01 June, 2009

ಫ್ರುಟ್ ಫುಲ್ ಡೆಲ್ಲಿ ವಾಸ...

ದಿಲ್ಲಿಗೆ ಬಂದು ತಪ್ಪು ಮಾಡಿದೆನೋ ಅಂತ ಅದೆಷ್ಟೋ ಸಲ ಅನ್ನಿಸಿತ್ತು. ಗೆಳೆಯ/ತಿ ಯರಿಲ್ಲ, ಊರೂ ಗೊತ್ತಿಲ್ಲ. ಸಹಿಸಲಾಗದ ಸೆಕೆ. ಚಳಿ ಅಂತ ಒದ್ದಾಡುವ ಬದಲು ಮಂಗಳೂರಲ್ಲೇ ಇದ್ದಿದ್ದರೆ ಆರಾಮಾಗಿರಬಹುದಿತ್ತು ಅಂತ. ಆದರೆ ಈ ಹಣ್ಣುಗಳ ರಾಶಿ ನೋಡುವಾಗ ಊರು, ಮನೆ, ಯಾವೂದೂ ನೆನಪಾಗುವುದಿಲ್ಲ. ಕೇವಲ ಅದರ ಸವಿಯಾದ ಸಿಹಿಯಷ್ಟೇ ಬಾಯಲ್ಲಿ ನೀರೂರಿಸುವುದು.

ದಿಲ್ಲಿಯಲ್ಲಿ ಸಾಮಾನ್ಯ ಎಲ್ಲಾ ಸೀಝನ್ ಗೂ ಒಂದೊಂದು ಹಣ್ಣುಗಳು ಖಾಯಂ. ನಾನು ಕಳೆದ ವರ್ಷ ದಿಲ್ಲಿಗೆ ಬಂದಾಗ ಇಲ್ಲಿ ಮಾವಿನ ಹಣ್ಣಿನ ಸಮಯ. ನಮ್ಮ ಊರಿಗಿಂದ ಲೇಟಾಗಿ ಇಲ್ಲಿ ಮಾವಿನ ಹಣ್ಣು ಮಾರ್ಕೆಟ್ಟಿಗೆ ಬರುವುದಾದರೂ ರುಚಿ ಮಾತ್ರ ಅದ್ಭುತ. ನಾನು ಊರಲ್ಲಿದ್ದಾಗಲೂ ತಿನ್ನದಿದ್ದಷ್ಟು ಮಾವಿನ ಹಣ್ಣು ತಿಂದು ಗೊರಟು ಬಿಸಾಡಿದ್ದಿದೆ. ದಿಲ್ಲಿಯ ಪ್ರಗತಿ ಮೈದಾನದಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದ ಮಾವಿನ ಹಣ್ಣಿನ ಮೇಳ ನಡೆಯುತ್ತದೆ. ಅಲ್ಲಿಗೆ ಲಖನೌ, ಕಾನ್ಪುರ, ಉತ್ತರಪ್ರದೇಶ ಹೀಗೆ ಹಲವು ಕಡೆಯ ಸುಮಾರು ೬೦೦ ಕ್ಕೂ ಮಿಗಿಲಿನ ವಿವಿಧ ನಮೂನೆಯ, ಜಾತಿಯ ಹಣ್ಣುಗಳು ನೋಡಲು ಮತ್ತು ದುಡ್ಡುಕೊಟ್ಟರೆ ಸವಿಯಲೂ ಸಿಗುತ್ತದೆ.

ಶಿಮ್ಲಾ, ಮಸ್ಸೂರಿ, ನೈನಿತಾಲ್, ಕಾಶ್ಮೀರ ಹಾಗೇ ಉತ್ತರಪ್ರದೇಶ, ಹರ್ಯಾಣ, ಹೀಗೆ ಚಳಿ ಮತ್ತು ಸೆಕೆ ಎರಡೂ ವತಾವರಣವಿರುವ ಪ್ರದೇಶಕ್ಕೆ ಸೆಂಟರ್ ಪ್ಲೇಸ್ ದಿಲ್ಲಿ. ಆದ್ದರಿಂದ ಇಲ್ಲಿಗೆ ಅಲ್ಲೆಲ್ಲ ಬೆಳೆಯುವ ಹೆಚ್ಚಿನ ಹಣ್ಣು ತರಕಾರಿಗಳು ಬರುತ್ತವೆ. ಹಾಗಾಗಿ ದಿಲ್ಲಿಯಲ್ಲಿ ಕೂತು ತಿನ್ನುವವರಿಗೆ ಪರ್ಮನೆಂಟಾಗಿ ಒಂದಲ್ಲಾ ಒಂದು ಹಣ್ಣುಗಳು.
ಈ ಸಲ ಊರಿಂದ ಬರುವಾಗ ೪೩ ಡಿಗ್ರಿ ಸೆಲ್ಶಿಯಸ್ ನಷ್ಟು ಸೆಕೆ. ಆದರೆ ಫ್ರಿಡ್ಜಲ್ಲಿ ತಂಪಾದ ಬಚ್ಚಂಗಾಯಿ(ಕಲ್ಲಂಗಡಿ). ಇದು ನಮ್ಮ ಊರಲ್ಲೂ ಸಿಗುತ್ತದೆ ಅಂದರೂ ಕೆಜಿಗೆ ೫ ರೂಪಾಯಿಯಂತೆ ಸಿಗಲು ಸಾಧ್ಯವಿಲ್ಲ ಅಲ್ಲವೇ?

ಕಡಿಮೆ ದರಕ್ಕೆ ಸಿಗುವುದರಿಂದ ಹೆಚ್ಚು ರುಚಿ!

ಮೊನ್ನೆ ಮೊನ್ನೆ ಮಾರ್ಕೆಟ್ಟಿಗೆ ಹೋದಾಗ ಅಕಸ್ಮತ್ತಾಗಿ ಕಂಡದ್ದು ಕೆಂಪು ಹಣ್ಣು. ಅದೇನೆಂದು ವಿಚಾರಿಸಿದಾಗ ಗೊತ್ತಾದದ್ದು ಲಿಚೀ! ಮಂಗಳೂರಲ್ಲಿ ಐಡಿಯಲ್ ಐಸ್ ಕ್ರೀಂ ಪಾರ್ಲರ್ ನಲ್ಲಿ ನನ್ನ ತಂಗಿಯ ಜೊತೆ ಲಿಚೀ ಫ್ಲೇವರ್ ಇರುವ ಐಸ್ ಕ್ರೀಂ ಒಮ್ಮೆ ತಿಂದಿದ್ದರೂ ರುಚಿ ಗೊತ್ತಾಗಿರಲಿಲ್ಲ. ಇಲ್ಲಿಯ ತನಕ ಕಣ್ಣಿನಿಂದ ನೋಡಿರಲೂ ಇರಲಿಲ್ಲ. ಮನೆಗೆ ತಂದು ತಿಂದಾಗಲೇ ಗೊತ್ತಾದದ್ದು ಅದರ ಅದ್ಭುತ ಸವಿ. ಸುಮಾರಾಗಿ ನಮ್ಮ ಕುಡ್ಲದ ತಾಳಿಬೊಂಡ(ಈರೋಳು)ವನ್ನು ನೆನಪಿಗೆ ತರುವ ಹಣ್ಣು.

ಹಾಗೇ ಇನ್ನೊಂದು ಹಣ್ಣು ಕರ್ಬೂಜ. ಇದರ ಜ್ಯೂಸ್ ಅಂತೂ ಅದ್ಭುತ. ಅದರಲ್ಲೂ ಸನ್ ಮೆಲನ್, ಮಸ್ಕ್ ಮೆಲನ್ ಎಂಬೆಲ್ಲ ವಿಧವಿಧ ಹಣ್ಣುಗಳು. ತುಂಬ ರಸಭರಿತ ಹಣ್ಣು. ಬಾಯಿಗಿಟ್ಟರೆ ಸಾಕು ಹಾಗೇ ಕರಗಿಹೋಗುತ್ತದೆ. ನನ್ನ ಪತಿ ‘ಅದು ಮಸ್ಕ್ ಮೆಲನ್ ಅಲ್ಲ ಮಸ್ತ ಮೆಲನ್’ ಎಂಬ ಹೊಸ ನಾಮಕರಣ ಮಾಡಿದ್ದರು.

ಲಿಚೀ ಮುಗಿದ ಮೇಲೆ ರಸಭರಿತ ಮಾವು ಅದರ ನಂತರ ಪಿಯರ್ ಫ್ರುಟ್. ೯ ನೇ ತರಗತಿಯಲ್ಲಿದ್ದಾಗ ನನ್ನ ಮಾವ ಬಾಂಬೆಯಿಂದ ಬಂದಾಗ ತಂದಿದ್ದರು ಈ ಪಿಯರ್. ಆಗ ಅಜ್ಜಿಮನೆಯಲ್ಲಿ ನಾವು ರಾಶಿ ಮಕ್ಕಳು. ಹಾಗಾಗಿ ನನ್ನ ಒಂದು ಬದಿಯ ಹಲ್ಲಿಗೆ ಮಾತ್ರ ರುಚಿಸಿಗುವಷ್ಟೇ ಸಣ್ಣ ಚೂರು ಸಿಕ್ಕಿತ್ತು. ಆದರೆ ದಿಲ್ಲಿಗೆ ಬಂದ ಮೇಲೆ ಅದನ್ನೂ ಬೇಕಾದಷ್ಟು ತಿಂದಾಯಿತು. ನೋಡಲು ಮಂಗಳೂರಲ್ಲಿ ಸಪ್ಪರ್ ಜೆಲ್ಲಿ, ದಿಲ್ಲಿಯ ಮಾಲ್ ಗಳಲ್ಲಿ ಇಂಡಿಯನ್ ಪಿಯರ್ ಅಂತ ಹೆಸರಿರುವ ಹಣ್ಣಿನಂತೆ ಈ ಪಿಯರ್ ಕೂಡ ಇದೆ. ಆದರೆ ಇದು ತುಂಬ ಮೃದು ಮತ್ತು ಸವಿಯಾದ ಹಣ್ಣು.

ಅಂತೂ ಈ ಹಣ್ಣುಗಳನ್ನೆಲ್ಲ ತಿನ್ನುವಾಗ ನಾನು ದಿಲ್ಲಿಗೆ ಬಂದು ತಪ್ಪು ಮಡಲಿಲ್ಲ ಅಂತನಿಸಿತು. ಊರಲ್ಲಿದ್ದರೆ ಯಾವುದೇ ಹಣ್ಣು ತಿನ್ನುವಾಗಲೂ ಮನೆಯಲ್ಲಿದ್ದವರಿಗೆಲ್ಲ ಕೊಟ್ಟು ನನಗೆ ಸಣ್ಣ ಚೂರೇ ಸಿಗುತ್ತಿತ್ತು. ಆದರೆ ಇಲ್ಲಿ ಮನೆಯಲ್ಲಿ ನಾನೊಬ್ಬಳೇ ಇದ್ದಾಗ ತಂಪಾದ ರುಚಿರುಚಿಯಾದ ಹಣ್ಣು ಇಡಿಇಡಿಯಾಗಿ ಗುಳುಂ....ಮರೆತು ಹೋಗಿತ್ತು ಈ ಪೀಚ್. ದಿಲ್ಲಿಯಲ್ಲಿ ಸಿಗುವ ಮತ್ತೊಂದು ಹಣ್ಣು. ಈ ಮೊದಲು ಇಂಥ ಹಣ್ಣು ಸವಿಯದ ಕಾರಣ ಹೋಲಿಕೆ ಗೊತ್ತಾಗುತ್ತಿಲ್ಲ.
ಆದರೂ.............


ನಕ್ಷತ್ರನೇರಳೆ, ಪನ್ನೇರಳೆ, ಜಂಬೂನೇರಳೆ, ತಾಳಿಬೊಂಡ, ಕುಂಟಲಹಣ್ಣು, ಮುಳ್ಳಂಕಾಯಿ ಬೇಕೆನಿಸಿದರೆ ಏನುಮಾಡಲಿ?

7 comments:

Unknown said...

baayalli nIru UruvaShTu haNNina bagge hELiddiri. nanagU aaseyaaguttide. :-) :-)

ಸಿಂಧು ಭಟ್. said...

ನಿಮ್ಮ ಬಾಯಲ್ಲಿ ನೀರೂರಿಸುವಷ್ಟರ ಮಟ್ಟಗೆ ಹಣ್ಣಿನ ಬಗ್ಗೆ ನಾ ಬರೆದ ಲೇಖನ ಅರ್ಥವಾದರೆ ಅಷ್ಟೇ ಸಾಕು.
ದಿಲ್ಲಿಯಲ್ಲಿ ಸಿಗೋ ಹಣ್ಣುಗಳು ತುಂಬ ಸೊಗಸು ಮತ್ತು ರುಚಿ.
ಪ್ರತಿಕ್ರಿಯಿಸಿದಕ್ಕೆ ಥ್ಯಾಂಕ್ಸ್.

Prabhuraj Moogi said...

ಬಹಳ ದಿನಗಳಾದ ಮೇಲೆ ನಿಮ್ಮ ಬ್ಲಾಗಗೆ ಬಂದೆ, ಸ್ವಲ್ಪ್ ಸಮಯ ಬಿಡುವಿನಲ್ಲಿದ್ದಿರಂತೆ ಕಾಣುತ್ತೆ, ಮತ್ತೆ ಜೋಗಿ ಕಥೆಗಳು ವಿಮರ್ಶೆ(ವಿವರ) ಚೆನ್ನಾಗಿದ್ದವು, ನಿಮಗೆ ಎಂಫಿಲ್ ಬೇಗ ಸಿಗಲಿ ಅಂತ ಹಾರೈಕೆ, ಹಾಗೆ ಜೋಗಿಯವರ ಇನ್ನೂ ಕೆಲ ಪುಸ್ತಕಗಳ ಬಗ್ಗೆ ವಿವರ ಬರಲಿ. ಇನ್ನು ನಮ್ಮ ಬೆಂಗಳೂರಿನಲ್ಲಿ ಬರೀ ಜ್ಯೂಸು ಕುಡಿದದ್ದೆ ಜಾಸ್ತಿ ಆಗಿದೆ, ಹಣ್ಣು ತಿಂದದ್ದೆ ಕಮ್ಮಿ.

ಸಿಂಧು ಭಟ್. said...

ಪ್ರಭುರಾಜ್ ಅವರೇ,
ಬರಹ ಓದಿ ಪ್ರತಿಕ್ರಿಯಿಸಿದ್ದಕ್ಕೆ ಆಭಾರಿ.

ಹೌದು ಊರಿಗೆ ಹೋಗಿದ್ದೆ. ಹಾಗೇ ಅಲ್ಲಿ ನನ್ನ ಎಂ.ಫಿಲ್ ಕೆಲಸವಿದ್ದಿದ್ದರಿಂದ ಬ್ಲಾಗ್ ಹಾಗೇ ಬಾಕಿಯಾಗಿತ್ತು.

ಜೋಗಿಯವರು ಹೊಸ ಹೊಸ ಪುಸ್ತಕಗಳನ್ನು ಬರೆದಂತೆ ಓದಿ ವಿವರ ನೀಡುತ್ತೇನೆಂಬ ಭರವಸೆ ನಿಮಗೆ.

ಬೆಂಗಳೂರಿನ ವಿಪರೀತ ಮಳೆಗೆ ಜ್ಯೂಸ್, ಹಣ್ಣು ಎರಡೂ ಹನಿ ಹನಿ ಸಾಕೇನೋ, ಆದರೆ ಡೆಲ್ಲಿಯ 42 ಡಿಗ್ರಿ ಸೆಲ್ಶಿಯಸ್ ಸೆಕೆಗೆ ಹಣ್ಣು ಜ್ಯೂಸ್ ನೀರು ಎಲ್ಲವೂ ಕಡಿಮೆಯೇ.ಆದ್ದರಿಂದ ಅದರ ರುಚಿಯೂ ಹೆಚ್ಚೇನೋ...

Prabhuraj Moogi said...

ಬೆಂಗಳೂರಿನ ಬಿಸಿಲೂ ಜಾಸ್ತಿ ಆಗಿದೆ,ಮರ ಕಡಿದು ಟಾರು ಹಾಕುತ್ತಿದ್ದೀವಲ್ಲ ಅದಕ್ಕೆ... ನೀವು ಬಂದಾಗ ಮಳೆ ಆಗಿತ್ತು ಅನಿಸತ್ತೆ. ನಿಮ್ಮ ಜೋಗಿ ಲೇಖನಗಳಿಗೆ ಕಾಯುತ್ತೇವೆ, ಬೇಗ ಬರಲಿ.

Umesh Balikai said...

ಸಿಂಧು,

ದೆಹಲಿ ಹಣ್ಣುಗಳ ರಸವತ್ತಾದ ಪರಿಚಯ ಮಾಡಿಕೊಟ್ಟು ನನ್ನ ಬಾಯಲ್ಲಿ ನೀರೂರಿಸಿದ್ದೀರಿ. ಚಿತ್ರ-ಲೇಖನ ತುಂಬಾ ಚೆನ್ನಾಗಿದೆ.

ಸುಧೇಶ್ ಶೆಟ್ಟಿ said...

ಈ ಹಣ್ಣುಗಳು ಬಗ್ಗೆ ಏನೂ ಗೊತ್ತಿರಲಿಲ್ಲ ಸಿ೦ಧು ಅವರೇ.... ಪ್ರತಿಯೊ೦ದು ಹಣ್ಣುಗಳನ್ನು ಬಾಯಲ್ಲಿ ನೀರೂರುವ೦ತೆ ಪರಿಚಯಿಸಿಕೊಟ್ಟಿದ್ದೀರಿ... ಕು೦ಟಲಹಣ್ಣನ್ನು ನೆನಪಿಸಿದಕ್ಕೆ ಥ್ಯಾ೦ಕ್ಸ್ :)