12 January, 2009

ಚಳಿ ಚಳಿ ತಾಳೆನು ದಿಲ್ಲಿ ಚಳಿಯಾ...


ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಮೈಗೆ ಥರ್ಮಲ್ ವೇರ್, ಮೇಲಿಂದ ಅಂಗಿ, ಅದರ ಮೇಲಿಂದ ಸ್ವೆಟರ್, ಶಾಲು. ಇದಿಷ್ಟು ಸಾಕಾಗಿಲ್ಲವೆಂದರೆ ಜಾಕೆಟ್ಟು, ಕಾಲಿಗೆ ಸಾಕ್ಸು. ಮಣದ ಭಾರದ ಬಟ್ಟೆ ಹೇರಿಕೊಂಡರೂ ಮೈ ನಡುಗಿಸುತ್ತದೆ ದಿಲ್ಲಿ ಚಳಿ.
ಜೀವನದಲ್ಲಿ ಈತನಕ ಇಷ್ಟು ಅಂಗಿ ಹಾಕಿಯೇ ಇಲ್ಲ. ಅದು ಬಿಡಿ ಸ್ವೆಟರ್ ಹಾಕಿದ ನೆನಪೂ ಇಲ್ಲ. ಕಳೆದ ವರ್ಷ ಅಮ್ಮಮ್ಮ (ಅಜ್ಜಿ) ಕಾಶಿಗೆ ಹೋಗಿದ್ದಾಗ ನನಗಾಗಿ ಒಂದು ಸ್ವೆಟರ್ ತಂದಿದ್ದರು. ಅಮ್ಮಮ್ಮ ಹೇಗೂ ಗಿಫ್ಟ್ ಕೊಡುವಾಗ ಉಪಯೋಗಕ್ಕೆ ಬಾರದ ಸ್ವೆಟರ್ ಕೊಡುವ ಬದಲು ಡ್ರೆಸ್ಸಾದರೂ ತಂದಿದ್ದರೆ ಚೆನ್ನಾಗಿತ್ತು ಅಂತ ಮನಸೊಳಗೇ ಅಂದುಕೊಂಡು, ಒಮ್ಮೆ ಹಾಕಿ ಕಪಾಟೊಳಗಿಟ್ಟಿದ್ದೆ.ಈಗ ಗೊತ್ತಾಯಯ್ತು. ಅಮ್ಮಮ್ಮನ ಸಿಕ್ಸ್ ಸೆನ್ಸಿಗೆ ಆಗಲೇ ಗೊತ್ತಿತ್ತೇನೊ ನಾನು ಮುಂದೆ ದಿಲ್ಲಿಯ ಚಳಿ ಅನುಭವಿಸಲಿರುವೆನೆಂದು. ಈಗ ಮನೆಯಲ್ಲಿ ದಿನಾ ನನ್ನನ್ನು ಚಳಿಯಿಂದ ಕಾಪಾಡ್ತಿರೋದು ಅದೇ ಸ್ವೆಟರ್. ಅಮ್ಮಮ್ಮನಿಗೆ ೪ ಡಿಗ್ರಿ ಸೆಲ್ಶಿಯಸ್ ಚಳಿಯಷ್ಟು ಆಳವಾದ ಥ್ಯಾಂಕ್ಸ್ ಹೇಳಲೇ ಬೇಕು.
ಇಲ್ಲಿ ತನಕ ಕಾಸರಗೋಡು, ಮಂಗಳೂರಲ್ಲಿದ್ದ ನಂಗೆ ಚಳಿ ಎಂದರೇನೆಂದು ಅನುಭವಿಸಿ ಖಂಡಿತಾ ಗೊತ್ತಿರಲಿಲ್ಲ. ಅಲ್ಲಿಂದ ನೇರ ಇಂಥ ಘನಘೋರ ಚಳಿ ಪ್ರದೇಶಕ್ಕೆ ಬಂದರೆ? ಬಾಣಲಿಯಿಂದ ಪ್ರಿಡ್ಜಿಗೆ ಬಿದ್ದಂತಾಗುತ್ತದೆ. ಅಬ್ಬಬ್ಬಾ! ಒಮ್ಮೆಯಂತೂ ಶರೀರದ ಕಂಡೆನ್ಸರ್ ವೀಕ್ ಆಗೋದು ಗ್ಯಾರೆಂಟಿ.
ಮೈಯಲ್ಲಿ ಜ್ವರ! ಮೂಗಲ್ಲಿ ಸೊರ ಸೊರ!
ಆದರೂ ಈ ವಾತಾವರಣವೂ ಒಂಥರಾ ಮಜಾ. ಇಷ್ಟಲ್ಲಾ ಅಂಗಿ ಹಾಕ್ಬೇಕಲ್ಲಾ ಅನ್ನೋ ಬೇಜಾರಿನ ಹೊರತಾಗಿ ದಿನಾ ಬಟ್ಟೆ ತೊಳೆಯೋ ಕೆಲಸ ಇಲ್ಲ. ಮನೆ ಎಸಿಗಿಂತ ಕೂಲ್. ಬೆಚ್ಚಗೆ ರಜಾಯಿ ಹೊದ್ದು ಮಲಗೋ ಸುಖ ಈಗಲೇ ಅನುಭವಿಸಬೇಕು. ಬೆಳಗ್ಗೆ ಗಂಟೆ ಎಂಟಾದರೂ ಬೆಳಕಿಲ್ಲ. ಬಿಸಿ ಬಿಸಿ ಹಬೆಯಾಡೋ ಚಾಹ ಕುಡಿಯಲು ಮಜಾ ಬರುವುದೇ ಈಗ.
ಬೆಳಗ್ಗೆ ಮನೆಯಿಂದ ಹೊರಗೆ ಕಾಲಿಟ್ಟೆಯೋ ನೂರು ಇನ್ನೂರು ಮೀಟರ್ ದೂರಕ್ಕಿಂತ ಆಚೆ ಏನು ಕಾಣಿಸೋದಿಲ್ಲ. ೨೦೦೭ರ ಗಿನ್ನಿಸ್ ವರ್ಲ್ಡ ರೆಕಾರ್ಡಿನ ಪ್ರಕಾರ ವಿಶ್ವದ ಅತಿ ದೊಡ್ಡ ಮತ್ತು ಅಗಲವಾಗ ಹಿಂದೂ ದೇವಾಲಯ ಎಂದು ಪ್ರಸಿದ್ದಿಪಡೆದ ಅಕ್ಷರಧಾಮ ದೇವಸ್ಥಾನವಿರುವುದು ನಮ್ಮ ಮನೆಯಿಂದ ೨ಕಿಮೀ. ದೂರದಲ್ಲಿ. ಸದ್ಯ ಒಂದು ಮಧ್ಯಾಹ್ನ ಆ ದಾರಿಯಾಲ್ಲಾಗಿ ಹೋದರೆ ಅಕ್ಷರಧಾಮ ನಾಪತ್ತೆ. ಪೂರ್ತಿಯಾಗಿ ಮಂಜು ಮುಸುಕು!
ಮಧ್ಯಾಹ್ನ ಹೋದರೆ ಇಂಡಿಯಾ ಗೇಟೂ ಇಲ್ಲ, ರಾಷ್ಟ್ರಪತಿ ಭವನವೂ ಇಲ್ಲ!
ದೇಶದ್ದಲ್ಲೆಲ್ಲ ಉಗ್ರಗಾಮಿಗಳ ಹಾವಳಿ. ಇಲ್ಲಿ ಜನರೆಲ್ಲ ಉಗ್ರಗಾಮಿಗಳಂತೆ, ಕಣ್ಣು ಮೂಗಿನ ಹೊರತಾಗಿ ಬೇರೆಲ್ಲ ಭಾಗ ಫುಲ್ ಪ್ಯಾಕ್.
ಡೆಲ್ಲಿಯ ಅಂದವಿರುವುದು ಇಲ್ಲಿನ ದೊಡ್ಡ ದೊಡ್ಡ ಪಾರ್ಕ್ ಮತ್ತು ವೃತ್ತ(ಸರ್ಕಲ್, ಗೋಲ್ ಚಕ್ಕರ್)ದಿಂದ. ಖಂಡಿತವಾಗಿಯೂ ನಮ್ಮ ಮಂಗಳೂರಿನ ಕದ್ರಿ ಪಾರ್ಕ್, ಪಂಪ್‌ವೆಲ್ ವೃತ್ತದಂತಿಲ್ಲ. ಚಂದವಾಗಿ ಇಟ್ಟಿದ್ದಾರೆ. ಚಳಿಗಾಲದಲ್ಲಿ ಇಂತಹ ಪಾರ್ಕು, ವೃತ್ತ, ಹೂದೋಟಗಳಿಗೆ ಹೋದರೆ ಅಂದದ ಹೂವುಗಳ ಚೆಂದದ ನೋಟ ಬೋನಸ್. ನಮುನಮೂನೆ ಕಣ್ಸೆಳೆವ ಬಣ್ಣಗಳ ಡೇಲಿಯಾ, ಸೇವಂತಿಗೆ ಹೂವು ಹಾಕಲು ಬೇಕಾದಷ್ಟು ಬಟ್ಟೆ, ಇರಲು ಸರಿಯಾದ ಮನೆ ಉಳಿದ ಎಲ್ಲ ಸೌಕರ್ಯ ಇದ್ದವರಿಗೆ ಮಾತ್ರ ಚಳಿಗಾಲದ ಈ ಮಜ. ಹೇಳಿಕೇಳಿ ನಮ್ಮದು ಬಡ ರಾಷ್ಟ್ರ! ಬಡತನ ನಮ್ಮ ದೇಶದ ರಾಜಧಾನಿಯನ್ನು ಬಿಡಲು ಸಾದ್ಯವೇ? ಚಂದದ ರಸ್ತೆಗಳ ನಡುವೆ ಅಷ್ಟೇ ಚಂದದ ವೃತ್ತ, ಪಕ್ಕದಲ್ಲಿ ಹರುಕಲು ಬಟ್ಟೆ ಹಾಕಿ ನಡುಗುವ ದೇಹ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಇಂತಹವರು ತಮ್ಮ ದೇಹವನ್ನು ಅದೆಷ್ಟು ಬಟ್ಟೆಗಳಿಂದ ರಕ್ಷಿಸಬಹುದು? ಊಟ, ಬಟ್ಟೆ, ಮನೆ ಸರಿಯಾಗಿಲ್ಲದ ಅದೆಷ್ಟೋ ಜನರು ಇಂತಹ ಘನಘೋರ ಚಳಿಯಲ್ಲಿ ಇನ್ನೇನಾಗಲು ಸಾದ್ಯ? "ಚಳಿಯಿಂದ ಉತ್ತರಭಾರತದಲ್ಲಿ ಇಷ್ಟು ಜನರ ಸಾವು" ಅಂತ ಪೇಪರಿನಲ್ಲಿ ಓದುವಾಗ ಮೊದಲು ಆಶ್ಚರ್ಯ ಆಗುತ್ತಿತ್ತು. ಈಗ ಅದರ ಅರ್ಥವೇನೆಂದು ತಿಳಿಯಿತು.
ಅದೇನಾದರೂ ಇರಲಿ, ಒಮ್ಮೆ ಡೆಲ್ಲಿಗೆ ಬಂದು ಚಳಿಯ ಅನುಭವ ಪಡೆಯಿರಿ.

No comments: