ್ವಿ ನೀರಿನ ಸೆಳೆತದ ವಿರುದ್ಧ ದಿಕ್ಕಿಗೆ ಈಜಾಡಲು ಹೋಗಿ ಕೊಚ್ಚಿಹೋದಂತೆ ಮಾಯವಾದಳು ಎಂಬ ಸೂಚನೆ ಕಾದಂಬರಿಕರ ಮುಂದಿಡುತ್ತಾನೆ. ಆಕೆಯನ್ನು ಹುಡುಕಲು ಬಂದ ಮೂವರೂ ನಿಗೂಢವಾಗಿ ನಾಪತ್ತೆಯಾಗುತ್ತಾರೆ. ಕಾಡಿನ ಒಳಗೆ ಹಾಗೂ ಅದರ ಸುತ್ತಲಿನ ಪರಿಸರದ ಆಗುಹೋಗುಗಳನ್ನು ಅಂತಾರಷ್ಟ್ರೀಯ ಸಂಸ್ಥೆಯವರಿಗೆ ತಿಳಿಸಲು ಪಟ್ಟಣದ, ಮನುಷ್ಯರ ಸಹವಾಸವೇ ಬೇಡವೆಂದು ಕಾಡಿನೊಳಗೆ ಮನೆಮಾಡಿ ಕುಳಿತಿರುವಂತೆ ಕಾಣಿಸಿಕೊಳ್ಳವ, ಗುಢಾಚಾರದ ಕೆಲಸ ಮಡುವ ಭೋಜರಾಜ. ಆದರೆ ಈ ಎಲ್ಲ ವಿವರಗಳೇ ಅಂತಿಮ ಸತ್ಯವೆಂದು ಎಲ್ಲೂ ಕಾದಂಬರಿಕಾರ ಹೇಳಿಕೊಳ್ಳವುದಿಲ್ಲ. ಓದುಗರ ಗಮನಕ್ಕಷ್ಟೇ ತರುವ ಕೆಲಸವಿದೆ.
ಫಾರೆಸ್ಟ್ ಆಫೀಸರ್ ವಾಗ್ಲೆ, ಅಲ್ಲೇ ನೌಕರಿಯಲ್ಲಿರುವ ಮುಗ್ಧನಂತೆ ನಟಿಸುವ ಸಾಂತು, ಕೃಷ್ಣಪ್ಪ, ಫಾರಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ನೌಕರಿಗಾಗಿ ಹಪಹಪಿಸುವ ಕೆಂಚ ಇವರೆಲ್ಲರ ಬದುಕೂ ಸುಂದರ ಪ್ರಕೃತಿತಂತೆ ಗೋಚರಿಸುವ ಕಾಡಿನೊಳಗೆ ನಡೆಯುವ ಕೆಟ್ಟ ರಾಜಕೀಯದಲ್ಲಿ ಲೀನವಾದುದು ಎಂಬ ಅಂತಿಮ ಸತ್ಯ ನಿರೂಪಕನಿಗೂ ಓದುಗರಿಗೂ ಅರ್ಥವಾಗುತ್ತದೆ.
ಕಾದಂಬರಿಯ ಕೊನೆಯ ಹಂತದಲ್ಲಿ ಬರುವ ಮುಧೋಳ ನಾಯಿ ಮತ್ತು ನಿರೂಪಕನ ನಡುವೆ ನಡೆಯುವ ಸಂಘರ್ಷವಂತೂ ಅದ್ಭುತ ರೋಚಕತೆಗೆ ಹಿಡಿದ ಕನ್ನಡಿ.
ಕೊನೆಗೂ ಕಾದಂಬರಿ ಓದುಗರನ ಮುಂದೆ ಹಲವು ನಿಗೂಢಗಳಿಗೆ ಅರ್ಥ ಕಲ್ಪಿಸದೆ ಮುಗಿದುಬಿಡುತ್ತದೆ.
ಕಾದಂಬರಿ ಓದುತ್ತಿದ್ದರೆ ಬೇಡವೆಂದರೂ ತೇಜಸ್ವಿಯವರ ಬರಹಗಳು ನೆನಪಿಗೆ ಬರುತ್ತವೆ. ಜೋಗಿಯವರದೇ ಆದ ‘ರಾಯಭಾಗದ ರಹಸ್ಯ ರಾತ್ರಿ’ ಕಥಾ ಸಂಕಲನದಲ್ಲಿರುವ ರೋಚಕ ಕತೆಗಳು ಮನಸೊಳಗೆ ಮುತ್ತಿಡುತ್ತವೆ.
"ತುಂಬಿಕೊಂಡು ನಕ್ಷತ್ರಗಳನ್ನು ಲೆಕ್ಕ ಹಕುತ್ತಾ ಮಲಗಿದರೆ ಎಚ್ಚರವಾಗುವ ಹೊತ್ತಿಗೆ ಚಂದ್ರ ಸೂರ್ಯನಾಗಿರುತ್ತಿದ್ದ." ಇಂತಹ ಸುಂದರ ಸಾಲುಗಳು ಅಲ್ಲಲ್ಲಿ ಓದುಗರಿಗೆ ಮುದನೀಡುತ್ತದೆ.
ನಿರೂಪಕ ಆತನ ಗೆಳೆಯ ಶಿವು, ಫಾರೆಸ್ಟ ಡಿಪಾರ್ಟ್‌ಮೆಂಟಿನಲ್ಲಿ ಸಣ್ಣ ಹುದ್ದೆಯಲ್ಲಿರುವ ಸಾಂತು ಆತನ ಗೆಳೆಯ ಕೆಂಚ ಇವರೆಲ್ಲ ಕಳೆದು ಹೋದ ಮೂವರನ್ನು ಹುಡುಕುತ್ತಾ ಕಾಡಲ್ಲಿ ಸಾಗುತ್ತಿದ್ದಂತೆ ಅವರ ಹಿಂದಿನಿಂದ ಕಾಡಿನಲ್ಲಿ ನಾವೂ ಸಾಗುತ್ತಿದ್ದೇವೆಯೇನೋ ಎಂಬಷ್ಟರ ಮಟ್ಟಿಗೆ ಕಾಡಿನ ವರ್ಣನೆ ಆಪ್ತವಾಗಿದೆ.

ಅಂತಿಮ ಸಂದೇಶ: ಕೊನೆಗೂ ಕಾದಂಬರಿ ಓದಿದ ಮೇಲೆ ನಮಗೆ ನೀಡುವ ಸಂದೇಶವೇನು ಎಂಬುದು ಕಾದಂಬರಿಯ ಸಾಲುಗಳಲ್ಲೇ ಓದಿ. "ಜಾಗತೀಕರಣ ನಮ್ಮ ಕಲೆಗಳನ್ನೂ ಸಾಹಿತ್ಯವನ್ನೂ ಭಾಷೆಯನ್ನೂ ಕೊಲ್ಲವ ಹಾಗೆ. ನಮ್ಮ ಚಟುವಟಿಕೆಗಳನ್ನೂ ನಿಯಂತ್ರಿಸತೊಡಗುತ್ತದೆ. ನಮ್ಮ ಸಹಜ ಉಲ್ಲಾಸ, ಪ್ರತಿಭಟನೆ, ಸಾತ್ವಿಕ ಸಿಟ್ಟು, ಕಾಡಿನ ಪ್ರೀತಿ ಕೂಡ ಯಾರದೋ ಪಾಲಿಗೆ ಪ್ರಾಣಕಂಟಕವಾಗಿ ಕಾಣಿಸುತ್ತದೆ."

"ಇನ್ನು ಬರೆಯುವುದಿಲ್ಲ ಎಂಬ ಆಶ್ವಾಸನೆ ಪದೇ ಪದೇ ಸುಳ್ಳಾಗಿದೆ" ಎಂದು ಜೋಗಿಯವರು ತಮ್ಮ ‘ರಾಯಭಾಗದ ರಹಸ್ಯ ರಾತ್ರಿ' ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಹಾಗೇ "ಕಾಡಿನ ಕತೆಗಳ ಸರಣಿಯಲ್ಲಿ ಇದು ಕೊನೆಯದು" ಎಂಬ ಅವರ ಈ ಹೇಳಿಕೆಯೂ ಆಶ್ವಾಸನೆಗಷ್ಟೇ ಸೀಮಿತವಾಗಿರಲಿ ಎಂದು ನಾವು ಬಯಸೋಣವೇ?

1 comment:

ಗಿರೀಶ್ ರಾವ್, ಎಚ್ (ಜೋಗಿ) said...

ಥ್ಯಾಂಕ್ಸ್ ಸಿಂಧು,
ತುಂಬ ಖುಷಿಯಾಯ್ತು. ಕಾದಂಬರಿ ಓದಿ ತಕ್ಷಣ ಪ್ರತಿಕ್ರಿಯಿಸಿದ್ದಕ್ಕೆ. ನೀವು ಗುರುತಿಸಿರುವ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇನೆ. ಮುಂದಿನ ಸಲದ ಹೊತ್ತಿಗೆ ಅವನ್ನೆಲ್ಲ ಸರಿ ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ. ಹೀಗೆ ಪ್ರತಿ ಸಾರಿ ಅಂದುಕೊಳ್ಳುತ್ತೇನೆ ಅನ್ನುವುದು ಬೇರೆ ಮಾತು
ಕೃತಜ್ಞತೆ, ನಿಮ್ಮಿಬ್ಬರಿಗೂ. ವಿನಾಯಕ್ ಹೇಗಿದ್ದಾರೆ. ಅವರು ಆಡ್ವಾಣಿ ಬಗ್ಗೆ ಬರೆದ ಟಿಪ್ಪಣಿ ಇಷ್ಟವಾಯಿತು.