31 January, 2009

ಪುಕ್ಕಟೆ ಪುರಾಣ


ಪುಕ್ಕಟೆ ಸಿಗುತ್ತದೆಯೆಂದರೆ ಇಂಡಿಯಾದಲ್ಲಿ ಜನ ಏನನ್ನು ಸ್ವೀಕರಿಸಲೂ ಸಿದ್ಧ. ಅದಕ್ಕೆ ನಾನೂ ಹೊರತಲ್ಲ!
ಆಗ ಹೆಗಲಿಗೆ ಮಣ ಭಾರದ ಚೀಲ ಏರಿಸಿ, ಕಾಲು ಹಾಕಲೂ ಆಗದ ಬಸ್ಸಲ್ಲಿ ೧ ಗಂಟೆ ಪ್ರಯಾಣಿಸಿ ಶಾಲೆಗೆ ಹೋಗುತ್ತಿದ್ದ ಕಾಲ. ಶಾಲೆ, ಮನೆ ಎರಡೇ. ಬೇರೆ ಪ್ರಪಂಚದ ಅರಿವು ಕಡಿಮೆ. ಧರ್ಮ, ಅರ್ಥ...ಗಳ ಬಗ್ಗೆಯೂ ಅಷ್ಟೊಂದು ತಿಳುವಳಿಕೆ ಇಲ್ಲ. ಮೇಷ್ಟ್ರು ಪಾಠ ಹೇಳಿಕೊಟ್ಟುದರಲ್ಲಿ ನನಗೆಷ್ಟು ತಿಳಿಯಿತೋ ಅಷ್ಟೆ. ಅನುಮಾನ, ನನ್ನೊಳಗೆ ಜಿಜ್ಷಾಸೆ ಯಾವುದೂ ಇಲ್ಲ.
ಒಂದು ದಿನ ನಮ್ಮ ಶಾಲೆಗೆ ಕ್ರೈಸ್ತ ಸಂಸ್ಥೆಯವರು ಅವರ ಧರ್ಮ ಪ್ರಚಾರದ "ಹಳೆಯ ಒಡಂಬಡಿಕೆ" ಎಂಬ ನೀಲಿ ಬೈಂಡಿನ ಪುಸ್ತಕವನ್ನು ತಂದು ಮಕ್ಕಳಿಗೆಲ್ಲ ದರ್ಮಕ್ಕೆ ಹಂಚಿದರು. ಅಲ್ಲದೆ ಅದರ ಕುರಿತು ಏನೇನೇ ಹೇಳಿದ್ದರು(ಈಗ ನೆನೆಪಿಲ್ಲ). ಆ ಪುಸ್ತಕ ಇವತ್ತಿಗೂ ಮನೆಯ ಕಾಪಾಟಿನಲ್ಲಿ ಭದ್ರವಾಗಿದೆ. ಪುಸ್ತಕಕದ ಪುಟ ಮಾತ್ರ ತೆರೆದಿಲ್ಲ!"
ಪುಕ್ಕಟೆ ಸಿಗುವುದಾದರೆ ನನಗೊಂದು ನನ್ನಪ್ಪಂಗೊಂದು ಇರಲಿ" ಎಂದು ಕೈ ಮುಂದು ಮಾಡುವಂತ ಜನ ನಾವು.
ನಾವೆಲ್ಲ ಮಕ್ಕಳು ಸಾಲಾಗಿ ಹೋಗಿ ಕೊಟ್ಟ ಪುಸ್ತಕವನ್ನು ತಂದು ನಮ್ಮ ಜಾಗದಲ್ಲಿ ಕುಳಿತೆವು. ಆದರೆ ಒಬ್ಬ ಮುಸ್ಲಿಂ ಹುಡುಗಿಯನ್ನು ಹೊರತಾಗಿ.
ನನಗೆ ಕುಳಿತಲ್ಲೇ ಆಶ್ಚರ್‍ಯ! ಪುಕ್ಕಟೆ ಕೊಡೋ ಪುಸ್ತಕವನ್ನು ಆಕೆಗೆ ಸ್ವೀಕರಿಸಲೇನು? ಆಕೆಯಲ್ಲಿ ಹೋಗಿ ಕೇಳುವಷ್ಟು ಧೈರ್ಯ ಸಾಲಲಿಲ್ಲ. ಮೊದಲೇ ಆಕೆ ತರಗತಿಯಲ್ಲಿ ಸ್ವಲ್ಪ ಧಿಮಾಕಿನ ಹುಡುಗಿ. ಆಗಲೇ ಹುಡಗರಲ್ಲಿ ಮಾತಾಡುವಳು. ಆಶ್ಚರ್ಯವಾ? ಹುಡುಗರಲ್ಲಿ ಮಾತಾಡಿದರೆ ತಪ್ಪೇನು. ಈಗ ಅದು ಸಂಗತಿಯೇ ಅಲ್ಲ. ಸಾಮಾನ್ಯ. ಆದರೆ ನಾನು ಹೋಗುತ್ತಿದ್ದುದು ಬಹಳ ಹಳ್ಳಿ ಶಾಲೆ. ಹೆಸರಿಗೆ ತಕ್ಕಂತೆ ಕುರುಡಾಗಿತ್ತು ಆ ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು... ಕರೆಂಟ್ ಇನ್ನೂ ಬಂದಿರಲಿಲ್ಲ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ನೀರಿಲ್ಲ. ಕುಡಿಯಲು ದೂರದಿಂದ ಪಾಳಿಯ ಪ್ರಕಾರ ನೀರು ತಂದು ಶಾಲೆಯ ಪ್ರಾಂಗಣದಲ್ಲಿಡಬೇಕಾಗಿತ್ತು.ಸಾಲದ್ದಕ್ಕೆ ನಮ್ಮ ಮೇಷ್ಟ್ರುಗಳೂ ಭಯಂಕರ ಸ್ಟ್ರಿಕ್ಟು. ಅದರಲ್ಲೂ ಇವತ್ತಿಗೂ ನನ್ನ ಕನಸಲ್ಲಿ ಬಂದು ಹೆದರಿಸುವವರು ಲೆಕ್ಕದ ಮೇಷ್ಟ್ರು. ಅದ್ಯಕೋ ಗೊತ್ತಿಲ್ಲ ಹೆಚ್ಚಾಗಿ ಗಣಿತದ ಮೇಷ್ಟ್ರುಗಳೇ ಜೋರಿರುತ್ತಾರೆ. ಆದರೂ ನನ್ನ ಶಾಲೆ. ಮೇಷ್ಟ್ರುಗಳ ಬಗ್ಗೆ ಅಭಿಮಾನ ಖಂಡಿತಾ ಇದೆ. ವಿಶಯ ಎಲ್ಲಿಂದ ಎಲ್ಲಗೋ ಹೋಯಿತು. ಆ ಮೇಷ್ಟ್ರ ಬಗೆಗೆ ಹೇಳುವಂಥದ್ದು ಬಹಳ ಇದೆ. ಇನ್ನೊಮ್ಮೆ ಬರೆಯುತ್ತೇನೆ.
ಅಂಥ ಲೆಕ್ಕದ ಮೇಷ್ಟ್ರಗೇ ಎದುರುತ್ತರ ಕೊಟ್ಟ ಹುಡುಗಿ ಆಕೆ. ಇನ್ನು ನಾನು ಹೇಗೆ ಹೋಗಿ ಕೇಳುವುದು? ಪುಸ್ತಕ ಯಾಕೆ ಸ್ವೀಕರಿಲಿಲ್ಲ? ಎಂದು.
ಇವತ್ತು ನಾನೇ ಕೂತು ಯೋಚಿಸಿದಾಗ ಸಿಕ್ಕ ಉತ್ತರ ಇದಾಗಿರಬಹುದೇ?
ಆವರಣ ಕಾದಂಬರಿ ಓದಿ, ಇವತ್ತಿನ ಉಗ್ರಗಾಮಿ ಸಂಘಟನೆಗಳ ಉದ್ದೇಶ ನೋಡಿದರೆ....
ಆಕೆಗೆ ಆಗಲೇ ತನ್ನ ಮುಸ್ಲಿಂ ಧರ್ಮದ ಬಗೆಗೆ ಅಚಲವಾದ ಪ್ರೀತಿ ವಿಶ್ವಾಸ ಇದ್ದಿರಬಹುದೇ?
ತನ್ನ ಧರ್ಮ ಬಿಟ್ಟು ಬೇರೆ ಯಾವ ಧರ್ಮದ ಬಗೆಗಿನ ಅರಿವು ತನಗೆ ಬೇಡ ಎಂದು ಆಗಲೇ ನಿರ್ಧರಿಸಿರಬಹುದೇ?
ಪುಕ್ಕಟೆ ಕೊಟ್ಟರೂ ಅನ್ಯ ಧರ್ಮದ ಬಗೆಗಿನ ಪುಸ್ತಕ, ತನಗೆ ಅಗತ್ಯವಿಲ್ಲ ಎಂಬ ಧೋರಣೆಯೇ?
ತಾನು ಓದದ ಪುಸ್ತಕ ಮನೆಯಲ್ಲಿಟ್ಟು ಪ್ರಯೋಜನವೇನು?ಎಂಬ ನಿಲುವೇ?
ಅರ್ಥವಾಗುತ್ತಿಲ್ಲ...

27 January, 2009

ಮಾತು ಆಡಿದರೆ ಮುಗಿಯಿತು...

ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿರೋ ಬಹಳ ದೊಡ್ಡ ಮೈದಾನ(ಪ್ರಗತಿ ಮೈದಾನ)ದಲ್ಲಿ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ ಅನ್ನೋ ಪ್ರದರ್ಶನ ನಡೆದಿತ್ತು. "ಹೋಗೋಣ 355 ನಂಬರ್ ಬಸ್ ಹತ್ಕೊಂಡು ನನ್ನ ಕಛೇರಿಗೆ ಬಾ" ಅಂತ ಗಂಡ ಕರೆದದ್ದಕ್ಕೆ ಬ್ಯಾಗ್ ಏರಿಸಿ ಹೊರಟೆ.
ನಮ್ಮ ಜೊತೆಗೆ ಅವರ ಗೆಳೆಯ ಆತನ ಹೆಂಡತಿ ಬರುತ್ತೇವೆಂದು ಹೇಳಿದ್ದಕ್ಕೆ ನಾವು ಕಛೇರಿಯಲ್ಲಿ ಕಾದೆವು ಕಾದೆವು. ಅವರುಗಳ ಪತ್ತೆ ಇಲ್ಲ! ಅದು ಬೇರೆ ಆ ದಿವಸ ಪ್ರದರ್ಶನದ ಕೊನೆಯ ದಿನವಾಗಿತ್ತು. ಬರುತ್ತೇವೆಂದು ಹೇಳಿದವರನ್ನು ಬಿಟ್ಟು ಹೋಗುವಂತಿಲ್ಲ, ಹೋದರೆ ಇಡಿಯಾಗಿ ಪ್ರದರ್ಶನವನ್ನು ನೋಡುವಷ್ಟು ಸಮಯವಿರಲಿಲ್ಲ. ಇನ್ನೇನು ಮಾಡುವುದು? ಎಂದು ಮಂಡೆ ಬಿಸಿ ಮಾಡುತ್ತಾ ಕೂತೆವು. ಕೊನೆಗೆ "ಈ ಸಲ ಬೇಡ ಮುಂದಿನ ವರ್ಷ ಯಾರಿಗೂ ಕಾಯುವುದು ಬೇಡ ನಾವೇ ಹೋಗೋಣ ಈಗ ನನ್ನನ್ನು ಬಸ್ ಸ್ಟ್ಯಾಂಡ್ ತನಕ ಬಿಡು ಮನೆಗೆ ಹೋಗುತ್ತೇನೆ" ಎಂದು ಹೇಳಿ ಹೊರಟೆ.

ಘಟನೆ_೧

"ಬಂದ ದಾರಿಗೆ ಸುಂಕವಿಲ್ಲ" ಅಲ್ಲ. ಬಸ್‌ಗೆ ಕಂಡಕ್ಟರ್‌ಗೆ ಹತ್ತು ರೂಪಾಯಿ ಕೊಟ್ಟು ಕುಳಿತೆ.
ನನ್ನ ಪಕ್ಕದಲ್ಲೇ ಬಂದು ನಿಂತ ವ್ಯಕ್ತಿ ಆತನ ಕೆಲವು ದೊಡ್ಡ ದೊಡ್ಡ ಪುಸ್ತಕಗಳನ್ನು ನನ್ನ ಕೈಗಿತ್ತ. ಅರೆ! ನಂ ಮಂಗ್ಳೂರ್ ಬುದ್ದಿ ಜನ ಇಲ್ಲೂ ಇದಾರಾ? ಅಂತ ಮನ್ಸಲ್ಲೇ ಯೋಚಿಸ್ತಾ ಇದ್ದಾಗ "ಲೋ ಮಚಾ ಈ ಬಸ್ ಹಾಸ್ಟೇಲ್ ತನಕ ಹೋಗುತ್ತಲ್ಲ?"
ದಿಲ್ಲಿಯಲ್ಲಿ ಕನ್ನಡ ಮಾತಾಡೋರು? ನನ್ ಕಿವಿ ನೆಟ್ಟಗಾಯಿತು.
"ಏನೋ ಮಾರಾಯಾ ಥೂ ನಂ ಹಾಸ್ಟೇಲ್ ಅಂತೂ...ಈ ಸಲ ಬಿಟ್ ಬಿಡ್ತೀನಿ. ಕಣೋ. ಮೂರು ಸಾವಿರ ವಾಪಾಸ್ ಕೊಡ್ತಾರಲ್ಲ?ಕೊಡ್ದೆ ಏನು ನಂದು ಗವರ್‍ನಮೆಂಟ್ ಸೀಟ್ . ಏನು ನೀರಿಲ್ಲ ಏನಿಲ್ಲ.ಬೆಳಗ್ಗೆ ಬೇಗ ಹೋದ್ರೂ ಬಿಸಿ ನೀರಿಲ್ಲ ಕಣೋ. ನೆನ್ನೆ ಪಲ್ಯ ಚೆನಾಗ್ ಮಾಡಿದ್ರಲ್ಲ, ಅದೇನೋ ಸೊಪ್ಪಿಂದು..." ಹೀಗೆ ಸಂಭಾಷಣೆ ನಡೆಯುತ್ತಿತ್ತು.
ಅಪರೂಪಕ್ಕೆ ಪರವೂರಲ್ಲಿ ಕನ್ನಡದವರು ಸಿಕ್ಕಾಗ ಕರ್ನಾಟಕದಲ್ಲಿ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂತೆ ಕನ್ನಡ, ಕನ್ನಡಿಗರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೂ ನಾನು ಸುಮ್ಮನೆ ಕುಳಿತು ಅವರುಗಳ ಸಂಭಾಷಣೆ ಕೇಳುತ್ತಿದ್ದೆ.
ಆತ ಕೊಟ್ಟ ಪುಸ್ತಕದಲ್ಲಿ ಯಾವ್ದೋ ಮೇಲ್ ಐಡಿ ಇತ್ತು. ನನ್ನ ಕಾಲ ಮೇಲಿದ್ದ ಆ ಪುಸ್ತಕವನ್ನ ಇನ್ನೊಬ್ಬ ಇಣುಕಿ ನೋಡಿದ. (ಫಿಮೇಲ್ ಐಡಿ ಇರಬಹುದೇನೋ ಅಂತ)
"ಲೋ ಅದು ಅವ್ರ ಬುಕ್ ಅಲ್ಲ ಕಣೋ...ಅವ್ರ ಮೇಲ್ ಐಡಿ ಅಂತ ನೋಡ್ತಾ ಇದ್ಯಾ? ಅದು ನಂ ಸರ್‌ದು...ಈ ಬಸ್ ಚೆನ್ನಾಗಿದ್ಯಯಲ್ಲ. ಕೆಲವು ಬಸ್ ಏನು ಗಲೀಜಿರುತ್ತೆ ಮಾರಾಯ, ಯಾಕೆ ಬಸ್ ನಿಂತು ಬಿಡ್ತು?"
"ಅದೇ ಮೇಲಿಂದ ಟ್ರೇನ್ ಹೋಗ್ತಾ ಇದ್ಯಲ್ಲ!",
"ತಲೆ ನಿಂದು".
ಹೀಗೆ ಅವ್ರ ಡೈಲಾಗ್‌ಗಳು ಮುಂದುವರಿಯುತ್ತಿತ್ತು. ಕುಳಿತಲ್ಲೇ ನಂಗೆ ನಗು. ಈ ಹುಡುಗರು ನನ್ ಬಗ್ಗೆ ಇನ್ನು ಏನೆಲ್ಲಾ ಹೇಳ್ತಾರೆ ಅನ್ನೋ ಕುತೂಹಲ. ಅಷ್ಟೊತ್ತಿಗೆ ಅವರಿಗೆ ಹಿಂದೆ ಸೀಟ್ ಸಿಕ್ತು. ಆ ಹುಡುಗ ನನ್ನತ್ರ ಪುಸ್ತಕ ಕೇಳಿ "ಥ್ಯಾಂಕ್ಯೂ" ಅಂದಾಗ "ಪರವಾಗಿಲ್ಲ , ಥ್ಯಾಂಕ್ಯೂ ಎಲ್ಲ ಬೇಡ ಬಿಡಿ" ಅಂದೆ.
ನಿಂತಲ್ಲೇ ಶಾಕ್ ಕೊಟ್ಟಂಗಾಯ್ತು ಅವರಿಗೆ. "ಮೇಡಮ್ಮು ಕನ್ನಡದವ್ರಾ? ಮೊದಲೇ ಹೇಳೋದಲ್ವಾ?" ಅಂತ ಜೋರಾಗಿ ಹೇಳಿದಾಗ ಬಸ್ಸಲ್ಲಿದ್ದವರೆಲ್ಲ ನಮ್ಮತ್ತ ತಿರುಗಿ ನೋಡಿದರು.
"ಏನೇನು ಡಯಲಾಗ್ ಹೇಳ್ತೀರಾ ಅಂತ ಕೇಳ್ಕಂಡು ಮತ್ತೆ ನಿಮ್ಮತ್ರ ಮಾತಾಡುವ ಅಂತಿದ್ದೆ" ಅಂದೆ.
ಪಾಪ ಹುಡುಗರು ಐಎಸ್ ಕೋಚಿಂಗಿಗೆ ಮೈಸೂರು, ಕಾರವಾರದಿಂದ ಬಂದವರಂತೆ.

ಘಟನೆ_

ಹೀಗೇ ಇನ್ನೊಂದು ಘಟನೆ ನನಗಾಗಿತ್ತು. ಕಾಲೇಜಿಗೆ ಹೋಗುತ್ತಿದ್ದ ಸಮಯ. ನನ್ನ ಸೌಂಡ್ ಬಾಕ್ಸ್ ಒಳಗೆ ವಾಲ್ಯೂಮ್ ಸ್ವಲ್ಪ ದೊಡ್ಡದಾಗಿ ಫಿಕ್ಸ್ ಮಾಡಿದಾನೆ ಆ ಭಗವಂತ!
ಆಗ ಮಂಗಳೂರಿನಲ್ಲಿ ಮರಕಡ ಸ್ವಾಮಿಗಳ ಬಗ್ಗೆ ಏನೋ ಗುಸು ಗುಸು, ಬಿಸಿ ಬಿಸಿ ಚರ್ಚೆ ಜೋರಾಗೇ ನಡೆಯುತ್ತಿತ್ತು. ಅದನ್ನ ನನ್ನ ಮುಸ್ಲಿಂ ಗೆಳತಿಯೊಬ್ಬಳ ಹತ್ತಿರ ಹೇಳುತ್ತಿದ್ದೆ. ಆಕೆಗೆ ಮಾತ್ರವಲ್ಲ ಬಸ್ಸಲ್ಲಿದ್ದವರಿಗೆಲ್ಲ ಕೇಳುವಷ್ಟು ಜೋರಾಗಿ ಸ್ಪಿರಿಟ್ಟಲ್ಲಿ ಹೇಳುತ್ತಿದ್ದೆ. ಅದರ ಜೊತೆ ಒಡಿಯೂರು ಸ್ವಾಮಿಗಳು ಮರದ ಗೆಲ್ಲಿನಲ್ಲಿ ಮಂಗನಂತೆ ಹಾರಾಡುವುದನ್ನು (ಸ್ವತಃ ನಾನು ನೋಡಿಲ್ಲ. ನೋಡಿದವರು ಹೇಳಿದ್ದನ್ನು ಕೇಳಿದ್ದೇನೆ.) ಅವರ ಬಗೆಗಿನ ಊಹಾಪೋಹವನ್ನೆಲ್ಲ ನನಗೆ ಗೊತ್ತಿದ್ದ ಪಾಂಡಿತ್ಯವನ್ನು ಆಕೆಯ ಎದುರು ಪ್ರದರ್ಶಿಸುತ್ತಿದ್ದೆ. ಪ್ರಪಂಚದ ಗೊಡವೆಯೂ ಇಲ್ಲದೆ!
ಇದ್ದಕ್ಕಿದ್ದಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತ ಸುಮಾರು ೫೦ ವರ್ಷದ ಹೆಂಗಸೊಬ್ಬಳು "ಸ್ವಾಮಿಗಳ ಬಗ್ಗೆ ನಿಮಗೇನು ಗೊತ್ತು? ಅವ್ರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಾವು ಅವರ ಭಕ್ತರು" ಅನ್ನಬೇಕೆ?
ನನ್ನ ಎದೆ ದಸಕ್ ಎಂದಿತು. ಕುಳಿತಲ್ಲೆ ಮೈ ಬಿಸಿಯಾಯಿತು. ಆಕೆ ಬಸ್ಸಲ್ಲಿದ್ದವರೆಲ್ಲರೆದುರು ನನ್ನ ಮೇಲೆ ಎಗರಾಡಿದರೆ? ನನ್ನತ್ರ ಎದುರುತ್ತರ ಕೊಡುವಷ್ಟು ಪಾಂಡಿತ್ಯವೂ ಇಲ್ಲ, ಧೈರ್ಯವೂ ಇಲ್ಲ. ನನ್ನ ಪುಣ್ಯಕ್ಕೆ ಹಾಗೇನೂ ಆಗಿಲ್ಲ.

ಘಟನೆ_೩

ನನ್ನ ಅತ್ತೆಗೂ ಹೀಗೇ ಆಗಿತ್ತಂತೆ. ಅಜ್ಜಿ ಮನೆಗೆ ಹೋದಾಗ ನಾವೆಲ್ಲ ನೆಂಟರು ಸೇರಿರುವಾಗ ಹಳೆಯ ಘಟನೆಗಳ ಕುರಿತು ಮೆಲುಕು ಹಾಕುವ ಪದ್ದತಿ.
ನನ್ನ ಸೋದರಮಾವನಿಗೆ ಪುತ್ತೂರಿನಲ್ಲಿ "ಕಲ್ಪವೃಕ್ಷ" ಅನ್ನುವ ಐಸ್ ಕ್ರೀಮ್ ಪಾರ್ಲರ್ ಇತ್ತು. ನಾನು ಸಣ್ಣದಿರುವಾಗ ಪುತ್ತೂರಿಗೆ ಹೋದರೆ ಖಾಯಂ ಮಾವನ ಅಂಗಡಿಯಲ್ಲಿ ಪುಕ್ಕಟೆ ಗಡ್‌ಬಡ್. ನನ್ನಂತವರು ಪುಕ್ಕಟೆ ತಿಂದು ತಿಂದು ಲಾಸ್ ಆಗಿ ಐಸ್ ಕ್ರೀಮ್ ಜೊತೆ ಅಂಗಡಿಯೂ ಕರಗಿ ಹೋಯಿತೋ? ಗೊತ್ತಿಲ್ಲ.
ಅತ್ತೆ ಕ್ಯಾಶಿಯರ್ ಕುರ್ಚಿಯಲ್ಲಿ ಕುಳಿತಿದ್ದ ದಿನ ನಾಲ್ಕೈದು ಹುಡುಗರು ಐಸ್ ಕ್ರೀಮ್ ತಿನ್ನುತ್ತಾ ಅತ್ತೆಯ ಜೊತೆ ಮಾತನಾಡಲು ತೊಡಗಿದರಂತೆ. ವಿಶಯ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಧರ್ಮದ ಬಗ್ಗೆ ತಿರುಗಿತಂತೆ.
"ಮುಸ್ಲಿಂ ಜನರೇ ಮೋಸ, ಅವರ ವರ್ತನೆಯೇ ವಿಚಿತ್ರ, ಯಾರನ್ನು ನಂಬಿದರೂ ಅವರನ್ನು ನಂಬಬಾರದು" ಅಂತೆಲ್ಲಾ ಅತ್ತೆಯ ಭಾಷಣ.
ಅವರೆಲ್ಲಾ ಇಸ್ ಕ್ರೀಮ್ ತಿಂದು ದುಡ್ಡು ಕೊಡುವಾಗ "ಅಕ್ಕ ನಾವೂ ನೀವು ಬೈದ ಜಾತಿಗೇ ಸೇರಿದವರು." ಅಂದಾಗ ಅತ್ತೆ ಸುಸ್ತಂತೆ!
ಅದಕ್ಕೇ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ದೂರುವ ವಿಶಯ ಮಾತಾಡಬೇಡಿ. ಮಾತನಾಡಿದರೂ ಹೊಗಳುವ ವಿಶಯ ಮಾತಾಡಿ.

12 January, 2009

ಚಳಿ ಚಳಿ ತಾಳೆನು ದಿಲ್ಲಿ ಚಳಿಯಾ...


ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಮೈಗೆ ಥರ್ಮಲ್ ವೇರ್, ಮೇಲಿಂದ ಅಂಗಿ, ಅದರ ಮೇಲಿಂದ ಸ್ವೆಟರ್, ಶಾಲು. ಇದಿಷ್ಟು ಸಾಕಾಗಿಲ್ಲವೆಂದರೆ ಜಾಕೆಟ್ಟು, ಕಾಲಿಗೆ ಸಾಕ್ಸು. ಮಣದ ಭಾರದ ಬಟ್ಟೆ ಹೇರಿಕೊಂಡರೂ ಮೈ ನಡುಗಿಸುತ್ತದೆ ದಿಲ್ಲಿ ಚಳಿ.
ಜೀವನದಲ್ಲಿ ಈತನಕ ಇಷ್ಟು ಅಂಗಿ ಹಾಕಿಯೇ ಇಲ್ಲ. ಅದು ಬಿಡಿ ಸ್ವೆಟರ್ ಹಾಕಿದ ನೆನಪೂ ಇಲ್ಲ. ಕಳೆದ ವರ್ಷ ಅಮ್ಮಮ್ಮ (ಅಜ್ಜಿ) ಕಾಶಿಗೆ ಹೋಗಿದ್ದಾಗ ನನಗಾಗಿ ಒಂದು ಸ್ವೆಟರ್ ತಂದಿದ್ದರು. ಅಮ್ಮಮ್ಮ ಹೇಗೂ ಗಿಫ್ಟ್ ಕೊಡುವಾಗ ಉಪಯೋಗಕ್ಕೆ ಬಾರದ ಸ್ವೆಟರ್ ಕೊಡುವ ಬದಲು ಡ್ರೆಸ್ಸಾದರೂ ತಂದಿದ್ದರೆ ಚೆನ್ನಾಗಿತ್ತು ಅಂತ ಮನಸೊಳಗೇ ಅಂದುಕೊಂಡು, ಒಮ್ಮೆ ಹಾಕಿ ಕಪಾಟೊಳಗಿಟ್ಟಿದ್ದೆ.ಈಗ ಗೊತ್ತಾಯಯ್ತು. ಅಮ್ಮಮ್ಮನ ಸಿಕ್ಸ್ ಸೆನ್ಸಿಗೆ ಆಗಲೇ ಗೊತ್ತಿತ್ತೇನೊ ನಾನು ಮುಂದೆ ದಿಲ್ಲಿಯ ಚಳಿ ಅನುಭವಿಸಲಿರುವೆನೆಂದು. ಈಗ ಮನೆಯಲ್ಲಿ ದಿನಾ ನನ್ನನ್ನು ಚಳಿಯಿಂದ ಕಾಪಾಡ್ತಿರೋದು ಅದೇ ಸ್ವೆಟರ್. ಅಮ್ಮಮ್ಮನಿಗೆ ೪ ಡಿಗ್ರಿ ಸೆಲ್ಶಿಯಸ್ ಚಳಿಯಷ್ಟು ಆಳವಾದ ಥ್ಯಾಂಕ್ಸ್ ಹೇಳಲೇ ಬೇಕು.
ಇಲ್ಲಿ ತನಕ ಕಾಸರಗೋಡು, ಮಂಗಳೂರಲ್ಲಿದ್ದ ನಂಗೆ ಚಳಿ ಎಂದರೇನೆಂದು ಅನುಭವಿಸಿ ಖಂಡಿತಾ ಗೊತ್ತಿರಲಿಲ್ಲ. ಅಲ್ಲಿಂದ ನೇರ ಇಂಥ ಘನಘೋರ ಚಳಿ ಪ್ರದೇಶಕ್ಕೆ ಬಂದರೆ? ಬಾಣಲಿಯಿಂದ ಪ್ರಿಡ್ಜಿಗೆ ಬಿದ್ದಂತಾಗುತ್ತದೆ. ಅಬ್ಬಬ್ಬಾ! ಒಮ್ಮೆಯಂತೂ ಶರೀರದ ಕಂಡೆನ್ಸರ್ ವೀಕ್ ಆಗೋದು ಗ್ಯಾರೆಂಟಿ.
ಮೈಯಲ್ಲಿ ಜ್ವರ! ಮೂಗಲ್ಲಿ ಸೊರ ಸೊರ!
ಆದರೂ ಈ ವಾತಾವರಣವೂ ಒಂಥರಾ ಮಜಾ. ಇಷ್ಟಲ್ಲಾ ಅಂಗಿ ಹಾಕ್ಬೇಕಲ್ಲಾ ಅನ್ನೋ ಬೇಜಾರಿನ ಹೊರತಾಗಿ ದಿನಾ ಬಟ್ಟೆ ತೊಳೆಯೋ ಕೆಲಸ ಇಲ್ಲ. ಮನೆ ಎಸಿಗಿಂತ ಕೂಲ್. ಬೆಚ್ಚಗೆ ರಜಾಯಿ ಹೊದ್ದು ಮಲಗೋ ಸುಖ ಈಗಲೇ ಅನುಭವಿಸಬೇಕು. ಬೆಳಗ್ಗೆ ಗಂಟೆ ಎಂಟಾದರೂ ಬೆಳಕಿಲ್ಲ. ಬಿಸಿ ಬಿಸಿ ಹಬೆಯಾಡೋ ಚಾಹ ಕುಡಿಯಲು ಮಜಾ ಬರುವುದೇ ಈಗ.
ಬೆಳಗ್ಗೆ ಮನೆಯಿಂದ ಹೊರಗೆ ಕಾಲಿಟ್ಟೆಯೋ ನೂರು ಇನ್ನೂರು ಮೀಟರ್ ದೂರಕ್ಕಿಂತ ಆಚೆ ಏನು ಕಾಣಿಸೋದಿಲ್ಲ. ೨೦೦೭ರ ಗಿನ್ನಿಸ್ ವರ್ಲ್ಡ ರೆಕಾರ್ಡಿನ ಪ್ರಕಾರ ವಿಶ್ವದ ಅತಿ ದೊಡ್ಡ ಮತ್ತು ಅಗಲವಾಗ ಹಿಂದೂ ದೇವಾಲಯ ಎಂದು ಪ್ರಸಿದ್ದಿಪಡೆದ ಅಕ್ಷರಧಾಮ ದೇವಸ್ಥಾನವಿರುವುದು ನಮ್ಮ ಮನೆಯಿಂದ ೨ಕಿಮೀ. ದೂರದಲ್ಲಿ. ಸದ್ಯ ಒಂದು ಮಧ್ಯಾಹ್ನ ಆ ದಾರಿಯಾಲ್ಲಾಗಿ ಹೋದರೆ ಅಕ್ಷರಧಾಮ ನಾಪತ್ತೆ. ಪೂರ್ತಿಯಾಗಿ ಮಂಜು ಮುಸುಕು!
ಮಧ್ಯಾಹ್ನ ಹೋದರೆ ಇಂಡಿಯಾ ಗೇಟೂ ಇಲ್ಲ, ರಾಷ್ಟ್ರಪತಿ ಭವನವೂ ಇಲ್ಲ!
ದೇಶದ್ದಲ್ಲೆಲ್ಲ ಉಗ್ರಗಾಮಿಗಳ ಹಾವಳಿ. ಇಲ್ಲಿ ಜನರೆಲ್ಲ ಉಗ್ರಗಾಮಿಗಳಂತೆ, ಕಣ್ಣು ಮೂಗಿನ ಹೊರತಾಗಿ ಬೇರೆಲ್ಲ ಭಾಗ ಫುಲ್ ಪ್ಯಾಕ್.
ಡೆಲ್ಲಿಯ ಅಂದವಿರುವುದು ಇಲ್ಲಿನ ದೊಡ್ಡ ದೊಡ್ಡ ಪಾರ್ಕ್ ಮತ್ತು ವೃತ್ತ(ಸರ್ಕಲ್, ಗೋಲ್ ಚಕ್ಕರ್)ದಿಂದ. ಖಂಡಿತವಾಗಿಯೂ ನಮ್ಮ ಮಂಗಳೂರಿನ ಕದ್ರಿ ಪಾರ್ಕ್, ಪಂಪ್‌ವೆಲ್ ವೃತ್ತದಂತಿಲ್ಲ. ಚಂದವಾಗಿ ಇಟ್ಟಿದ್ದಾರೆ. ಚಳಿಗಾಲದಲ್ಲಿ ಇಂತಹ ಪಾರ್ಕು, ವೃತ್ತ, ಹೂದೋಟಗಳಿಗೆ ಹೋದರೆ ಅಂದದ ಹೂವುಗಳ ಚೆಂದದ ನೋಟ ಬೋನಸ್. ನಮುನಮೂನೆ ಕಣ್ಸೆಳೆವ ಬಣ್ಣಗಳ ಡೇಲಿಯಾ, ಸೇವಂತಿಗೆ ಹೂವು ಹಾಕಲು ಬೇಕಾದಷ್ಟು ಬಟ್ಟೆ, ಇರಲು ಸರಿಯಾದ ಮನೆ ಉಳಿದ ಎಲ್ಲ ಸೌಕರ್ಯ ಇದ್ದವರಿಗೆ ಮಾತ್ರ ಚಳಿಗಾಲದ ಈ ಮಜ. ಹೇಳಿಕೇಳಿ ನಮ್ಮದು ಬಡ ರಾಷ್ಟ್ರ! ಬಡತನ ನಮ್ಮ ದೇಶದ ರಾಜಧಾನಿಯನ್ನು ಬಿಡಲು ಸಾದ್ಯವೇ? ಚಂದದ ರಸ್ತೆಗಳ ನಡುವೆ ಅಷ್ಟೇ ಚಂದದ ವೃತ್ತ, ಪಕ್ಕದಲ್ಲಿ ಹರುಕಲು ಬಟ್ಟೆ ಹಾಕಿ ನಡುಗುವ ದೇಹ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಇಂತಹವರು ತಮ್ಮ ದೇಹವನ್ನು ಅದೆಷ್ಟು ಬಟ್ಟೆಗಳಿಂದ ರಕ್ಷಿಸಬಹುದು? ಊಟ, ಬಟ್ಟೆ, ಮನೆ ಸರಿಯಾಗಿಲ್ಲದ ಅದೆಷ್ಟೋ ಜನರು ಇಂತಹ ಘನಘೋರ ಚಳಿಯಲ್ಲಿ ಇನ್ನೇನಾಗಲು ಸಾದ್ಯ? "ಚಳಿಯಿಂದ ಉತ್ತರಭಾರತದಲ್ಲಿ ಇಷ್ಟು ಜನರ ಸಾವು" ಅಂತ ಪೇಪರಿನಲ್ಲಿ ಓದುವಾಗ ಮೊದಲು ಆಶ್ಚರ್ಯ ಆಗುತ್ತಿತ್ತು. ಈಗ ಅದರ ಅರ್ಥವೇನೆಂದು ತಿಳಿಯಿತು.
ಅದೇನಾದರೂ ಇರಲಿ, ಒಮ್ಮೆ ಡೆಲ್ಲಿಗೆ ಬಂದು ಚಳಿಯ ಅನುಭವ ಪಡೆಯಿರಿ.

27 December, 2008

ಜೀವನಕ್ಕಿಲ್ಲ ಹಣ, ಅದಕ್ಕೇ ಬೀಳುತ್ತಿದೆ ಹೆಣ!


Radish 2.50 RS/K.G.
Cauliflower- 5 RS/K.G.
Cabbage- 5 RS/K.G.
Potato- 4 RS/K.G.
Palak- 5 RS/K.G.

Sarsoka sag- 5 RS/K.G


ನಾನು ಬ್ಲಾಗ್‌ನಲ್ಲಿ ತರಕಾರಿ ಮಾರಾಟ ಮಾಡುತ್ತಿಲ್ಲ. ಅಥವಾ ತರಕಾರಿ ಅಂಗಡಿ ಇಟ್ಟು ಇಷ್ಟೊಂದು ಚೀಪ್ ರೇಟ್‌ಗೆ ತರಕಾರಿ ಕೊಡ್ತಾನೂ ಇಲ್ಲ. ಈ ಬೆಲೆಗೆ ತರಕಾರಿ ಮಾರಾಟ ಮಾಡಲು ಶುರು ಮಾಡಿದರೆ, ಮಾರಾಟ ಮಾಡುವ ಮೊದಲೇ ನಾನು ಅಂಗಡಿ ಕದ ಹಾಕಬೇಕಾಗುತ್ತದೆ ಅಷ್ಟೇ!

ಡೆಲ್ಲಿಯಲ್ಲಿ ಈ ರೇಟಿಗೆ ತರಕಾರಿ ಸಿಗ್ತಿರೋದು ಮಾತ್ರ ಸುಳ್ಳಲ್ಲ. (ಹಾಗಾದ್ರೆ ನಾಳೆನೇ ನಾವೂ ಡೆಲ್ಲಿಗೇ ಶಿಫ್ಟ್ ಆಗ್ಬಿಡ್ಬೇಕು ಅಂತ ಡಿಸೈಡ್ ಮಾಡ್ಬಿಡ್ಬೇಡಿ. ಯಾಕಂದ್ರೆ ಇಲ್ಲಿ ಅಕ್ಕಿ ರೇಟ್ ಹಕ್ಕಿ ಹಾರೋವಷ್ಟು ಎತ್ತರದಲ್ಲಿದೆ ಕಣ್ರೀ!)

ನಾವು ಆರಾಮಾಗಿ ಮಾರ್ಕೆಟ್ ಸುತ್ತಾಡ್ತಾ 'ಓ ತರಕಾರಿಗೆ ಬಹಳ ಕಡಿಮೆ ರೇಟ್, ಕೊಂಡು ಹೋದ್ರೆ ಫ್ರಿಡ್ಜ್‌ನಲ್ಲಾದ್ರೂ ಇರುತ್ತೆ' ಅಂತ ವಿಚಾರ ಮಾಡಿ ತಗೊಂಡು ಬರ್‍ತೀವಿ. ಅಡಿಗೆ ಮಾಡೋದಂತೂ ಮಾಹಾನ್ ಕಷ್ಟದ ಕೆಲಸವೇನಲ್ಲ. ಅರ್ಧ ಗಂಟೆ ಕಾರ್ಯಕ್ರಮ. ಟಿವಿ ನೋಡ್ತಾ ಊಟಾನು ಮುಗಿಯುತ್ತೆ.

ಕಡಿಮೆ ಬೆಲೆ ತರಕಾರಿ ಕೊಳ್ಳೋವಾಗ ಖುಷಿಯಾಗುತ್ತೆ. ಹಾಗೆಯೇ ಕೊಂಚ ಬೇಸರವೂ!

ಗ್ರಾಹಕನಿಗೇ ಇಷ್ಟು ಕಡಿಮೆ ಬೆಲೆಗೆ ತರಕಾರಿ ಸಿಗುವಾಗ, ಬೆಳೆದ ಕೃಷಿಕನಿಗೆ ಎಷ್ಟು ಬೆಲೆ ಸಿಕ್ಕಿರಬಹುದು? ತಿಂಗಳುಗಟ್ಟಲೆ ಗೊಬ್ಬರ, ನೀರು ಪೂರೈಸಿ, ಕೀಟ ತಿನ್ನದಂತೆ ಔಷಧಿ ಸಿಂಪಡಿಸಿದ ಖರ್ಚು ಬಿಡಿ, ಕೊನೆಪಕ್ಷ ಮೂಲಂಗಿಯನ್ನು ಅಗೆದು ತೆಗೆದು, ಸ್ವಚ್ಛಮಾಡಿ ಅಂಗಡಿಗೆ ತಲುಪಿಸಿದ ಶ್ರಮಕ್ಕಾದರೂ ಈ ಬೆಲೆ ಸಾಟಿಯೇ? (ಎಷ್ಟೋ ಗ್ರಾಹಕರಿಗೆ ಮೂಲಂಗಿ ಎಲ್ಲಿ ಬೆಳೆಯುತ್ತೆ ಅನ್ನುವುದೇ ಗೊತ್ತಿರಲಾರದು. ತಿನ್ನುವುದೊಂದು ಬಿಟ್ಟು!)

ಅದೇ ಒಬ್ಬ ಕೃಷಿಕ ಪೇಟೆಗೆ ಬಂದು ತನ್ನ ನಿತ್ಯದ ಖರ್ಚಿಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳಬೇಕಾದರೆ ಅಂಗಡಿಯವನು ಹೇಳಿದ ಬೆಲೆ ತೆರಬೇಕು. `ನೋ ಬಾರ್ಗೇನ್, ಫಿಕ್ಸ್‌ಡ್ ರೇಟ್ಸ್' ಅಂತ ಫಲಕವನ್ನ ಆ ಚಾಣಾಕ್ಷ ಮಾಲಿಕ ಮೊದಲೇ ತೂಗಿಟ್ಟಿರು‍ತ್ತಾನೆ. ನಾವು ಚರ್ಚೆಗೆ ತೊಡಗಿದೆವೊ ಬೋರ್ಡ್ ತೋರಿಸುತ್ತಾನೆ.

ಕೀಟನಾಶಕ, ರಸಗೊಬ್ಬರದ ಬೆಲೆ ಪ್ರತಿ ವರ್ಷವೂ ಏರುತ್ತಿದೆ. ೨ ರೂ. ಒಂದು ಕೆ.ಜಿ. ಮೂಲಂಗಿ ಸಿಕ್ಕಿತೆಂದು ಖುಶಿಯಿಂದ ೪ ಕೆ.ಜಿ. ಹೊತ್ತು ತರುವ ವ್ಯಾಪಾರಿಯೂ ರೈತನಿಗೆ ರಸಗೊಬ್ಬರ ಮಾರುವಾಗ ೧ ರೂ. ರಿಯಾಯಿತಿ ನೀಡಲಾರ!

ಜಗತ್ತಿಗೆಲ್ಲ ಉಣಬಡಿಸುವ ರೈತನ ಮನೆಯಲ್ಲಿ ಒಪ್ಪೊತ್ತಿನ ಅನ್ನಕ್ಕೂ ತತ್ವಾರ!

ಇಂತಹ ರೈತ ಮಲ್ಟಿಪ್ಲೆಕ್ಸ್‌ನಲ್ಲಿ ಸಿನೆಮಾ ನೋಡೋದು, ಕಾರು ಕೊಂಡು ಸುತ್ತಾಡೋದು, ಮಸ್ಸೂರಿಗೊ, ಮುನ್ನಾರಿಗೋ ಹೆಂಡತಿ, ಮಕ್ಕಳ ಜೊತೆ ಹೋಗಬೇಕೆಂದು ಎಣಿಸುವುದು ಕನಸಲ್ಲೂ ಸಾದ್ಯವಿಲ್ಲ. ಅಥವಾ ಭಾರತದಲ್ಲಿ ಹುಟ್ಟಿದ ತಪ್ಪಿಗೆ ಆತ ಹಾಗೆ ಬಯಸುವುದೂ ತಪ್ಪೇನೋ!

ರೈತರ ಸಮಸ್ಯೆ ಒಂದಾ, ಎರಡಾ? ಕರೆಂಟಿಲ್ಲ, ನೀರಿಲ್ಲ, ಗೊಬ್ಬರಕ್ಕೆ ಮಿತಿಮೀರಿದ ಕ್ರಯ, ಸಾಲದ್ದಕ್ಕೆ ಕೃಷಿ ಮಾಡಿಸಲು, ಬೆಳೆ ಸರಿಯಾದ ಸಮಯಕ್ಕೆ ಕೊಯ್ಯಲು ಕೆಲಸಗಾರರಿಲ್ಲ. ಸಿಕ್ಕಿದರೂ ಅವರ ಸಂಬಳ ಕೊಡುವ ತಾಕತ್ತಿಲ್ಲ? ಬೆಳೆಗೆ ಬೆಲೆಯಿಲ್ಲ. ಪರಿಣಾಮ ಸಾಲದ ಹೊರೆ! ಜೀವನಕ್ಕೇ ತೊಂದರೆ, ಇನ್ನು ಆತನ ಆಸೆ, ಬಯಕೆಗಳಿಗೆ ಎಲ್ಲಿದೆ ಹಣ?

ಪರಿಣಾಮ? ಬೀಳುತ್ತಿದೆ ಆತನ ಹೆಣ!

ಅದಕ್ಕಾಗಿಯೇ ಇವತ್ತು ನಳನಳಿಸುವ ಹಸಿರು ಬಯಲು, ಗದ್ದೆ, ತೋಟಗಳಲ್ಲಿ `ಮಾರಾಟಕ್ಕಿದೆ' ಎಂಬ ಬೋರ್ಡ ಕಾಣೋದು. ಇವತ್ತು ರಿಯಲ್ ಎಸ್ಟೇಟ್ ದಂಧೆಯಿಂದಾಗಿ ಭೂಮಿಗೆ ಚಿನ್ನದಂತಾ ಬೆಲೆ. ವರ್ಷಾನುಗಟ್ಟಲೆ ಕೃಷಿಮಾಡಿ ಕಷ್ಟಪಡುವ ಬದಲು ಭೂಮಿ ಮಾರಾಟ ಮಾಡಿ ಪೇಟೆಗೆ ಬಂದು ತಾವೂ ೨.೫೦ ರೂಪಾಯಿಗೆ ಕೆ.ಜಿ. ಮೂಲಂಗಿ ತಂದು ಅಡಿಗೆ ಮಾಡ್ತಾ, ಟಿವಿ ನೋಡ್ತಾ ಇರೋದು, ತಿನ್ನೋದು ಸುಖ ಅಂತ ಕಾಣದೆ ಇರುತ್ತದೆಯೇ?

ಹಾಗನ್ನಿಸಿಯೇ ರೈತ ಭೂಮಿ ಮಾರಾಟ ಮಾಡುತ್ತಿದ್ದಾನೆ. ವಿಶೇಷ ವಿತ್ತ ವಲಯಗಳನ್ನು ವಿಶೇಷ ಆಸಕ್ತಿಯಿಂದ ಸ್ವಾಗತಿಸುತ್ತಿದ್ದಾನೆ. ಭೂಮಿ ಮಾರಾಟ ಮಾಡಿದ ಹಣದಲ್ಲಿ ಒಂದಷ್ಟು ದಿನ ಅಥವಾ ವರ್ಷ ಹಾಯಾಗಿರುತ್ತಾನೆ. ಅಥವಾ ಹಾಯಾಗಿದ್ದೇನೆ ಅಂದುಕೊಳ್ಳುತ್ತಾನೆ. ಬ್ಯಾಂಕ್ ಖಾತೆಯಲ್ಲಿನ ದುಡ್ಡು ಕರಗುತ್ತ ಬರುತ್ತದೆ. ಅದು ಖಾಲಿಯಾದಾಗ ಆತನ ಜೀವನವೂ ಖಾಲಿ!

ಹಾಗಾದರೆ ರೈತನ ಈ ಸ್ಥಿತಿಗೆ ಯಾರು ಹೊಣೆ? ದಲ್ಲಾಳಿಗಳಾ? ಗ್ರಾಹಕರಾ? ಅಥವಾ ಮಾಮೂಲಿನಂತೆ ಸರಕಾರವಾ? ಅಥವಾ ನಾವೆಲ್ಲರೂ!

24 December, 2008

ಬ್ಲಾಗ್ ಲೋಕದಲ್ಲಿ ನಿಮ್ಮೊಂದಿಗೆ ನನ್ನದೂ ಒಂದು ಸಾಲು


ನಮಸ್ತೇ,


ನಾನು ಯಾರೆಂದು ನನ್ನ profile ನೋಡಿ ತಿಳಿದುಕೊಳ್ಳ ಬಹುದು. ಅಂತ ಕುತೂಹಲವಿದ್ದರೆ.ಅದರ ಬಗ್ಗೆ ಏನೂ ಹೇಳುವುದಿಲ್ಲ.


ಬ್ಲಾಗ್ ದಿಗ್ಗಜರೆಲ್ಲ ಬ್ಲಾಗ್ ಬರವಣಿಗೆಯನ್ನು ನಿಲ್ಲಿಸಿದರು, ಕೆಲವರು ಅಪರೋಪಕೊಮ್ಮೆ ಬರೆಯುತ್ತಿದ್ದಾರೆ. ಅವರ ಬಗ್ಗೆ ನನ್ನ ತಕರಾರೇನೂ ಇಲ್ಲ.ಈ ಹೊತ್ತಲ್ಲಿ ನಾನು ನನ್ನ ಬರವಣಿಗೆಯೆ ಮೊದಲ ಹೆಜ್ಜೆಯನ್ನು ಹಾಕುತ್ತಿದ್ದೇನೆ. ಕಾರಣ ಇಷ್ಟೇ.


ನನ್ನ ಪ್ರೀತಿಯ ಊರನ್ನು ಬಿಟ್ಡು ದೂರದ ಡೆಲ್ಲಿಗೆ ಬಂದು ಅದಾಗಲೇ ಹಲವು ತಿಂಗಳುಗಳೇ ಕಳೆದುವು. ಇಲ್ಲಿ ಇದ್ದಷ್ಟು ದಿನ ಇದೇ ನನ್ನೂರು.ಇದನ್ನೇ ಪ್ರೀತಿಸಬೇಕಷ್ಟೆ. ನನ್ನ ಅಪ್ಪ, ಅಮ್ಮ,ಗೆಳತಿ,ಸಂಬಂಧಿಕರು...ಎಲ್ಲ ಊರಲ್ಲಿ. ಅವರನ್ನಂತೂ ಇಲ್ಲಿಗೆ ಕರೆತರಲು ಸಾಧ್ಯವಿಲ್ಲ. ಅಪರೂಪಕೊಮ್ಮೆ ಡೆಲ್ಲಿ ಪ್ರವಾಸಕ್ಕೆ ಬಂದರೆ ಭೇಟಿಯಾಗಬಹುದು. ನಂಗೂ ಪದೇ ಪದೇ ಹೋಗೋದು ಅಸಾಧ್ಯ.


ಅತಿಯಾಗಿ ಮಾತಾಡಿಸಿಕೊಂಡು ಹೋಗೋ ಸ್ವಭಾವ ನನ್ನದಲ್ಲ. ಆದ್ದರಿಂದ ಸರಿಯಾಗಿ ಹಿಂದಿ ಭಾಷೆ ಬಾರದ ನಂಗೆ ಇಲ್ಲಿ ಹೇಳಿಕೊಳ್ಳಲು,ಮಾತಾಡಲು ಗೆಳಯ/ತಿ ಯರಿಲ್ಲ. ಒಬ್ಬ ಮನುಷ್ಯ ಎಷ್ಟು ದಿನ ಪುಸ್ತಕ ಓದುತ್ತಾ, ಟಿ.ವಿ. ನೋಡುತ್ತಾ, ಎಲ್ಲೂ ಹೋಗದೆ ಮನೆಯಲ್ಲಿ ಕಾಲ ಕಳೆಯಬಹುದು? ನಾನು ಕಲಿತ ವಿಶಯಕ್ಕೆ ಇಲ್ಲಿ ಕೆಲಸ ಸಿಗುವುದು ಅಷ್ಟು ಸುಲಭವಲ್ಲ...! ಅಲ್ಲದೆ ಸಂಸಾರ ಅಂದ ಮೇಲೆ ಹೆಣ್ಣಿಗೆ ಅನಿವಾರ್ಯವಾಗಿ ಒಂದಷ್ಟು restrictions! ಅದು ನಮಗೆ ನಾವೇ ಹಾಕಿಕೊಳ್ಳುವುದೋ? ಅಥವಾ ಈ ಸಮಾಜದ ಕೊಡುಗೆಯೋ? ಗೊತ್ತಿಲ್ಲ. ಏನು ನನ್ನನ್ನು ಸ್ತ್ರೀವಾದಿ ಅಂತ ತಿಳ್ಕೊಂಡ್ರಾ? ಖಂಡಿತ ಇಲ್ಲ. ನನಗೆ ಯಾವ 'ಇಸಂ'ಗಳಲ್ಲಿ ಗುರಿತಿಸಿಕೊಳ್ಳುವ ಮನಸ್ಸಿಲ್ಲ.


ಸಾಕಾಯಿತು ನಂಗೆ.ಅದಕ್ಕೇ ಈ ನಿರ್ಜೀವ ವಸ್ತುವಿನ ಮುಖಾಂತರ ನಿಮ್ಮಂತ ಒಂದಷ್ಟು ಗೆಳಯ/ತಿ ಯರು ಪರಿಚಯವಾಗಬಹುದು ಎಂಬ ಹಂಬಲ, ಕುತೂಹಲದೊಂದಿಗೆ ಬ್ಲಾಗ್ ಆರಂಭಿಸುತ್ತಿದ್ದೇನೆ. ಎಷ್ಟು ದಿನ? ಎಲ್ಲಿಯವರೆಗೆ? ಗ್ಯಾರೆಂಟಿ ಕೊಡಲಾರೆ. ನನ್ನ ಮನಸ್ಸಿಗೆ ತೋಚಿದ್ದನ್ನು ನಿಮ್ಮ ಮುಂದಿಡುವ ಪ್ರಯತ್ನ...ಅಷ್ಟೇ.