ಈಗ ತಾನೆ ನಾನು ಕೆಲಸ ಮಾಡುತಿದ್ದ ನನ್ನ ಕಾಲೇಜಿಗೆ ಹೋಗಿ ಬಂದೆ. "ಓ ನನ್ನ ಹಳೆಯ ಕಾಲೇಜು,ಈಗ ನನ್ನದಲ್ಲ !"
ಕಾಲಿಟ್ಟದ್ದೇ ಅಲ್ಲಿರುವ ಪರಿಚಿತರೂ ಒಂದು ಸಲಕ್ಕೆ ಅಪರಿಚಿತರಂತೇ ಕಂಡಿತು. ನಾನು ಚಪ್ಪಲಿಡುವಲ್ಲಿ ಯಾವುದೋ ಹೊಸ ಚಪ್ಪಲುಗಳು, ನಾನು ಪುಸ್ತಕವಿರಿಸುತ್ತಿದ್ದ ಕಪಾಟಿನಲ್ಲಿ ಬೇರೆ ಯಾವುದೋ ಪುಸ್ತಕಗಳು, ನಾನು ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೂ ಇನ್ಯರೋ ಆಕ್ರಮಿಸಿರದ್ದಾರೆ,ಯಾವುದೋ ಹೊಸ ಮುಖ , ನನ್ನ ಸ್ಥಾನವೆಲ್ಲಿ? ಒಂದು ಕ್ಷಣ ಹುಡುಕಾಡಿದೆ. ಮತ್ತೆ ತಿಳಿಯಿತು ಅಲ್ಲಿರುವವರಿಗೆ ನಾನೇ ಅಪರಿಚಿತಳು, ಹೊಸಬಳು. ಯೋಚಿಸಿದಾಗ ತುಸು ದುಃಖವಾಯಿತು.
ಈ ಕಾಲೇಜಿಗೆ ಸೇರುವಾಗ ಅಲ್ಲಿರುವ ಎಲ್ಲರೂ ಹೊಸಬರು, ಅಪರಿಚಿತರು. ಆಳ್ವಾಸ್ ಕಾಲೇಜನ್ನು ಬಿಟ್ಟು ಬಂದ ದಿನಗಳವು. ನನ್ನ ಬಳಗವನ್ನು ಬಿಟ್ಟು ಬಂದ ದುಃಖ. ಅಲ್ಲಿಯ ವಿದ್ಯಾರ್ಥಿಗಳು, ಅಲ್ಲಿಯ ಪರಿಸರಕ್ಕೆ ಒಗ್ಗಿ ಹೋಗಿದ್ದೆ. ಹಾಗಾಗಿ ಇಲ್ಲಿ ಸೇರಿದಾಗ ಪ್ರತಿಯೊಂದರಲ್ಲಿಯೂ ಆಳ್ವಾಸ್ ನ್ನು ಹುಡುಕಲು ತೊಡಗಿದೆ. ಇಲ್ಲಿರುವ ರೀತಿ-ನೀತಿ, ನಡತೆಗಳೆಲ್ಲ ಸರಿಯಿಲ್ಲದಂತೆ ತೋರಿತು. ಅಲ್ಲಿದ್ದಾಗ ದಿನವಿಡೀ ಹರಟಿದರೂ ಸುದ್ದಿ ಹೇಳಿ ಮುಗಿಯದಂತ ಗೆಳತಿಯರು, ಇಲ್ಲಿ ಒಂದೈದು ನಿಮಿಷ ಮಾತಡಲು 'ನನ್ನವರು' ಎನ್ನುವ ವ್ಯಕ್ತಿಗಳು ಯಾರೂ ಇಲ್ಲ ಅನ್ನುವ ಭಾವನೆ.ಸುಮಾರು ಒಂದು ತಿಂಗಳ ಕಾಲ "ಯಾಕಾದರೂ ಬಂದು ಸೇರಿದೆನಪ್ಪಾ ಈ ಕಾಲೇಜಿಗೆ" ಅನ್ನುವ ಭಾವ.
ಆದರೆ ದಿನ ಹೋದಂತೆ ನಾನು ಹಲವು ಸಂಗತಿಗಳನ್ನು ಕಲಿತೆ. ಸಣ್ಣ ಕಾಲೇಜಾದರೂ ಕಲಿಯುವುದು ಬಹಳಷ್ಟಿದೆ ಅನ್ನುವುದು ತಿಳಿಯಿತು. ಅದಕ್ಕಿಂತ ಮುಖ್ಯವಾಗಿ ಎಂದೆಂದೂ ಮರೆಯಲು ಸಾಧ್ಯವಿಲ್ಲ ಅನ್ನುವ ಇಬ್ಬರು ಗೆಳತಿಯರು. ಒಬ್ಬರಂತೂ ಅಕ್ಕನಂತೆ!
ಇಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಿ, ಅಮೇರಿಕವನ್ನು ನೋಡಿದ,ಸುತ್ತಿದ ಅನುಭವ ಅವರದು. ಆದರೂ ಎಂತಹ ಸರಳತನ. ಅದರಲ್ಲೂ ಪುಸ್ತಕ ಓದುವ ಆಸಕ್ತಿಯನ್ನು ನೋಡಿ ದಂಗಾದೆ. ನಮ್ಮ ಮನೆಯಲ್ಲಿರುವ ಹಲವು ಪುಸ್ತಕಗಳನ್ನು ಅವರಾದರೂ ಓದಿದ ಸಂತೋಷ ನನಗೆ. "ಚಾಣಕ್ಯ"." ಆವರಣ"," ಪಾಚಿ ಕಟ್ಟಿದ ಪಾಗಾರ", ವಸುಧೇಂದ್ರರ ಹಲವು ಪುಸ್ತಕಗಳನ್ನು ಅವರು ಓದಿದ ಮೇಲೆ ನಮ್ಮಲ್ಲಿ ನಡೆಯುತ್ತದ್ದ ಚರ್ಚೆ ಎಷ್ಟೊಂದು ಖಷಿ ಕೊಡುತ್ತಿತ್ತು. ಏನಿಲ್ಲವೆಂದರೂ ಮಧ್ಯಾಹ್ನದ ವೇಳೆ ನಾವು ಮೂವರು ಒಟ್ಟಿಗೆ ಕುಳಿತು ಹರಟುತ್ತಾ ಹಂಚಿಕೊಂಡು ಊಟ ಮಾಡುವ ಸವಿ ಈಗ ನೆನಪು ಮಾತ್ರ. ಅಲ್ಲದೆ ಸಿನೆಮಾ. ರಾಜಕೀಯ, ಸಂಸಾರದ ಕತೆಗಳು, ಕಾಲೇಜಿನಲ್ಲೇ ನಡೆಯುವ ವಿಷಯಗಳ ಗಾಸಿಪ್ ಗಳು, ಕೆಲವು ತುಘಲಕ್ ನಂತಹ ನೀತಿಗಳು, ತಮಾಷೆಗಳು...ಹೀಗೆ ಪ್ರತಿಯೊಂದಕ್ಕೂ ಸಾತ್ ನೀಡುತ್ತಿದ್ದ ಆ ಇಬ್ಬರು ಆಪ್ತ ಸ್ನೇಹಿತರು ತುಸು ದೂರವಾದರಲ್ಲ ಅನ್ನುವ ಖೇದ.
ಹೌದು... ನೀರು, ಗಾಳಿ, ಕಾಲಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ. ಹಾಗೆ ನಮ್ಮ ಬದುಕಿನಲ್ಲೂ ಹಲವಾರು ಬದಲಾವಣೆಗಳು ಬಂದೇ ಬರುತ್ತವೆ. ಒಪ್ಪಿಕೊಂಡು ಬದುಕುವ ರೀತಿ ನಮ್ಮದಾಗಿರಬೇಕಷ್ಟೆ. 'ನಾನಿಲ್ಲ' ಅಂದ ಮಾತ್ರಕ್ಕೆ ಈ ಸಾಮಾಜಿಕ ವ್ಯವಸ್ಥೆ ನಿಲ್ಲುವುದಿಲ್ಲ. ಆದರೆ 'ನಾನಿದ್ದಾಗ' ನಡೆದ ಘಟನೆ, ಅನುಭವ ಮಾತ್ರ ಶಾಶ್ವತ. ಆ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕುವ ರೀತಿ ಮಾತ್ರ ಸುಂದರ.
No comments:
Post a Comment