04 March, 2009

ಕೊಳಚೆ ನಾಯಿ ಕೋಟಿಪತಿ_ ಮೂಡಿಸಿದ ಪ್ರಶ್ನೆಗಳು!

ಆಸ್ಕರ್ ಪ್ರಶಸ್ತಿ ಬಂದಾಗಿನಿಂದ ಕೊಳಚೆ ನಾಯಿ ಕೋಟಿಪತಿಗೆ ಬಂದಷ್ಟು ಕಾಮೆಂಟ್ ಗಳು ಇನ್ಯಾವುದೇ ಸಿನೆಮಾಕ್ಕೂ ಬಂದಿರಲಿಕ್ಕಿಲ್ಲ. ಅಷ್ಟು ಸಾಲದೆಂಬಂತೆ ನನ್ನದೂ ಎರಡು ತಕರಾರಿದೆ.
ಸ್ಲಂಡಾಗ್-ಎಂಟು ಆಸ್ಕರ್ ಬಾಚಿಕೊಳ್ಳುವಂತಾ ಸಿನಿಮಾವೇನೂ ಅಲ್ಲ. ಅದಕ್ಕಿಂತ ಈ ಮೊದಲು ಆಸ್ಕರ್ ಬುಡದವರೆಗೆ ಹೋಗಿ ಬಂದ ನಮ್ಮ ಆಮೀರ್ ಖಾನ್ ನಟನೆಯ ಲಗಾನ್ ‘ ತಾರೇ ಜಮೀನ್ ಪರ್ ನೂರು ಪಾಲು ಚೆನ್ನಾಗಿದ್ದುವು. ಇದರ ನಿರ್ದೇಶಕರು, ತಯಾರಕರೆಲ್ಲ ಭಾರತೀಯರು ಅನ್ನುವ ಕಾರಣಕ್ಕೋ, ಆಸ್ಕರ್ ವಿತರಕರಿಗೆ ಸಿನಿಮಾ ಅರ್ಥವಾಗಲಿಲ್ಲವೋ ಅಥವಾ ಆಮೀರ್ ಖಾನರ ದುರದೃಷ್ಟವೋ ಪ್ರಶಸ್ತಿ ದೊರಕಲಿಲ್ಲ.
ಎ.ಆರ್ ರೆಹಮಾನರು ಅದ್ಭುತ ಸಂಗೀತ ನಿರ್ದೇಶಕರು. ಅದರಲ್ಲಿ ಎರಡು ಮಾತಿಲ್ಲ. ಆಸ್ಕರ್ ಪ್ರಶಸ್ತಿ ಅವರಿಗೆ ಲಭಿಸಿದ್ದಕ್ಕೆ ನೂರು ಪ್ರಣಾಮಗಳು. ಆದರೆ ಜೈಹೋ ಅಂಥಾ ಅದ್ಭುತ ಸಂಗೀತದ ಹಾಡೇನೂ ಅಲ್ಲ. ಅದಕ್ಕಿಂತ ಎಷ್ಟೋ ಉತ್ತಮ ಹಾಡುಗಳನ್ನು ರೆಹಮಾನ್ ಸಾಹೇಬರು ಈ ಮೊದಲು ನೀಡಿದ್ದಾರೆ. ಅಲ್ಲದೆ ಭಾರತೀಯ ಸಿಮಿಮಾ ರಂಗದಲ್ಲೂ ಬಹಳ ಉತ್ತಮ ಹಾಡುಗಳಿವೆ. ಆದರೇನು ಮಾಡುವುದು ಈ ಮೊದಲು ಬಂದಂತಹ ನಮ್ಮ ಉತ್ತಮ ಸಂಗೀತದ ಹಾಡುಗಳು ಆಸ್ಕರ್ ವಿತರಕರ ಕಿವಿಗೆ ಇಂಪಾಗಿ ಕೇಳಿಸಲಿಲ್ಲವೇನೋ! ಅಥವಾ ಸ್ಲಂ ಡಾಗ್ ಗೆ ಆಸ್ಕರ್ ಬಂದ ಕಾರಣ ಅದರ ಹಾಡಿಗೂ ಕೊಟ್ಟರೇನೋ.
ಅದೇನೇ ಇರಲಿ, ಸ್ಲಂ ಡಾಗ್-ಮಿಲೆನೇರ್ ಮಾತ್ರ ನಮ್ಮಲ್ಲಿ ಕೆಲವು ಚಿಂತಿಸುವಂತಹ ಅಂಶಗಳನ್ನು ಹಾಗೇ ಬಿತ್ತಿ ಹೋಗಿವೆ ಎಂಬುದು ಮಾತ್ರ ಸತ್ಯ.
ಆತ ಕ್ರಿಶ್ಚನ್ ಈತ ಮುಸ್ಲಿಂ ಎಂಬ ಯಾವ ಧರ್ಮದ ನೆಲೆಯಿಂದಲೂ ಈ ಮಾತುಗಳನ್ನ ಬರೆಯುತ್ತಿಲ್ಲ.ಆದರೆ ಇಂಥಾ ಸಿನೆಮಾ ಯಾಕೆ ಇಲ್ಲಿಯವರೆಗೆ ಒಬ್ಬ ಭಾರತೀಯ ನಿರ್ದೇಶಿಸಲಿಲ್ಲ?
ಭಾರತೀಯ ಖಂಡಿತಾ ಇಂತ ಸಿನೆಮಾ ನಿರ್ದೇಶಿಸಲಾರ. ಯಾಕೆಂದರೆ ಆತನಿಗೆ ನಮ್ಮ ದೇಶದ ಮೇಲೆ ಅಭಿಮಾನವಿದೆ. ತನ್ನ ದೇಶದ ಕೊಳಕು-ಹುಳುಕನ್ನು ಒಬ್ಬ ಭಾರತೀಯ ಸಿನೆಮಾದ ಮೂಲಕ ಲೋಕಕ್ಕೆ ಸಾರಲಾರ ಅನ್ನುತ್ತೀರಾ?
ಖಂಡಿತಾ ಇಲ್ಲ. ದುಡ್ಡು ಸಿಗುವುದಾದರೆ! ದೇಶ ಭಕ್ತಿ, ಆತ್ಮ ಸಾಕ್ಷಿ ಎಲ್ಲವೂ ಆಮೇಲೆ. ದುಡ್ಡಿನ ಮುಂದೆ ಇದೆಲ್ಲವೂ ಗೌಣ ಅಥವಾ ಸೆಕೆಂಡರಿ.
ಹಾಗಾದರೆ ನಮ್ಮ ದೇಶದ ಕತೆ ನಮ್ಮ ದೇಶದ ಸಿನೆಮಾ ರಂಗದವರ ಕಣ್ಣಿಗೆ ಯಾಕೆ ಬೀಳಲಿಲ್ಲ? ಯಾಕೆಂದರೆ ಭಾರತವೇ ಹಾಗಿದೆ. ನಮಗೆ ನಮ್ಮ ದೇಶದ ಕೊಳಕು ಹುಳಕಿನಲ್ಲಿ ಬದುಕು ಅಭ್ಯಾಸವಾಗಿದೆ. ಹಾಗಾಗಿ ಅಲ್ಲಿ ಕಣ್ಣಿಗೆ ಕತೆ ಕಾಣಲು ಹೇಗೆ ಸಾಧ್ಯ? ಆದ್ದರಿಂದಲೇ ಒಬ್ಬ ವಿದೇಶಿಗನಿಗೆ ಇದು ಸಾಧ್ಯವಾಯಿತು.
ಸಿನೆಮಾ ೮೦೦ ಕೋಟಿ ರೂ ಲಾಭಗಳಿಸಿತು. ಅದರಿಂದ ನಮ್ಮ ಸ್ಲಂಗಳಿಗೇನು ಲಭಿಸಿತು? ಎಂಬ ಪುಕಾರು ಬಂತು. ಒಪ್ಪತಕ್ಕ ಮಾತೇ. ಆದರೆ ವಿದೇಶಿಗರು ನಮ್ಮ ಸ್ಲಂಗಳನ್ನು ಉದ್ದಾರ ಮಾಡುವುದಕ್ಕಿಂತಲೂ ಮೊದಲು ನಾವೇನು ಮಾಡುದೆವು? ಸಿನೆಮಾ ನೋಡಿದ ಮೇಲಾದರೂ ಸ್ಲಂಗಳ ಸ್ಥಿತಿ ಏನಾಯಿತು? ನಮ್ಮವರು ಏನು ಮಾಡಿದರು?
ಉತ್ತರ ಪ್ರತಿಭಟನೆ! ಯಾಕೆ? ಯಾವುದರ ವಿರುದ್ದ? ಯಾವ ಉದ್ದೇಶಕ್ಕಾಗಿ? ಇದ್ಯಾವುದಕ್ಕೂ ನಮ್ಮಲ್ಲಿ ಉತ್ತರವಿಲ್ಲ.
ಸಿನೆಮ ಫೇಮಸ್ ಆದ ಮೇಲಂತೂ ನಮ್ಮ ಸ್ಲಂಗಳು ಪ್ರವಾಸಿ ತಾಣವಾಯಿತು ಎಂಬ ಪುಕಾರು.
ಖಂಡಿತಾ ನಮ್ಮ ದೇಶ ಇದಕ್ಕೆ ಪ್ರವಸಿ ತಾಣವಾಗುವುದು ಬೇಡ. ಅಷ್ಟಕ್ಕೂ ಪ್ರವಾಸಿ ತಾಣವನ್ನಾಗಿ ಮಾಡುವವರು ಯಾರು? ನಮ್ಮವರಲ್ಲವೇ? ಪ್ರವಾಸಿ ತಾಣವಾಗಬೇಕಾದ ಅದೆಷ್ಟೋ ಉತ್ತಮ ಜಾಗಗಳಲ್ಲಿ ಪ್ರವಾಸಿಗರು ಹೋಗಿ ಉಳಕೊಳ್ಳುಲು ವ್ಯವಸ್ಥೆಗಳಿಲ್ಲದೆ ಪರದಾಡುವ ಸ್ಥಿತಿ! ಇದೇ ನಮ್ಮ ದೇಶದ ದುರಂತ ಅನ್ನುವುದು.
ಇನ್ನಾದರೂ ಕೊಳಚೆ ನಾಯಿ ಕೋಟಿಪತಿಯ ಬಗ್ಗೆ ಪುಕಾರು, ತಕರಾರುಗಳನ್ನು ನಿಲ್ಲಸಿ ನಮ್ಮ ದೇಶದ ಉದ್ಧಾರವನ್ನು ಹೇಗೆ ಮಾಡುವುದೆಂದು ನಿರ್ಧರಿಸಿ ಅದರತ್ತ ಸಾಗೋಣವೇ?
ಹಾಗಾದರೆ ಇದನ್ನು ನಿರ್ಧರಿಸುವರಾರು? ಕಾರ್‍ಯರೂಪಕ್ಕೆ ತರುವವರಾರು? ನಾನಾ? ನೀವಾ? ಸರಕಾರದವರಾ? ದೇಶದಲ್ಲಿರುವವರೆಲ್ಲರಾ?
ಮತ್ತೆ ನನ್ನತ್ತ ಕೈ ತೋರಿಸುವ ಬದಲು ನಿಮ್ಮತ್ತ ಕೈ ತೋರಿಸಿ ಪ್ರಶ್ನೆಯಿಂದಲೇ ಮುಗಿಸಬೇಕಾ???

6 comments:

Prabhuraj Moogi said...

ಇದೊಂದು ದೊಡ್ಡ ಹುನ್ನಾರ ಹಿಂದೆ ಒಬ್ಬರ ಹಿಂದೆ ಒಬ್ಬರು ವಿಶ್ವ ಸುಂದರಿಯರಾದರು ನೆನಪಿದೆಯಾ, ಆಗ ಭಾರತದ ಮಾರುಕಟ್ಟೆಗೆ ವಿದೇಶಿ ಅಲಂಕಾರಿಕ ವಸ್ತುಗಳ ಹೊಳೆ ಹರಿಯಿತು, ಈಗ ಸಿನಿಮಾ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದ್ದಾರೆ ಅಷ್ಟೇ... Curious case of Benjamin Button ಫಿಲ್ಮ್ ಮತ್ತೇ Wall-E ನೋಡಿದಾಗ ಅಷ್ಟು ಪ್ರಶಸ್ತಿ ಪಡೆಯುವ ಅರ್ಹತೆ slumdogಕ್ಕೆ ಇದ್ದಂತೆ ಅನಿಸಲಿಲ್ಲ ಯಾಕೊ slumdogಗೆ ಬಹಳ ಪ್ರಾಮುಖ್ಯತೆ ಕೊಟ್ಟಂತಿತ್ತು

ತೇಜಸ್ವಿನಿ ಹೆಗಡೆ said...

ಸಿಂಧು ಅವರೆ,
ಅತೀ ಸಾಮಾನ್ಯ ಚಿತ್ರಕ್ಕೆ ಅತೀ ಪ್ರಾಮುಖ್ಯತೆಕೊಟ್ಟು ಅದನ್ನು ಮತ್ತೂ ಮೇಲೇರಿಸುತ್ತಿದ್ದಾರಷ್ಟೇ. ಆ ಚಿತ್ರದಲ್ಲಿ ಬಳಸಿಕೊಂಡ ಸ್ಲಂ ಮಕ್ಕಳಿಗೆ ಬಂದ ಹಣದಲ್ಲೇನಾದರೂ ಸಹಕಾರ ಕೊಟ್ಟಿರುವರಾ ಎಂದು ಕೇಳಿ ನೋಡಿ.. ಉತ್ತರ ಮಾತ್ರ ಬರುವುದು ಒಂದೇ... ಅವರು ಸ್ಲಂ ಡಾಗ್‌ಗಳು..ಅವರಿಗೆ ಹಣದ ಅಗತ್ಯವಿಲ್ಲ ಎನ್ನುವುದೇ..!!

ಸಿಂಧು ಭಟ್. said...

ಕೊಳಚೆ ನಾಯಿಗೆ - ಇನ್ನೂ ಸಾಕಷ್ಟು ವಿರೊಧಗಳಿವೆ ಎಂದಾಯಿತು. ಅದೇನೇ ಇರಲಿ, ಆದರೆ ನಾವು ನಮ್ಮನ್ನ ಇನ್ನಾದರೂ ತಿದ್ದಿಕೊಳ್ಳಬಹುದಲ್ಲವೇ ಎನ್ನುವುದು ನನ್ನ ಪ್ರಶ್ನೆ.

ಬೆಂಗಳೂರು ರಘು said...

Sindhu....you are missing a point here...who/what won here? Money....media portreyed it, everybody sang praise tunes and as they say "one's plight is another's profit"...everybody made money here but lost lot of self respect but never ever they would care for it......!!!

Anonymous said...
This comment has been removed by the author.
Anonymous said...

ಜೈ ಹೋ ಹಾಡಿಗೆ original score ಅಂತ ಕೊಟ್ಟಿದಾರೆ.
ಆದರೆ ರೆಹಮಾನ್ ಅವರದ್ದೇ ಇನ್ನೊದು ಹಾಡು, ಗುರು ಚಿತ್ರದ್ದು ಕೇಳಿ ನೋಡಿ "bazee lagaa.." ಅಂತ.
ಹಾಡಿನ ಒಂದಷ್ಟು ಭಾಗ ಇದೇ ಹಾಡಿನ ಹಾಗೆ ಅನಿಸುತ್ತದೆ.