13 March, 2009

ಅಜ್ಜನ ಸಾವು!

ಬರವಣಿಗೆಯಲ್ಲಿ ಪೀಠಿಕೆ, ಉಪಸಂಹಾರ ಎಂಬೆಲ್ಲ ಶಿಸ್ತು ಅಳವಡಿಕೆ ಸದ್ಯದ ಈ ಬರಹದಲ್ಲಿ ಅನಗತ್ಯ. ನೇರವಾಗಿ ವಿಷಯಕ್ಕೇ ಬರುತ್ತೇನೆ.
ಜೋಗಿಯವರ ನದಿಯ ನೆನಪಿನ ಹಂಗು, ರಾಯಭಾಗದ ರಹಸ್ಯ ರಾತ್ರಿ, ಕಾಡು ಹಾದಿಯ ಕತೆಗಳು ಮೊದಲಾದ ಕೃತಿಗಳನ್ನು ಓದುತ್ತಿರುವಾಗ ಇದೆಲ್ಲ ಸಾದ್ಯವಾ? ವಾಸ್ತವವಾ? ಹೀಗೂ ಉಂಟೇ? ಎಂಬೆಲ್ಲ ಪ್ರಶ್ನೆಗಳು ಕಾದುತ್ತಿತ್ತು.
ಕೆಲವು ಸ್ತ್ರೀ, ಪುರುಷ ಪಾತ್ರಗಳೆಲ್ಲ ಇದ್ದಕ್ಕಿದ್ದಂತೆ ನಾಪತ್ತೆಯಾಗುವುದೋ, ನಿಗೂಢವಾಗಿ ಸಾಯುವುದೋ, ಸತ್ತು ಭೂತವೋ, ದೆವ್ವವೋ ಆಗಿ ಕಾಡುತ್ತದೆ ಎಂದು ಜನ ನಂಬುವುದು_ ಇದೆಲ್ಲ ನನಗೆ ಹೊಸ ಜಗತ್ತಿನಂತೆ, ವಿಚಿತ್ರವಾಗಿ ಕಾಣಿಸುತ್ತಿತ್ತು.
ಹಾಗೇ ಜೋಗಿಯವರು ತಾವು ಕಂಡ ಹಳ್ಳಿಯ ಬದುಕಿನ ಸೂಕ್ಷ್ಮತೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವ ಅದ್ಭುತ ಶೈಲಿಗೂ ಬೆರಗಾಗುತ್ತಿದ್ದೆ.
ನಮ್ಮೂರಲ್ಲೂ ಇಂಥಾ ಕತೆಗಳಿಲ್ಲವೇ? ಇದ್ದರೆ ಯಾಕೆ ನನ್ನ ಅನುಭವಕ್ಕೆ ಬರಲಿಲ್ಲ? ನನ್ಯಾಕೆ ಗಮನಿಸಲಿಲ್ಲ? ಎಂದೆಲ್ಲ ಕಥಾಸಂಕಲನ ಓದಿದ ಮೇಲೆ ನನ್ನನ್ನು ಕಾಡಲು ಶುರುವಾಯಿತು. ಶಾಲೆ, ಕಾಲೇಜು, ಪ್ರೀತಿ, ಮದುವೆ, ಸಂಸಾರ ಎಂದು ನಾನು ನನ್ನ ವ್ಯೂಹದೊಳಗೇ ಸಾಗುತ್ತಿದ್ದೆ. ನನ್ನ ಗಮನಕ್ಕೆ ಬಂದರೂ ಅದು ಮುಖ್ಯವಾಗಲಿಲ್ಲ.
ಈಗ ಊರಿಗೆ ಬಂದು ೧ ವಾರದೊಳಗೆ ೨ ಆತ್ಮಹತ್ಯಾ ಪ್ರಕರಣ ಕೇಳಿದೆ. ಅದರಲ್ಲಿ ಒಂದಂತೂ ಬಹಳ ವಿಚಿತ್ರವಾಗಿದೆ, ನಿಮಗೂ ಕುತೂಹಲವೆನಿಸಬಹುದು.
ಸುಮಾರು ಎಪ್ಪತ್ತು ವರ್ಷ ಮೀರಿದೆ ಅಂದರೆ ಅಜ್ಜನಲ್ಲದೆ ಹುಡುಗನಾಗಲು ಸಾಧ್ಯವೇ? ಮಾಟ, ಮಂತ್ರ ಮಾಡುತ್ತಾ, ಇದ್ದ ತೋಟ ನೋಡಿಕೊಂಡು ಮಗ ಸೊಸೆ ಮೊಮ್ಮಕ್ಕಳ ಜೊತೆ (ಹಾಯಾಗಿ ಎಂದು ಹೇಳಲಾರೆ) ಇದ್ದವರು. ಮಾಟ ಮಾಡಿಸುವುದರಿಂದಾಗಿ ನಮ್ಮ ಊರಲ್ಲಿ ಆ ವ್ಯಕ್ತಿ ತಕ್ಕ ಮಟ್ಟಿಗೆ ಫೇಮಸ್!
ಸಾಯೋ ಗಂಟೆ ಗಳಿಗೆ ಸರಿಯಾಗಿದ್ದರೆ ಡೈರೆಕ್ಟ್ ಸ್ವರ್ಗ ಸೇರಬಹುದೆಂದು ಆ ದಿನ ಪಂಚಾಂಗ ನೋಡುತ್ತಿದ್ದರಂತೆ. (ದಿನ ಗಂಟೆ ಮುಹೂರ್ತ ನೋಡಿ ಸಿಸೇರಿಯನ್ ಮಾಡಿಸುವಂತೆ!) ಹುಟ್ಟಲು ಮಾತ್ರವಲ್ಲ ಸಾಯಲೂ ದಿನ ನೋಡುತ್ತಾರೆಂದಾಯಿತು. ಸಾಯೋ ಕೆಲ ದಿನ ಮೊದಲು ಬಿದಿರು ಕಡಿಸಿ, ಮಣ್ಣಿನ ಹೊಸ ಅಳಗೆ(ಪಾತ್ರ), ಹೊಸ ಪಂಚೆ ಎಲ್ಲ ತಂದಿಟ್ಟಿದ್ದರಂತೆ.(ಇನ್ನು ಮಗನಿಗೇನೂ ಕೆಲಸವಿಲ್ಲ!) ಹಾಗೆ ಯಾರಲ್ಲೋ ಚಟ್ಟಕ್ಕಾಗಿ ಮರ ಕಡ್ಪೆರ ಜನ ತಿಕ್ವೆರಾ(ಮರ ಕಡುಹಿಸಲು ಜನ ಸಿಗಬಹುದೇ) ಅಂತಲೂ ವಿಚಾರಿಸುತ್ತಿದ್ದರಂತೆ.
ಆ ರಾಮ ಸತ್ತದ್ದೂ ನೀರಿನಿಂದ ಈ ರಾಮ ಸಾಯುವುದೂ ನೀರಿನಿಂದಲೇ ಎಂದು ತನ್ನನ್ನು ದೈವತ್ವಕ್ಕೇರಿಸಿದ ಮಾತು ಇತ್ತಂತೆ. ಆತ್ಮಹತ್ಯೆ ಮಾಡುವ ಮೊದಲು ಎಲ್ಲ ಪೂರ್ವ ತಯಾರಿ ಮಾಡಿದ್ದ ಅಜ್ಜ.
ಈ ಎಲ್ಲ ಮುನ್ಸೂಚನೆ ಕೊಟ್ಟರೂ ಮನೆಯವರಿಗೆ ಆತ್ಮಹತ್ಯೆಯ ವಾಸನೆ ಬಡಿಯಲಿಲ್ಲವೋ? ಬಡಿದರೂ ಮೂಗು, ಬಾಯಿ ಮುಚ್ಚಿ ಕುಳಿತಿದ್ದರೋ? ಗೊತ್ತಿಲ್ಲ.
ಕೆರೆಯ ಬುಡದಲ್ಲಿ ಚಪ್ಪಲಿ, ಕನ್ನಡಕ ಇಟ್ಟು ಅಜ್ಜ ಡೈ(ವ್) ಹೊಡೆದೇ ಬಿಟ್ಟರು.
ಈಗ ನಮ್ಮೂರಲ್ಲಿ ಕೆರೆಗೆ ಹೋದ ಅಜ್ಜ ಕಾಲು ಜಾರಿ ಬಿದ್ದರು ಎಂದು ಆಡಿಕೊಳ್ಳುತ್ತದ್ದಾರೆ.
ಅಂತೆಯೇ ಮಾಟ ಮಂತ್ರ ಮಾಡುತ್ತಿದ್ದಾಗ ಅವರ ಬಳಿಗೆ ಬಂದ ಹೆಂಗಸರನ್ನು ಅಜ್ಜ ತಂತ್ರ ಮಾಡಿ......(ಯೋಚಿಸಿ) ಎಂಬ ಸಣ್ಣ ಧ್ವನಿಯೂ ಕೇಳಿ ಬರುತ್ತಿದೆ.
ಅಷ್ಟಕ್ಕೂ ಅಜ್ಜ ಸಾಯುವುದಕ್ಕಿದ್ದ ಕಾರಣ?
ಜೋಗಿಯವರ ಕೆಲವು ಕತೆಗಳಂತೆ ನಿಗೂಢವೂ ಅಸ್ಪಷ್ಟವೂ ಆಗಿದೆ.
ಅಜ್ಜ ನೋಡಿದ ಪಂಚಾಗ ಸರಿಯಿದ್ದು ಗಂಟೆ ಘಳಿಗೆ ಎಲ್ಲ ಸ್ವರ್ಗಮುಖಿಯಾಗಿದ್ದರೆ ಸುಖಿಯಾಗಿರಬಹುದು, ದೆವ್ವವಾಗಿ ಬಂದು ಕಾಡಲಾರ ಎಂಬ ನಂಬಿಕೆ!

8 comments:

Prabhuraj Moogi said...

ನಮ್ಮೂರಿನ ಹತ್ತಿರ ಸ್ವಾಮೀಜಿಯೊಬ್ಬರು ರೂಪಾಯಿಗೊಂದು ತೆಂಗಿನಕಾಯಿ ಮಾರಿದ ದಿನ ಲಿಂಗೈಕ್ಯನಾಗುತ್ತೇನೆ ಅಂದಿದ್ದರಂತೆ, ಸರಿಯಾಗಿ ಅವರ ೧೦೮ ವಯಸ್ಸಿಗೆ ಮಠದ ಹೊರಗೆ ಪೈಪೊಟಿಗಿಳಿದ ಇಬ್ಬರು ಕಾಯಿ ವ್ಯಾಪಾರಿಗಳು ಒಂದು ರೂಪಾಯಿಗೆ ಕಾಯಿ ಮಾರುತ್ತಿದ್ದಂತೆ ಅವರು ತೀರಿಹೊದರಂತೆ (ಇದು ಬರೀ ಅಂತೆ ಕಂತೆಯಾಗಿದ್ದರೆ ನಾನೂ ನಂಬುತ್ತಿರಲಿಲ್ಲ ಆದರೆ ಅಲ್ಲಿ ಧಾಖಲೆಗಳಿವೆ), ಸಾವಿನ ಮೇಲೆ ಹಿಡಿತ ಸಾಧಿಸಿದ ಕೆಲವರಿರುತ್ತಾರೆ, ಆಧುನಿಕರಾದ ನಾವು ನಂಬದಿರಬಹುದು ಆದರೆ ಕೆಲವು ನಿಗೂಢಗಳೂ ಸತ್ಯ...

Ittigecement said...

ಇದೆಲ್ಲ ಅಂತೆ ಕಂತೆಗಳ ಬೊಂತೆ ಎನ್ನುವದು ಕೆಲವರ ವಾದ..
ಇದೆಲ್ಲ ನಿಜ ಅನ್ನುವವರೂ ಉಂಟು...

ನನಗಂತೂ ಅನುಭವ ಆಗಿಲ್ಲ...

ನಿಮ್ಮ ಕುತೂಹಲಕ್ಕೆ, ...
ಚಂದದ ಬರವಣಿಗೆಗೆ..
ಅಭಿನಂದನೆಗಳು...

ಸಿಂಧು ಭಟ್. said...

ಪ್ರಭುರಾಜ್ ಅವರೇ,
ನನ್ನ ಕುತೂಹಲವಿರುವುದೂ ಈ ನಿಗೂಢ ಸಂಗತಿಗಳ ಬಗೆಗೇ. ಆಧುನಿಕ ಜಗತ್ತಿನ ನಮ್ಮ ನಡುವೆಯೂ ಇಂತಹ ಘಟನೆಗಳಾದಾಗ ನಂಬಲಾಗುವುದಿಲ್ಲ. ನಂಬದೆ ಬೇರೆ ಅರ್ಥ ಹುಡುಕ ಹೊರಟರೆ ಉತ್ತರವಿಲ್ಲ. ಈ ಲೇಖನ ಬರಯುವ ಹೊತ್ತಿಗೆ ನಾನು ಕೇಳಿದ, ನಮ್ಮೂರಲ್ಲಿ ನಡೆದ ಹಳೆ ಕತೆಗಳನ್ನೆಲ್ಲ ಅಪ್ಪನಲ್ಲಿ ಕೇಳಿ ರಿಫ್ರೆಶ್ ಮಾಡಿದೆ.

ಪ್ರಕಾಶ್ ಅವರೇ,
ನನ್ನ ಅನುಭವಕ್ಕೂ ಬಂದಿಲ್ಲ.ಆದರೆ ನಂಬುವಂತೆ ಮಾಡುವ ನಂಬಲಾಗದ ಸತ್ಯಗಳು, ಕೆಲವೊಮ್ಮೆ ಸುಳ್ಳಗಳು.
ಬರವಣಿಗೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತು ಇನ್ನೂ ಬರೆಯುವಂತೆ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

Santhosh Rao said...

ಬರಹ ಚೆನ್ನಾಗಿದೆ ...

ನಿಜ .. ಇಂತಹ ಕಥೆಗಳನ್ನು ನಾನು ತುಂಬಾ ಕೇಳಿದ್ದೇನೆ, ಆದರೆ ಸ್ವಂತ ಅನುಭವದ ಹಿಡಿತಕ್ಕೆ ಯಾವುದೇ ಸಿಕ್ಕಿಲ್ಲವಾದರು ನಂಬಲೇ ಬೇಕಾದಂತ ಪ್ರಸಂಗಗಳು ಇವೆ ..

ಆಧ್ಯಾತ್ಮಿಕವಾಗಿ ಸಾದನೆ ಮಾಡಿದವರಿಗೆ ಸಾವಿನ ಮೇಲೆ ಹಿಡಿತ ಸಾದಿಸಿರಬಹುದು ..

Belief in the supernatural reflects a failure of the imagination.

ವಿನಾಯಕ ಭಟ್ಟ said...

ಟಿವಿ 9ನ ಹೀಗೂ ಉಂಟೆ ಕಾರ್ಯಕ್ರಮಕ್ಕೆ ಒಳ್ಳೆ ವಿಷಯ. ಟಿಆರ್ ಪಿ ಸಕತ್ ಆಗಿ ಬರಬಹುದು....
ಚೆಂದದ ಲೇಖನ....

lancyad said...

ಅದ್ಬುತವಾಗಿತ್ತು ನಿಮ್ ವಿಷಯ..ಇದೆಲ್ಲವನ್ನು ನೋಡಿದಾಗ ನನ್ನ ಮನಸ್ಸಿನಲ್ಲಿ ಮೂಡುವ ಪ್ರಶ್ವೆ ಹೀಗೂ ಉ0ಟೇ......!?

Anonymous said...

ಬರಹ ಚೆನ್ನಾಗಿದೆ.

ಜೋಗಿಯವರ ಶೈಲಿಯೇ ಹಾಗೆ. ಇನ್ನೂ ಪೂಚಂತೇ ಅವರದ್ದು ಇನ್ನೂ ಸೂಪರ್.
ಓದುವಾಗಲೆಲ್ಲ ನಿಮ್ಮ ಅನಿಸಿಕೆಯಂತೆಯೇ ಅನ್ನಿಸುತ್ತದೆ.

ರಾಘವ ಶರ್ಮ said...

ಅಜ್ಜ ಸತ್ತದ್ದರಿಂದ ಊರಿನ ಹೆಂಗಸರಿಗೆ ನೆಮ್ಮದಿಯಾಗಿರಬಹುದು...
ಇನ್ನು ದೆವ್ವವಾಗಿ (?) ಕಾಡುತ್ತಾನೋ ಅಥವಾ ದೆವ್ವವನ್ನು ಊರಿನವರೇ ಗಾಳಿಸುದ್ದಿಯಿಂದ ಸೃಷ್ಟಿಸುತ್ತಾರೋ ನೋಡಬೇಕು... :)