31 January, 2009

ಪುಕ್ಕಟೆ ಪುರಾಣ


ಪುಕ್ಕಟೆ ಸಿಗುತ್ತದೆಯೆಂದರೆ ಇಂಡಿಯಾದಲ್ಲಿ ಜನ ಏನನ್ನು ಸ್ವೀಕರಿಸಲೂ ಸಿದ್ಧ. ಅದಕ್ಕೆ ನಾನೂ ಹೊರತಲ್ಲ!
ಆಗ ಹೆಗಲಿಗೆ ಮಣ ಭಾರದ ಚೀಲ ಏರಿಸಿ, ಕಾಲು ಹಾಕಲೂ ಆಗದ ಬಸ್ಸಲ್ಲಿ ೧ ಗಂಟೆ ಪ್ರಯಾಣಿಸಿ ಶಾಲೆಗೆ ಹೋಗುತ್ತಿದ್ದ ಕಾಲ. ಶಾಲೆ, ಮನೆ ಎರಡೇ. ಬೇರೆ ಪ್ರಪಂಚದ ಅರಿವು ಕಡಿಮೆ. ಧರ್ಮ, ಅರ್ಥ...ಗಳ ಬಗ್ಗೆಯೂ ಅಷ್ಟೊಂದು ತಿಳುವಳಿಕೆ ಇಲ್ಲ. ಮೇಷ್ಟ್ರು ಪಾಠ ಹೇಳಿಕೊಟ್ಟುದರಲ್ಲಿ ನನಗೆಷ್ಟು ತಿಳಿಯಿತೋ ಅಷ್ಟೆ. ಅನುಮಾನ, ನನ್ನೊಳಗೆ ಜಿಜ್ಷಾಸೆ ಯಾವುದೂ ಇಲ್ಲ.
ಒಂದು ದಿನ ನಮ್ಮ ಶಾಲೆಗೆ ಕ್ರೈಸ್ತ ಸಂಸ್ಥೆಯವರು ಅವರ ಧರ್ಮ ಪ್ರಚಾರದ "ಹಳೆಯ ಒಡಂಬಡಿಕೆ" ಎಂಬ ನೀಲಿ ಬೈಂಡಿನ ಪುಸ್ತಕವನ್ನು ತಂದು ಮಕ್ಕಳಿಗೆಲ್ಲ ದರ್ಮಕ್ಕೆ ಹಂಚಿದರು. ಅಲ್ಲದೆ ಅದರ ಕುರಿತು ಏನೇನೇ ಹೇಳಿದ್ದರು(ಈಗ ನೆನೆಪಿಲ್ಲ). ಆ ಪುಸ್ತಕ ಇವತ್ತಿಗೂ ಮನೆಯ ಕಾಪಾಟಿನಲ್ಲಿ ಭದ್ರವಾಗಿದೆ. ಪುಸ್ತಕಕದ ಪುಟ ಮಾತ್ರ ತೆರೆದಿಲ್ಲ!"
ಪುಕ್ಕಟೆ ಸಿಗುವುದಾದರೆ ನನಗೊಂದು ನನ್ನಪ್ಪಂಗೊಂದು ಇರಲಿ" ಎಂದು ಕೈ ಮುಂದು ಮಾಡುವಂತ ಜನ ನಾವು.
ನಾವೆಲ್ಲ ಮಕ್ಕಳು ಸಾಲಾಗಿ ಹೋಗಿ ಕೊಟ್ಟ ಪುಸ್ತಕವನ್ನು ತಂದು ನಮ್ಮ ಜಾಗದಲ್ಲಿ ಕುಳಿತೆವು. ಆದರೆ ಒಬ್ಬ ಮುಸ್ಲಿಂ ಹುಡುಗಿಯನ್ನು ಹೊರತಾಗಿ.
ನನಗೆ ಕುಳಿತಲ್ಲೇ ಆಶ್ಚರ್‍ಯ! ಪುಕ್ಕಟೆ ಕೊಡೋ ಪುಸ್ತಕವನ್ನು ಆಕೆಗೆ ಸ್ವೀಕರಿಸಲೇನು? ಆಕೆಯಲ್ಲಿ ಹೋಗಿ ಕೇಳುವಷ್ಟು ಧೈರ್ಯ ಸಾಲಲಿಲ್ಲ. ಮೊದಲೇ ಆಕೆ ತರಗತಿಯಲ್ಲಿ ಸ್ವಲ್ಪ ಧಿಮಾಕಿನ ಹುಡುಗಿ. ಆಗಲೇ ಹುಡಗರಲ್ಲಿ ಮಾತಾಡುವಳು. ಆಶ್ಚರ್ಯವಾ? ಹುಡುಗರಲ್ಲಿ ಮಾತಾಡಿದರೆ ತಪ್ಪೇನು. ಈಗ ಅದು ಸಂಗತಿಯೇ ಅಲ್ಲ. ಸಾಮಾನ್ಯ. ಆದರೆ ನಾನು ಹೋಗುತ್ತಿದ್ದುದು ಬಹಳ ಹಳ್ಳಿ ಶಾಲೆ. ಹೆಸರಿಗೆ ತಕ್ಕಂತೆ ಕುರುಡಾಗಿತ್ತು ಆ ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು... ಕರೆಂಟ್ ಇನ್ನೂ ಬಂದಿರಲಿಲ್ಲ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ನೀರಿಲ್ಲ. ಕುಡಿಯಲು ದೂರದಿಂದ ಪಾಳಿಯ ಪ್ರಕಾರ ನೀರು ತಂದು ಶಾಲೆಯ ಪ್ರಾಂಗಣದಲ್ಲಿಡಬೇಕಾಗಿತ್ತು.ಸಾಲದ್ದಕ್ಕೆ ನಮ್ಮ ಮೇಷ್ಟ್ರುಗಳೂ ಭಯಂಕರ ಸ್ಟ್ರಿಕ್ಟು. ಅದರಲ್ಲೂ ಇವತ್ತಿಗೂ ನನ್ನ ಕನಸಲ್ಲಿ ಬಂದು ಹೆದರಿಸುವವರು ಲೆಕ್ಕದ ಮೇಷ್ಟ್ರು. ಅದ್ಯಕೋ ಗೊತ್ತಿಲ್ಲ ಹೆಚ್ಚಾಗಿ ಗಣಿತದ ಮೇಷ್ಟ್ರುಗಳೇ ಜೋರಿರುತ್ತಾರೆ. ಆದರೂ ನನ್ನ ಶಾಲೆ. ಮೇಷ್ಟ್ರುಗಳ ಬಗ್ಗೆ ಅಭಿಮಾನ ಖಂಡಿತಾ ಇದೆ. ವಿಶಯ ಎಲ್ಲಿಂದ ಎಲ್ಲಗೋ ಹೋಯಿತು. ಆ ಮೇಷ್ಟ್ರ ಬಗೆಗೆ ಹೇಳುವಂಥದ್ದು ಬಹಳ ಇದೆ. ಇನ್ನೊಮ್ಮೆ ಬರೆಯುತ್ತೇನೆ.
ಅಂಥ ಲೆಕ್ಕದ ಮೇಷ್ಟ್ರಗೇ ಎದುರುತ್ತರ ಕೊಟ್ಟ ಹುಡುಗಿ ಆಕೆ. ಇನ್ನು ನಾನು ಹೇಗೆ ಹೋಗಿ ಕೇಳುವುದು? ಪುಸ್ತಕ ಯಾಕೆ ಸ್ವೀಕರಿಲಿಲ್ಲ? ಎಂದು.
ಇವತ್ತು ನಾನೇ ಕೂತು ಯೋಚಿಸಿದಾಗ ಸಿಕ್ಕ ಉತ್ತರ ಇದಾಗಿರಬಹುದೇ?
ಆವರಣ ಕಾದಂಬರಿ ಓದಿ, ಇವತ್ತಿನ ಉಗ್ರಗಾಮಿ ಸಂಘಟನೆಗಳ ಉದ್ದೇಶ ನೋಡಿದರೆ....
ಆಕೆಗೆ ಆಗಲೇ ತನ್ನ ಮುಸ್ಲಿಂ ಧರ್ಮದ ಬಗೆಗೆ ಅಚಲವಾದ ಪ್ರೀತಿ ವಿಶ್ವಾಸ ಇದ್ದಿರಬಹುದೇ?
ತನ್ನ ಧರ್ಮ ಬಿಟ್ಟು ಬೇರೆ ಯಾವ ಧರ್ಮದ ಬಗೆಗಿನ ಅರಿವು ತನಗೆ ಬೇಡ ಎಂದು ಆಗಲೇ ನಿರ್ಧರಿಸಿರಬಹುದೇ?
ಪುಕ್ಕಟೆ ಕೊಟ್ಟರೂ ಅನ್ಯ ಧರ್ಮದ ಬಗೆಗಿನ ಪುಸ್ತಕ, ತನಗೆ ಅಗತ್ಯವಿಲ್ಲ ಎಂಬ ಧೋರಣೆಯೇ?
ತಾನು ಓದದ ಪುಸ್ತಕ ಮನೆಯಲ್ಲಿಟ್ಟು ಪ್ರಯೋಜನವೇನು?ಎಂಬ ನಿಲುವೇ?
ಅರ್ಥವಾಗುತ್ತಿಲ್ಲ...

3 comments:

Prabhuraj Moogi said...

ನಾನೂ ನಮ್ಮ ಶಾಲೆಯಲ್ಲಿ ಹೀಗೆ ಪುಸ್ತಕ ವಿತರಿಸಿದಾಗ ತೆಗೆದುಕೊಂಡು ಬಂದಿದ್ದೆ, ಆಗ ಶಾಲೆಯ ಮೇಶ್ಟ್ರು ಒಬ್ಬರು ಚೆನ್ನಾಗಿ ಬಯ್ದಿದ್ದರು, ಯಾಕೆ ಅಂತ ಆಗ ಗೊತ್ತಾಗಿರಲಿಲ್ಲ, ಈಗ ದೊಡ್ಡವನಾದ ಹಾಗೆ ಗೊತ್ತಾಗಿದೆ... ಚೆನ್ನಾಗಿ ಬರೆಯುತ್ತೀರಿ...

ಸಿಂಧು ಭಟ್. said...

ಥ್ಯಾಂಕ್ಸ್ ಪ್ರಭುರಾಜ್ ಅವರೆ,
ನನ್ನ ಬ್ಲಾಗ್ ನೋಡಿ ಪ್ರತಿಕ್ರಿಯಿಸಿದ್ದಕ್ಕೆ.

ವಿ.ರಾ.ಹೆ. said...

ನಮಗೂ ಹಂಚಿದ್ರು ಯಾರೋ.. ತಲೆಬುಡ ಅರ್ಥಾಗಿರಲಿಲ್ಲ ಅದರಲ್ಲಿರೋದು. ಇನ್ನೂ ಇದೆ ಮನೆಯಲ್ಲಿ . ಧರ್ಮಪ್ರಚಾರ ಜೋರಾಗೇ ಮಾಡುತ್ತಿದ್ದಾರೆ ಎಲ್ಲಾ ಕಡೆಯಲ್ಲೂ ಶಾಲಾ ಮಕ್ಕಳನ್ನೂ ಬಿಡದೇ!