17 March, 2009

ವಿಚಾರ ಸಂಕಿರಣ ಎಂಬ ಹರಕೆ.....

ಕಾಲೇಜು ದಿನಗಳ ನಂತರ ಅಪ್ಪಟ ಸಾಹಿತ್ಯಿಕವಾದ, ಥಿಯರಿಟಿಕಲ್ ಆದ ಭಾಷಣ ಕೇಳಿರಲಿಲ್ಲ. ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಕಿಟೆಲರ ಬಗ್ಗೆ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಅನಿವಾರ್ಯ ಕಾರಣದಿಂದ ಹೊಗಲೇ ಬೇಕಾಯಿತು. ಶೈಕ್ಷಣಿಕ ಶಿಸ್ತಿನಿಂದ ದೂರವಾಗಿ ಅದಾಗಲೇ ೩ ವರ್ಷವಾಗುತ್ತಾ ಬಂತು. ಆದ್ದರಿಂದ ಇಂದು ಅಂಥ (ಬೋರಿಂಗ್)ಭಾಷಣ ಕೇಳುವಂಥ ತಾಳ್ಮೆಯಾಗಲೀ ಆಸಕ್ತಿಯಾಗಲೀ ಕಡಿಮೆಯಾಗುತ್ತಿದೆ.
ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಎಂದು ಹೆಸರಿದ್ದರೂ ಅಲ್ಲಿ ಯಾವ ಬಿಳಿ ಅಥವಾ ಕರಿ ತಲೆಗಳು ಕಾಣಿಸಲಿಲ್ಲ. (ವಿದೇಶಗಳಿಗೆ ಆಗಾಗ ಸರಕಾರಿ ಯಾ ಸಂಸ್ಥೆಗಳ ಖರ್ಚಿನಲ್ಲಿ ಭೇಟಿ ನೀಡುವ ನಮ್ಮ ವಿಧ್ವಾಂಸರಿಗೇ ಹಾಗೆ ಸಂಭೋಧಿಸಿರಬಹುದೇ?) ಸಂಯೋಜಕರು ಮತ್ತು ಭಾಷಣ ಕೊರೆಯುವವರ ಹೊರತಾಗಿ ನನ್ನಂತೆ ಅನಿವಾರ್ಯಕ್ಕೆ ಹೋದವರನ್ನು ಬಿಟ್ಟು ಆಸಕ್ತಿ ಇರುವ ಯಾವ ತಲೆಗಳೂ ಅಲ್ಲಿರಲಿಲ್ಲ.
ಕನ್ನಡದಲ್ಲಿ ಮೊದಲಿಗೆ ನಿಘಂಟು ರಚಿಸಿದವರು ಕಿಟೆಲ್ ಎಂದು ಸಣ್ಣ ತರಗತಿಯಿಂದಲೂ ಕಲಿತ, ಕೇಳಿದ ವಾಕ್ಯದ ಹೊರತಾಗಿ ಅಲ್ಲಿ ಮಂಡಿತವಾದ ಭಾಷಣದಿಂದೇನೂ ಎಫ್ಫೆಕ್ಟ್ ಆಗಲಿಲ್ಲ. ಕಾರಣ ಇಷ್ಟೇ- ಅಲ್ಲಿ ಬಂದವರೆಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ದೊಡ್ಡ ಮಂಡೆಯವರು! ನಾಲ್ಕು ಪುಸ್ತಕಗಳನ್ನಿಟ್ಟು ತಯಾರಿಸಿದ ಪ್ರಬಂಧಗಳು. ಒಂದಿಬ್ಬರಂತೂ ಪೇಪರ್ ಪ್ರೆಸಂಟೇಶನ್ ಅಂದರೆ ಪಕ್ಕಾ ಪೇಪರ್ ಮುಂದಿಟ್ಟು ಸ್ಪೀಡಾಗಿ ಓದುತ್ತಿದ್ದರು. (ಸಣ್ಣ ತರಗತಿಯಲ್ಲಿ ಮೇಷ್ಟ್ರು ಒಬ್ಬೊಬ್ಬರನ್ನೇ ನಿಲ್ಲಿಸಿ ಪಾಠ ಓದಿಸುತ್ತಿದ್ದುದು ನೆನಪಾಯಿತು.) ಅನುಸ್ವಾರ, ವಿಸರ್ಗ, ಬಿಂದು ಹೀಗೆ ಹಲವು ಶಬ್ದಗಳು ಕೂತು ತೂಕಡಿಸುತ್ತಿದ್ದ ನನ್ನ ತಲೆಗೆ ಬಡಿಯುತ್ತಲೇ ಇತ್ತು. ವರ್ಷಗಟ್ಟಲೆ ಪಾಟ ಹೇಳಿಕೊಡುತ್ತಿದ್ದ ಮೇಷ್ಟ್ರುಗಳಿಗೆ ತಾವು ಓದಿ ಅಧ್ಯಯನ ಮಾಡಿದ ವಿಷಯದಲ್ಲಿ ನಾಲ್ಕು ಪಾಯಿಂಟ್ ಇಟ್ಟು ನೆರೆದಿದ್ದ ಹತ್ತು ಜನರ ಮುಂದೆ ಹೇಳಲು ಸಾಧ್ಯವಿಲ್ಲವೆ? ಬೇಸರವಾಯಿತು.
ಯಾಕೆ ಶಿಕ್ಷಣ ಸಂಸ್ಥೆಯವರು ಅಷ್ಟೆಲ್ಲಾ ಖರ್ಚುಮಾಡಿ ಅಂತಹ ಇಂಟರ್ ನ್ಯಾಶನಲ್ ಸೆಮಿನಾರುಗಳನ್ನು ಇಡುತ್ತರೋ? ಅಷ್ಟು ಹೊತ್ತು ಕೂತು ಊಟ ಮಾಡಿ ಬಂದ ನನಗೆ ಅರ್ಥವಾಗಲಿಲ್ಲ.
ಕನ್ನಡ ಸಾಹಿತ್ಯಕ್ಕೆ ಅಪಾರವದ ಕೊಡುಗೆ ನೀಡಿದ ಕಿಟೆಲರ ಬಗ್ಗೆ ಗೌರವ ಇದೆ.(ಆತನ ಕೊಡುಗೆಯ ಹಿಂದೆ ಸಾಕಷ್ಟು ಒತ್ತಡದ, ಆದೇಶದ ಅನಿವಾರ್ಯ ಕಾರಣಗಳಿದ್ದವು,) ಆದರೆ ಇಂದು ಇಂತಹ ಸೆಮಿನಾರ್ ಗಳನ್ನು ಮಾಡುವುದು ಎಷ್ಟು ಪ್ರಸ್ತುತ? ಕಿಟೆಲರ ಸಾಧನೆಯನ್ನು ನಾಲ್ಕು ಜನರಿಗೆ ತಲಪಿಸುವ ಕೆಲಸ, ಆತನ ಹಾದಿಯಲ್ಲಿ ಸಾಗುವ ಪ್ರಯತ್ನ ಹೀಗೆ ಹಲವಾರು ಉತ್ತರಗಳು ಬರಬಹುದು. ಆದರೆ ಅಂತರ್ಜಾಲ ಇರುವ ಇಂದಿನ ಸಂದರ್ಭದಲ್ಲಿ ಆ ಕೆಲಸಗಳೆಲ್ಲ ಕಾರ್ಯರೂಪಕ್ಕೆ ಖಂಡಿತಾ ಬರುವುದಿಲ್ಲ. ಅಲ್ಲದ ಅಲ್ಲಿಗೆ ಬಂದವರೆಲ್ಲ ಕೂದಲು ಬೆಳ್ಳಗಾದವರು, ಭಾಷಣ ಮಾಡಿದವರೂ ಅವರ ಹೊತ್ತಿಗೆ ಬಂದು ತಮ್ಮ ಕೆಲಸವಾದ ನಂತರ ಕಳಚಿಕೊಂಡವರೇ.
ಇಂತಹ ಕಾರ್ಯಕ್ರಮ ಮಾಡಲು ಶೈಕ್ಷಣಿಕ ಸಂಸ್ಥೆಗಳಿಗೆ ಒಂದಷ್ಟು ದುಡ್ಡು ಬರುತ್ತದೆ. ಬ್ಯಾಂಕ್ ನವರೂ ದಾನ ಮಾಡುತ್ತಾರೆ. ಅದರಲ್ಲಿ ಸ್ವಲ್ಪ ಹಣ ಹೀಗೆ ಖರ್ಚು ಮಾಡಿದರೆ, ಸ್ವಲ್ಪ ಈಗಾಗಲೇ ತುಂಬಿದ ಕಿಸೆಗಳಿಗೆ ಸೇರುತ್ತವೆ. ಮರುದಿನ ಪೇಪರಿನಲ್ಲಿ ಭಾಷಣ ಮಾಡಿದ, ಸಭಾ ಕಾರ್ಯಕ್ರಮದ ಫೋಟೋ, ಮ್ಯಾಟರ್ ನೊಂದಿಗೆ ಮುಕ್ತಾಯವಾಗುತ್ತದೆ.
ನಮ್ಮ ಸಮಾಜದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಓದಲು ದುಡ್ಡಿಗಾಗಿ ಕಷ್ಟಪಡುತ್ತರೋ, ಲೆಕ್ಕ ಸಿಕ್ಕದು. ಅಂತಹ ವಿದಾರ್ಥಿಗಳಿಗಾದರು ಈ ದುಡ್ಡನ್ನು(ಕಿಟೆಲರ ಹೆಸರಿನಲ್ಲಿ) ನೀಡಿದರೆ ಅವರು ಮನಪೂರ್ವಕವಾಗಿ ನಮಿಸಬಹುದು. ಕುತೂಹಲಕ್ಕಾದರೂ ಕಿಟೆಲರ ಸಾಧನೆಯನ್ನು ಗುರುತಿಸುತ್ತಿದ್ದರೋ... ಆದರೇನು ಮಾಡುವುದು ಇದನ್ನೆಲ್ಲ ಹೇಳುವವರಾರು? ಹೇಳಿದರೆ ಮಾಡುವವರಾರು?
ಕೊನೆಯಲ್ಲಿ ಮುಖ್ಯಾಂಶ:-ಅಷ್ಟು ವಯಸ್ಸಾದರೂ, ತನ್ನ ಸಣ್ಣ ದೇಹದ ಪುಟು ಪುಟು ಹೆಜ್ಜೆಯಿಡುತ್ತಾ ಸ್ಟೇಜಿಗೆ ಬಂದು ಮೈಕ್ ಮುಂದೆ ನಿಂತು ಭಾಷಣ ಮಾಡಿದ ಶ್ರೀನಿವಾಸ ಹಾವನೂರರ ಅಗಾಧ ಪಾಂಡಿತ್ಯಕ್ಕೂ ಚುರುಕು ನಡಿಗೆಗೂ ಬೆರಗಾದೆ!!!

13 March, 2009

ಅಜ್ಜನ ಸಾವು!

ಬರವಣಿಗೆಯಲ್ಲಿ ಪೀಠಿಕೆ, ಉಪಸಂಹಾರ ಎಂಬೆಲ್ಲ ಶಿಸ್ತು ಅಳವಡಿಕೆ ಸದ್ಯದ ಈ ಬರಹದಲ್ಲಿ ಅನಗತ್ಯ. ನೇರವಾಗಿ ವಿಷಯಕ್ಕೇ ಬರುತ್ತೇನೆ.
ಜೋಗಿಯವರ ನದಿಯ ನೆನಪಿನ ಹಂಗು, ರಾಯಭಾಗದ ರಹಸ್ಯ ರಾತ್ರಿ, ಕಾಡು ಹಾದಿಯ ಕತೆಗಳು ಮೊದಲಾದ ಕೃತಿಗಳನ್ನು ಓದುತ್ತಿರುವಾಗ ಇದೆಲ್ಲ ಸಾದ್ಯವಾ? ವಾಸ್ತವವಾ? ಹೀಗೂ ಉಂಟೇ? ಎಂಬೆಲ್ಲ ಪ್ರಶ್ನೆಗಳು ಕಾದುತ್ತಿತ್ತು.
ಕೆಲವು ಸ್ತ್ರೀ, ಪುರುಷ ಪಾತ್ರಗಳೆಲ್ಲ ಇದ್ದಕ್ಕಿದ್ದಂತೆ ನಾಪತ್ತೆಯಾಗುವುದೋ, ನಿಗೂಢವಾಗಿ ಸಾಯುವುದೋ, ಸತ್ತು ಭೂತವೋ, ದೆವ್ವವೋ ಆಗಿ ಕಾಡುತ್ತದೆ ಎಂದು ಜನ ನಂಬುವುದು_ ಇದೆಲ್ಲ ನನಗೆ ಹೊಸ ಜಗತ್ತಿನಂತೆ, ವಿಚಿತ್ರವಾಗಿ ಕಾಣಿಸುತ್ತಿತ್ತು.
ಹಾಗೇ ಜೋಗಿಯವರು ತಾವು ಕಂಡ ಹಳ್ಳಿಯ ಬದುಕಿನ ಸೂಕ್ಷ್ಮತೆಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವ ಅದ್ಭುತ ಶೈಲಿಗೂ ಬೆರಗಾಗುತ್ತಿದ್ದೆ.
ನಮ್ಮೂರಲ್ಲೂ ಇಂಥಾ ಕತೆಗಳಿಲ್ಲವೇ? ಇದ್ದರೆ ಯಾಕೆ ನನ್ನ ಅನುಭವಕ್ಕೆ ಬರಲಿಲ್ಲ? ನನ್ಯಾಕೆ ಗಮನಿಸಲಿಲ್ಲ? ಎಂದೆಲ್ಲ ಕಥಾಸಂಕಲನ ಓದಿದ ಮೇಲೆ ನನ್ನನ್ನು ಕಾಡಲು ಶುರುವಾಯಿತು. ಶಾಲೆ, ಕಾಲೇಜು, ಪ್ರೀತಿ, ಮದುವೆ, ಸಂಸಾರ ಎಂದು ನಾನು ನನ್ನ ವ್ಯೂಹದೊಳಗೇ ಸಾಗುತ್ತಿದ್ದೆ. ನನ್ನ ಗಮನಕ್ಕೆ ಬಂದರೂ ಅದು ಮುಖ್ಯವಾಗಲಿಲ್ಲ.
ಈಗ ಊರಿಗೆ ಬಂದು ೧ ವಾರದೊಳಗೆ ೨ ಆತ್ಮಹತ್ಯಾ ಪ್ರಕರಣ ಕೇಳಿದೆ. ಅದರಲ್ಲಿ ಒಂದಂತೂ ಬಹಳ ವಿಚಿತ್ರವಾಗಿದೆ, ನಿಮಗೂ ಕುತೂಹಲವೆನಿಸಬಹುದು.
ಸುಮಾರು ಎಪ್ಪತ್ತು ವರ್ಷ ಮೀರಿದೆ ಅಂದರೆ ಅಜ್ಜನಲ್ಲದೆ ಹುಡುಗನಾಗಲು ಸಾಧ್ಯವೇ? ಮಾಟ, ಮಂತ್ರ ಮಾಡುತ್ತಾ, ಇದ್ದ ತೋಟ ನೋಡಿಕೊಂಡು ಮಗ ಸೊಸೆ ಮೊಮ್ಮಕ್ಕಳ ಜೊತೆ (ಹಾಯಾಗಿ ಎಂದು ಹೇಳಲಾರೆ) ಇದ್ದವರು. ಮಾಟ ಮಾಡಿಸುವುದರಿಂದಾಗಿ ನಮ್ಮ ಊರಲ್ಲಿ ಆ ವ್ಯಕ್ತಿ ತಕ್ಕ ಮಟ್ಟಿಗೆ ಫೇಮಸ್!
ಸಾಯೋ ಗಂಟೆ ಗಳಿಗೆ ಸರಿಯಾಗಿದ್ದರೆ ಡೈರೆಕ್ಟ್ ಸ್ವರ್ಗ ಸೇರಬಹುದೆಂದು ಆ ದಿನ ಪಂಚಾಂಗ ನೋಡುತ್ತಿದ್ದರಂತೆ. (ದಿನ ಗಂಟೆ ಮುಹೂರ್ತ ನೋಡಿ ಸಿಸೇರಿಯನ್ ಮಾಡಿಸುವಂತೆ!) ಹುಟ್ಟಲು ಮಾತ್ರವಲ್ಲ ಸಾಯಲೂ ದಿನ ನೋಡುತ್ತಾರೆಂದಾಯಿತು. ಸಾಯೋ ಕೆಲ ದಿನ ಮೊದಲು ಬಿದಿರು ಕಡಿಸಿ, ಮಣ್ಣಿನ ಹೊಸ ಅಳಗೆ(ಪಾತ್ರ), ಹೊಸ ಪಂಚೆ ಎಲ್ಲ ತಂದಿಟ್ಟಿದ್ದರಂತೆ.(ಇನ್ನು ಮಗನಿಗೇನೂ ಕೆಲಸವಿಲ್ಲ!) ಹಾಗೆ ಯಾರಲ್ಲೋ ಚಟ್ಟಕ್ಕಾಗಿ ಮರ ಕಡ್ಪೆರ ಜನ ತಿಕ್ವೆರಾ(ಮರ ಕಡುಹಿಸಲು ಜನ ಸಿಗಬಹುದೇ) ಅಂತಲೂ ವಿಚಾರಿಸುತ್ತಿದ್ದರಂತೆ.
ಆ ರಾಮ ಸತ್ತದ್ದೂ ನೀರಿನಿಂದ ಈ ರಾಮ ಸಾಯುವುದೂ ನೀರಿನಿಂದಲೇ ಎಂದು ತನ್ನನ್ನು ದೈವತ್ವಕ್ಕೇರಿಸಿದ ಮಾತು ಇತ್ತಂತೆ. ಆತ್ಮಹತ್ಯೆ ಮಾಡುವ ಮೊದಲು ಎಲ್ಲ ಪೂರ್ವ ತಯಾರಿ ಮಾಡಿದ್ದ ಅಜ್ಜ.
ಈ ಎಲ್ಲ ಮುನ್ಸೂಚನೆ ಕೊಟ್ಟರೂ ಮನೆಯವರಿಗೆ ಆತ್ಮಹತ್ಯೆಯ ವಾಸನೆ ಬಡಿಯಲಿಲ್ಲವೋ? ಬಡಿದರೂ ಮೂಗು, ಬಾಯಿ ಮುಚ್ಚಿ ಕುಳಿತಿದ್ದರೋ? ಗೊತ್ತಿಲ್ಲ.
ಕೆರೆಯ ಬುಡದಲ್ಲಿ ಚಪ್ಪಲಿ, ಕನ್ನಡಕ ಇಟ್ಟು ಅಜ್ಜ ಡೈ(ವ್) ಹೊಡೆದೇ ಬಿಟ್ಟರು.
ಈಗ ನಮ್ಮೂರಲ್ಲಿ ಕೆರೆಗೆ ಹೋದ ಅಜ್ಜ ಕಾಲು ಜಾರಿ ಬಿದ್ದರು ಎಂದು ಆಡಿಕೊಳ್ಳುತ್ತದ್ದಾರೆ.
ಅಂತೆಯೇ ಮಾಟ ಮಂತ್ರ ಮಾಡುತ್ತಿದ್ದಾಗ ಅವರ ಬಳಿಗೆ ಬಂದ ಹೆಂಗಸರನ್ನು ಅಜ್ಜ ತಂತ್ರ ಮಾಡಿ......(ಯೋಚಿಸಿ) ಎಂಬ ಸಣ್ಣ ಧ್ವನಿಯೂ ಕೇಳಿ ಬರುತ್ತಿದೆ.
ಅಷ್ಟಕ್ಕೂ ಅಜ್ಜ ಸಾಯುವುದಕ್ಕಿದ್ದ ಕಾರಣ?
ಜೋಗಿಯವರ ಕೆಲವು ಕತೆಗಳಂತೆ ನಿಗೂಢವೂ ಅಸ್ಪಷ್ಟವೂ ಆಗಿದೆ.
ಅಜ್ಜ ನೋಡಿದ ಪಂಚಾಗ ಸರಿಯಿದ್ದು ಗಂಟೆ ಘಳಿಗೆ ಎಲ್ಲ ಸ್ವರ್ಗಮುಖಿಯಾಗಿದ್ದರೆ ಸುಖಿಯಾಗಿರಬಹುದು, ದೆವ್ವವಾಗಿ ಬಂದು ಕಾಡಲಾರ ಎಂಬ ನಂಬಿಕೆ!

04 March, 2009

ಕೊಳಚೆ ನಾಯಿ ಕೋಟಿಪತಿ_ ಮೂಡಿಸಿದ ಪ್ರಶ್ನೆಗಳು!

ಆಸ್ಕರ್ ಪ್ರಶಸ್ತಿ ಬಂದಾಗಿನಿಂದ ಕೊಳಚೆ ನಾಯಿ ಕೋಟಿಪತಿಗೆ ಬಂದಷ್ಟು ಕಾಮೆಂಟ್ ಗಳು ಇನ್ಯಾವುದೇ ಸಿನೆಮಾಕ್ಕೂ ಬಂದಿರಲಿಕ್ಕಿಲ್ಲ. ಅಷ್ಟು ಸಾಲದೆಂಬಂತೆ ನನ್ನದೂ ಎರಡು ತಕರಾರಿದೆ.
ಸ್ಲಂಡಾಗ್-ಎಂಟು ಆಸ್ಕರ್ ಬಾಚಿಕೊಳ್ಳುವಂತಾ ಸಿನಿಮಾವೇನೂ ಅಲ್ಲ. ಅದಕ್ಕಿಂತ ಈ ಮೊದಲು ಆಸ್ಕರ್ ಬುಡದವರೆಗೆ ಹೋಗಿ ಬಂದ ನಮ್ಮ ಆಮೀರ್ ಖಾನ್ ನಟನೆಯ ಲಗಾನ್ ‘ ತಾರೇ ಜಮೀನ್ ಪರ್ ನೂರು ಪಾಲು ಚೆನ್ನಾಗಿದ್ದುವು. ಇದರ ನಿರ್ದೇಶಕರು, ತಯಾರಕರೆಲ್ಲ ಭಾರತೀಯರು ಅನ್ನುವ ಕಾರಣಕ್ಕೋ, ಆಸ್ಕರ್ ವಿತರಕರಿಗೆ ಸಿನಿಮಾ ಅರ್ಥವಾಗಲಿಲ್ಲವೋ ಅಥವಾ ಆಮೀರ್ ಖಾನರ ದುರದೃಷ್ಟವೋ ಪ್ರಶಸ್ತಿ ದೊರಕಲಿಲ್ಲ.
ಎ.ಆರ್ ರೆಹಮಾನರು ಅದ್ಭುತ ಸಂಗೀತ ನಿರ್ದೇಶಕರು. ಅದರಲ್ಲಿ ಎರಡು ಮಾತಿಲ್ಲ. ಆಸ್ಕರ್ ಪ್ರಶಸ್ತಿ ಅವರಿಗೆ ಲಭಿಸಿದ್ದಕ್ಕೆ ನೂರು ಪ್ರಣಾಮಗಳು. ಆದರೆ ಜೈಹೋ ಅಂಥಾ ಅದ್ಭುತ ಸಂಗೀತದ ಹಾಡೇನೂ ಅಲ್ಲ. ಅದಕ್ಕಿಂತ ಎಷ್ಟೋ ಉತ್ತಮ ಹಾಡುಗಳನ್ನು ರೆಹಮಾನ್ ಸಾಹೇಬರು ಈ ಮೊದಲು ನೀಡಿದ್ದಾರೆ. ಅಲ್ಲದೆ ಭಾರತೀಯ ಸಿಮಿಮಾ ರಂಗದಲ್ಲೂ ಬಹಳ ಉತ್ತಮ ಹಾಡುಗಳಿವೆ. ಆದರೇನು ಮಾಡುವುದು ಈ ಮೊದಲು ಬಂದಂತಹ ನಮ್ಮ ಉತ್ತಮ ಸಂಗೀತದ ಹಾಡುಗಳು ಆಸ್ಕರ್ ವಿತರಕರ ಕಿವಿಗೆ ಇಂಪಾಗಿ ಕೇಳಿಸಲಿಲ್ಲವೇನೋ! ಅಥವಾ ಸ್ಲಂ ಡಾಗ್ ಗೆ ಆಸ್ಕರ್ ಬಂದ ಕಾರಣ ಅದರ ಹಾಡಿಗೂ ಕೊಟ್ಟರೇನೋ.
ಅದೇನೇ ಇರಲಿ, ಸ್ಲಂ ಡಾಗ್-ಮಿಲೆನೇರ್ ಮಾತ್ರ ನಮ್ಮಲ್ಲಿ ಕೆಲವು ಚಿಂತಿಸುವಂತಹ ಅಂಶಗಳನ್ನು ಹಾಗೇ ಬಿತ್ತಿ ಹೋಗಿವೆ ಎಂಬುದು ಮಾತ್ರ ಸತ್ಯ.
ಆತ ಕ್ರಿಶ್ಚನ್ ಈತ ಮುಸ್ಲಿಂ ಎಂಬ ಯಾವ ಧರ್ಮದ ನೆಲೆಯಿಂದಲೂ ಈ ಮಾತುಗಳನ್ನ ಬರೆಯುತ್ತಿಲ್ಲ.ಆದರೆ ಇಂಥಾ ಸಿನೆಮಾ ಯಾಕೆ ಇಲ್ಲಿಯವರೆಗೆ ಒಬ್ಬ ಭಾರತೀಯ ನಿರ್ದೇಶಿಸಲಿಲ್ಲ?
ಭಾರತೀಯ ಖಂಡಿತಾ ಇಂತ ಸಿನೆಮಾ ನಿರ್ದೇಶಿಸಲಾರ. ಯಾಕೆಂದರೆ ಆತನಿಗೆ ನಮ್ಮ ದೇಶದ ಮೇಲೆ ಅಭಿಮಾನವಿದೆ. ತನ್ನ ದೇಶದ ಕೊಳಕು-ಹುಳುಕನ್ನು ಒಬ್ಬ ಭಾರತೀಯ ಸಿನೆಮಾದ ಮೂಲಕ ಲೋಕಕ್ಕೆ ಸಾರಲಾರ ಅನ್ನುತ್ತೀರಾ?
ಖಂಡಿತಾ ಇಲ್ಲ. ದುಡ್ಡು ಸಿಗುವುದಾದರೆ! ದೇಶ ಭಕ್ತಿ, ಆತ್ಮ ಸಾಕ್ಷಿ ಎಲ್ಲವೂ ಆಮೇಲೆ. ದುಡ್ಡಿನ ಮುಂದೆ ಇದೆಲ್ಲವೂ ಗೌಣ ಅಥವಾ ಸೆಕೆಂಡರಿ.
ಹಾಗಾದರೆ ನಮ್ಮ ದೇಶದ ಕತೆ ನಮ್ಮ ದೇಶದ ಸಿನೆಮಾ ರಂಗದವರ ಕಣ್ಣಿಗೆ ಯಾಕೆ ಬೀಳಲಿಲ್ಲ? ಯಾಕೆಂದರೆ ಭಾರತವೇ ಹಾಗಿದೆ. ನಮಗೆ ನಮ್ಮ ದೇಶದ ಕೊಳಕು ಹುಳಕಿನಲ್ಲಿ ಬದುಕು ಅಭ್ಯಾಸವಾಗಿದೆ. ಹಾಗಾಗಿ ಅಲ್ಲಿ ಕಣ್ಣಿಗೆ ಕತೆ ಕಾಣಲು ಹೇಗೆ ಸಾಧ್ಯ? ಆದ್ದರಿಂದಲೇ ಒಬ್ಬ ವಿದೇಶಿಗನಿಗೆ ಇದು ಸಾಧ್ಯವಾಯಿತು.
ಸಿನೆಮಾ ೮೦೦ ಕೋಟಿ ರೂ ಲಾಭಗಳಿಸಿತು. ಅದರಿಂದ ನಮ್ಮ ಸ್ಲಂಗಳಿಗೇನು ಲಭಿಸಿತು? ಎಂಬ ಪುಕಾರು ಬಂತು. ಒಪ್ಪತಕ್ಕ ಮಾತೇ. ಆದರೆ ವಿದೇಶಿಗರು ನಮ್ಮ ಸ್ಲಂಗಳನ್ನು ಉದ್ದಾರ ಮಾಡುವುದಕ್ಕಿಂತಲೂ ಮೊದಲು ನಾವೇನು ಮಾಡುದೆವು? ಸಿನೆಮಾ ನೋಡಿದ ಮೇಲಾದರೂ ಸ್ಲಂಗಳ ಸ್ಥಿತಿ ಏನಾಯಿತು? ನಮ್ಮವರು ಏನು ಮಾಡಿದರು?
ಉತ್ತರ ಪ್ರತಿಭಟನೆ! ಯಾಕೆ? ಯಾವುದರ ವಿರುದ್ದ? ಯಾವ ಉದ್ದೇಶಕ್ಕಾಗಿ? ಇದ್ಯಾವುದಕ್ಕೂ ನಮ್ಮಲ್ಲಿ ಉತ್ತರವಿಲ್ಲ.
ಸಿನೆಮ ಫೇಮಸ್ ಆದ ಮೇಲಂತೂ ನಮ್ಮ ಸ್ಲಂಗಳು ಪ್ರವಾಸಿ ತಾಣವಾಯಿತು ಎಂಬ ಪುಕಾರು.
ಖಂಡಿತಾ ನಮ್ಮ ದೇಶ ಇದಕ್ಕೆ ಪ್ರವಸಿ ತಾಣವಾಗುವುದು ಬೇಡ. ಅಷ್ಟಕ್ಕೂ ಪ್ರವಾಸಿ ತಾಣವನ್ನಾಗಿ ಮಾಡುವವರು ಯಾರು? ನಮ್ಮವರಲ್ಲವೇ? ಪ್ರವಾಸಿ ತಾಣವಾಗಬೇಕಾದ ಅದೆಷ್ಟೋ ಉತ್ತಮ ಜಾಗಗಳಲ್ಲಿ ಪ್ರವಾಸಿಗರು ಹೋಗಿ ಉಳಕೊಳ್ಳುಲು ವ್ಯವಸ್ಥೆಗಳಿಲ್ಲದೆ ಪರದಾಡುವ ಸ್ಥಿತಿ! ಇದೇ ನಮ್ಮ ದೇಶದ ದುರಂತ ಅನ್ನುವುದು.
ಇನ್ನಾದರೂ ಕೊಳಚೆ ನಾಯಿ ಕೋಟಿಪತಿಯ ಬಗ್ಗೆ ಪುಕಾರು, ತಕರಾರುಗಳನ್ನು ನಿಲ್ಲಸಿ ನಮ್ಮ ದೇಶದ ಉದ್ಧಾರವನ್ನು ಹೇಗೆ ಮಾಡುವುದೆಂದು ನಿರ್ಧರಿಸಿ ಅದರತ್ತ ಸಾಗೋಣವೇ?
ಹಾಗಾದರೆ ಇದನ್ನು ನಿರ್ಧರಿಸುವರಾರು? ಕಾರ್‍ಯರೂಪಕ್ಕೆ ತರುವವರಾರು? ನಾನಾ? ನೀವಾ? ಸರಕಾರದವರಾ? ದೇಶದಲ್ಲಿರುವವರೆಲ್ಲರಾ?
ಮತ್ತೆ ನನ್ನತ್ತ ಕೈ ತೋರಿಸುವ ಬದಲು ನಿಮ್ಮತ್ತ ಕೈ ತೋರಿಸಿ ಪ್ರಶ್ನೆಯಿಂದಲೇ ಮುಗಿಸಬೇಕಾ???

01 March, 2009

ಸರ್ಕಸ್ ನೋಡಿ ತಲೆ ಹಾಳಾಗಿ...

ಕ್ಷಮಿಸಿ, ಇಷ್ಟು ತಡವಾಗಿ ಕನ್ನಡದ ಸರ್ಕಸ್ ಸಿನೆಮಾದ ಬಗ್ಗೆ ಬರೆಯುತ್ತಿರುವುದಕ್ಕೆ ಜೊತೆಗೆ ಬೈಯುತ್ತಿರುವುದಕ್ಕೆ!
ಖಂಡಿತವಾಗಿಯೂ ಆ ಸಿನೆಮಾದ ಡೈರೆಕ್ಟರ್ ದಯಾಲ್ ಪದ್ಮನಾಭನ್, ಪ್ರೊಡ್ಯೂಸರ್, ಗೊಲ್ಡನ್ ಸ್ಟಾರ್ ಗಣೇಶ್ ಯಾರನ್ನೂ ಕ್ಷಮಿಸೊಲ್ಲ. ಅಷ್ಟಕ್ಕೂ ಕ್ಷಮಿಸೋಕ್ಕೆ ನಾನು ಯಾರು ಅಂತ ಕೇಳಬೇಡಿ! ಗಣೇಶ್ ಬಗ್ಗೆ ಇದ್ದ ಸಣ್ಣ ಅಭಿಮಾನವೂ ಇಲ್ಲದಾಯಿತು.
ಸತ್ಯಕ್ಕೂ ಈ ಸಿನೆಮಾ ತಯಾರಿಸಿದ ಉದ್ದೇಶವೇನು ನನಗಂತೂ ಅರ್ಥವಾಗಿಲ್ಲ. ನಿಮಗೇನಾದರೂ ಅರ್ಥವಾದರೆ ತಿಳಿಸಿ.
ಸಿನೆಮಾ ನೋಡಿ ಪ್ರೇಕ್ಷಕರ ಮನಸ್ಸು ಉಲ್ಲಾಸದಾಯಕವಾಗಬೇಕು ಇಲ್ಲವೇ ಮನ ಕಾಡುವಂತಿರಬೇಕು, ಸಿನೆಮಾ ನೋಡಿದ ತ್ರಪ್ತಿಯಾದರೂ ಸಿಗಬೇಕು ಅದು ಬಿಟ್ಟು ಸಿನೆಮಾ ನೋಡಿ ತಲೆ ಹಾಳಾಗುವಂತಿದ್ದರೆ?
ಜೀವನದಲ್ಲಿ ಅದೆಷ್ಟೋ ಸಮಯವನ್ನು ನಿದ್ದೆ ಮಾಡಿಯೋ, ಕಾಡು ಹರಟೆ ಹೊಡೆದೂ ವ್ಯರ್ಥ ಮಾಡಿದ್ದೇನೆ. ಅದಕ್ಕೆ ಅಂಥಾ ಬೇಸರವೇನೂ ಇಲ್ಲ. ಆದರೆ ಸರ್ಕಸ್ ಸಿನೆಮಾ ನೋಡಿ ೩ ಗಂಟೆ ಹಾಳಾಯಿತಲ್ಲ ಅನ್ನೋದು ಅದಕ್ಕಿಂತ ಹೆಚ್ಚಿನ ಬೇಸರ!
ನಮ್ಮ ಕನ್ನಡ ಸಿನೆಮಾದವರು ಅದ್ಯಾಕೆ ಇಂಥ ಸಿನೆಮಾ ತಯಾರಿಸುತ್ತಾರೋ ನಾ ಕಾಣೆ. ಅಷ್ಟು ದುಡ್ಡು ಹೆಚ್ಚಾಗಿದ್ದರೆ ಬಡವರಿಗೆ ದಾನ ಮಾಡಿದ್ದರೆ ಅವರಾದರೂ ಈ ಪ್ರೊಡ್ಯೂಸರ್ ಗಳನ್ನು ಜೀವನ ಪೂರ್ತಿ ಸ್ಮರಿಸುತ್ತಿದ್ದರೇನೋ. ಸಿನೆಮಾ ನೋಡಿ ಪ್ರೇಕ್ಷಕರ ಬೈಗುಳಗಳಿಗಿಂತ! ಶ್ರೇಷ್ಟ ಕೆಲಸ ಮಾಡುದ ಪುಣ್ಯವಾದರೂ ಬರುತ್ತಿತ್ತು.
ದೇಶ ಭಕ್ತಿ, ಉಗ್ರಗಾಮಿಗಳ ಬಗ್ಗೆ ಅದೆಷ್ಟೋ ಸಿನೆಮಾಗಳು ಬಂದಿವೆ. ಆದರೆ ಇಂಥಾ ಸಿನೆಮಾ ಯಾವ ಭಾಷೆಯಲ್ಲೂ ಬಂದಿರಲಿಕ್ಕಿಲ್ಲವೇನೋ.
ಇತ್ತೀಚೆಗೆ ಬಂದ ಎ ವೆಡ್ನಸ್ಡೇ, ಮುಂಬೈ ಮೇರಿ ಜಾನ್ ಎಂತ ಅದ್ಭುತ ಸಿನೆಮಾಗಳು. ಕನ್ನಡದಲ್ಲಿ ಯಾಕೆ ಇಂಥಾ ಸಿನೆಮಾಗಳು ಬರುವುದಿಲ್ಲ?
ಒಂದೊಮ್ಮೆ ನಮ್ಮ ಕನ್ನಡದವರೇನಾದರೂ ಅಂಥದ್ದೇ ಸಿನಮಾ ತಯಾರಿಸಬೇಕೆಂದು ಹೊರಟರೆ ಹೇಗಿರುತ್ತಿತ್ತು? ಅನಗತ್ಯ ಹಾಡುಗಳು, ಹಾಡಿಗೋಸ್ಕರ ಕುಣಿತ, ಕುಣಿತಕ್ಕಾಗಿ ಲವ್ ಸ್ಟೋರಿ. ಒಟ್ಟಿನಲ್ಲಿ ಕಲಸು ಮೇಲೋಗರ!ಖಂಡಿತವಾಗಿಯೂ ಅಂತಹ ಉತ್ತಮ ಚಿತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ!
ಕನ್ನಡ ಸಿನೆಮಾದವರು ಹಿಂದಿಯದ್ದನ್ನೇ ತಥಾವತ್ತಾಗಿ ಕೋಪಿ ಹೊಡೆಯಿರಿ ಎಂದು ಹೇಳುತ್ತಿಲ್ಲ. ನಮ್ಮ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ಸಂಗೀತದಂತೆ! (ಹೀಗೆ ಬರೆದದ್ದು ಗೊತ್ತಾದರೆ ಗುರ್ ಅಂದಾರು.) ಕೋಪಿ ಹೊಡೆದರೂ ಗೊತ್ತಾಗದಂತಿರಬೇಕು.
ಇನ್ನಾದರೂ ನಮ್ಮ ಚಿತ್ರರಂಗದವರು ಪರಭಾಷಾ ಸಿನೆಮಾದ ಐಡಿಯಾಗಳನ್ನು ಸ್ವೀಕರಿಸಿ ಉತ್ತಮ ಸಿನೆಮಾ ತಯಾರಿಸಲಿ ಎಂಬುದೇ ನನ್ನ ವಿನಯಪೂರ್ವಕವಾದ ವಿನಂತಿ.
ಇನ್ನು ಸರ್ಕಸ್ ಸಿನೆಮಾದ ಕತೆಯನ್ನಂತೂ ಬರೆಯೋದಿಲ್ಲ. ಅದನ್ನ ನೋಡಿ ನನ್ನ ತಲೆಯಂತೂ ಹಾಳಾಗಿದೆ. ಇನ್ನು ನನ್ನ ಈ ಬರವಣಿಗೆಯಲ್ಲಿ ಕತೆ ಬರೆದು ನಿಮ್ಮ ತಲೆ ಹಾಳು ಮಾಡಿದ ಅಪವಾದ ನನಗೆ ಬರುವು ಇಷ್ಟವಿಲ್ಲ.
ಒಟ್ಟಿನಲ್ಲಿ ಗಣೇಶನನ್ನು ಮುಂದಿನ ಒಲಿಂಪಿಕ್ ಓಟಕ್ಕೆ ಈಗಲೇ ನಿರ್ದೇಶಕರು ತಯಾರುಗೊಳಿಸಿದಂತೆ ಕಾಣುತ್ತದೆ . ರೈಲಿನ ವೇಗಕ್ಕಿಂತ ಸ್ಪೀಡಿನಲ್ಲಿ! ಚಿನ್ನವೋ ಬೆಳ್ಳಿ ಪದಕವೋ ಬಂದರೆ ಅನುಮಾನವಿಲ್ಲ. ಆದ್ದರಿಂದ ಸಿನೆಮಾ ನಿರ್ದೇಶಕರಿಗೆ, ಪ್ರೊಡ್ಯೂಸರಿಗೆ ಹಾಗೂ ಗಣೇಶ್ ಗೆ ಆಲ್ ದಿ ಬೆಸ್ಟ...!!!






31 January, 2009

ಪುಕ್ಕಟೆ ಪುರಾಣ


ಪುಕ್ಕಟೆ ಸಿಗುತ್ತದೆಯೆಂದರೆ ಇಂಡಿಯಾದಲ್ಲಿ ಜನ ಏನನ್ನು ಸ್ವೀಕರಿಸಲೂ ಸಿದ್ಧ. ಅದಕ್ಕೆ ನಾನೂ ಹೊರತಲ್ಲ!
ಆಗ ಹೆಗಲಿಗೆ ಮಣ ಭಾರದ ಚೀಲ ಏರಿಸಿ, ಕಾಲು ಹಾಕಲೂ ಆಗದ ಬಸ್ಸಲ್ಲಿ ೧ ಗಂಟೆ ಪ್ರಯಾಣಿಸಿ ಶಾಲೆಗೆ ಹೋಗುತ್ತಿದ್ದ ಕಾಲ. ಶಾಲೆ, ಮನೆ ಎರಡೇ. ಬೇರೆ ಪ್ರಪಂಚದ ಅರಿವು ಕಡಿಮೆ. ಧರ್ಮ, ಅರ್ಥ...ಗಳ ಬಗ್ಗೆಯೂ ಅಷ್ಟೊಂದು ತಿಳುವಳಿಕೆ ಇಲ್ಲ. ಮೇಷ್ಟ್ರು ಪಾಠ ಹೇಳಿಕೊಟ್ಟುದರಲ್ಲಿ ನನಗೆಷ್ಟು ತಿಳಿಯಿತೋ ಅಷ್ಟೆ. ಅನುಮಾನ, ನನ್ನೊಳಗೆ ಜಿಜ್ಷಾಸೆ ಯಾವುದೂ ಇಲ್ಲ.
ಒಂದು ದಿನ ನಮ್ಮ ಶಾಲೆಗೆ ಕ್ರೈಸ್ತ ಸಂಸ್ಥೆಯವರು ಅವರ ಧರ್ಮ ಪ್ರಚಾರದ "ಹಳೆಯ ಒಡಂಬಡಿಕೆ" ಎಂಬ ನೀಲಿ ಬೈಂಡಿನ ಪುಸ್ತಕವನ್ನು ತಂದು ಮಕ್ಕಳಿಗೆಲ್ಲ ದರ್ಮಕ್ಕೆ ಹಂಚಿದರು. ಅಲ್ಲದೆ ಅದರ ಕುರಿತು ಏನೇನೇ ಹೇಳಿದ್ದರು(ಈಗ ನೆನೆಪಿಲ್ಲ). ಆ ಪುಸ್ತಕ ಇವತ್ತಿಗೂ ಮನೆಯ ಕಾಪಾಟಿನಲ್ಲಿ ಭದ್ರವಾಗಿದೆ. ಪುಸ್ತಕಕದ ಪುಟ ಮಾತ್ರ ತೆರೆದಿಲ್ಲ!"
ಪುಕ್ಕಟೆ ಸಿಗುವುದಾದರೆ ನನಗೊಂದು ನನ್ನಪ್ಪಂಗೊಂದು ಇರಲಿ" ಎಂದು ಕೈ ಮುಂದು ಮಾಡುವಂತ ಜನ ನಾವು.
ನಾವೆಲ್ಲ ಮಕ್ಕಳು ಸಾಲಾಗಿ ಹೋಗಿ ಕೊಟ್ಟ ಪುಸ್ತಕವನ್ನು ತಂದು ನಮ್ಮ ಜಾಗದಲ್ಲಿ ಕುಳಿತೆವು. ಆದರೆ ಒಬ್ಬ ಮುಸ್ಲಿಂ ಹುಡುಗಿಯನ್ನು ಹೊರತಾಗಿ.
ನನಗೆ ಕುಳಿತಲ್ಲೇ ಆಶ್ಚರ್‍ಯ! ಪುಕ್ಕಟೆ ಕೊಡೋ ಪುಸ್ತಕವನ್ನು ಆಕೆಗೆ ಸ್ವೀಕರಿಸಲೇನು? ಆಕೆಯಲ್ಲಿ ಹೋಗಿ ಕೇಳುವಷ್ಟು ಧೈರ್ಯ ಸಾಲಲಿಲ್ಲ. ಮೊದಲೇ ಆಕೆ ತರಗತಿಯಲ್ಲಿ ಸ್ವಲ್ಪ ಧಿಮಾಕಿನ ಹುಡುಗಿ. ಆಗಲೇ ಹುಡಗರಲ್ಲಿ ಮಾತಾಡುವಳು. ಆಶ್ಚರ್ಯವಾ? ಹುಡುಗರಲ್ಲಿ ಮಾತಾಡಿದರೆ ತಪ್ಪೇನು. ಈಗ ಅದು ಸಂಗತಿಯೇ ಅಲ್ಲ. ಸಾಮಾನ್ಯ. ಆದರೆ ನಾನು ಹೋಗುತ್ತಿದ್ದುದು ಬಹಳ ಹಳ್ಳಿ ಶಾಲೆ. ಹೆಸರಿಗೆ ತಕ್ಕಂತೆ ಕುರುಡಾಗಿತ್ತು ಆ ಹಳ್ಳಿ, ಶಾಲೆ, ಅಲ್ಲಿನ ಮೇಷ್ಟ್ರು... ಕರೆಂಟ್ ಇನ್ನೂ ಬಂದಿರಲಿಲ್ಲ, ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ, ನೀರಿಲ್ಲ. ಕುಡಿಯಲು ದೂರದಿಂದ ಪಾಳಿಯ ಪ್ರಕಾರ ನೀರು ತಂದು ಶಾಲೆಯ ಪ್ರಾಂಗಣದಲ್ಲಿಡಬೇಕಾಗಿತ್ತು.ಸಾಲದ್ದಕ್ಕೆ ನಮ್ಮ ಮೇಷ್ಟ್ರುಗಳೂ ಭಯಂಕರ ಸ್ಟ್ರಿಕ್ಟು. ಅದರಲ್ಲೂ ಇವತ್ತಿಗೂ ನನ್ನ ಕನಸಲ್ಲಿ ಬಂದು ಹೆದರಿಸುವವರು ಲೆಕ್ಕದ ಮೇಷ್ಟ್ರು. ಅದ್ಯಕೋ ಗೊತ್ತಿಲ್ಲ ಹೆಚ್ಚಾಗಿ ಗಣಿತದ ಮೇಷ್ಟ್ರುಗಳೇ ಜೋರಿರುತ್ತಾರೆ. ಆದರೂ ನನ್ನ ಶಾಲೆ. ಮೇಷ್ಟ್ರುಗಳ ಬಗ್ಗೆ ಅಭಿಮಾನ ಖಂಡಿತಾ ಇದೆ. ವಿಶಯ ಎಲ್ಲಿಂದ ಎಲ್ಲಗೋ ಹೋಯಿತು. ಆ ಮೇಷ್ಟ್ರ ಬಗೆಗೆ ಹೇಳುವಂಥದ್ದು ಬಹಳ ಇದೆ. ಇನ್ನೊಮ್ಮೆ ಬರೆಯುತ್ತೇನೆ.
ಅಂಥ ಲೆಕ್ಕದ ಮೇಷ್ಟ್ರಗೇ ಎದುರುತ್ತರ ಕೊಟ್ಟ ಹುಡುಗಿ ಆಕೆ. ಇನ್ನು ನಾನು ಹೇಗೆ ಹೋಗಿ ಕೇಳುವುದು? ಪುಸ್ತಕ ಯಾಕೆ ಸ್ವೀಕರಿಲಿಲ್ಲ? ಎಂದು.
ಇವತ್ತು ನಾನೇ ಕೂತು ಯೋಚಿಸಿದಾಗ ಸಿಕ್ಕ ಉತ್ತರ ಇದಾಗಿರಬಹುದೇ?
ಆವರಣ ಕಾದಂಬರಿ ಓದಿ, ಇವತ್ತಿನ ಉಗ್ರಗಾಮಿ ಸಂಘಟನೆಗಳ ಉದ್ದೇಶ ನೋಡಿದರೆ....
ಆಕೆಗೆ ಆಗಲೇ ತನ್ನ ಮುಸ್ಲಿಂ ಧರ್ಮದ ಬಗೆಗೆ ಅಚಲವಾದ ಪ್ರೀತಿ ವಿಶ್ವಾಸ ಇದ್ದಿರಬಹುದೇ?
ತನ್ನ ಧರ್ಮ ಬಿಟ್ಟು ಬೇರೆ ಯಾವ ಧರ್ಮದ ಬಗೆಗಿನ ಅರಿವು ತನಗೆ ಬೇಡ ಎಂದು ಆಗಲೇ ನಿರ್ಧರಿಸಿರಬಹುದೇ?
ಪುಕ್ಕಟೆ ಕೊಟ್ಟರೂ ಅನ್ಯ ಧರ್ಮದ ಬಗೆಗಿನ ಪುಸ್ತಕ, ತನಗೆ ಅಗತ್ಯವಿಲ್ಲ ಎಂಬ ಧೋರಣೆಯೇ?
ತಾನು ಓದದ ಪುಸ್ತಕ ಮನೆಯಲ್ಲಿಟ್ಟು ಪ್ರಯೋಜನವೇನು?ಎಂಬ ನಿಲುವೇ?
ಅರ್ಥವಾಗುತ್ತಿಲ್ಲ...

27 January, 2009

ಮಾತು ಆಡಿದರೆ ಮುಗಿಯಿತು...

ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿರೋ ಬಹಳ ದೊಡ್ಡ ಮೈದಾನ(ಪ್ರಗತಿ ಮೈದಾನ)ದಲ್ಲಿ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್ ಅನ್ನೋ ಪ್ರದರ್ಶನ ನಡೆದಿತ್ತು. "ಹೋಗೋಣ 355 ನಂಬರ್ ಬಸ್ ಹತ್ಕೊಂಡು ನನ್ನ ಕಛೇರಿಗೆ ಬಾ" ಅಂತ ಗಂಡ ಕರೆದದ್ದಕ್ಕೆ ಬ್ಯಾಗ್ ಏರಿಸಿ ಹೊರಟೆ.
ನಮ್ಮ ಜೊತೆಗೆ ಅವರ ಗೆಳೆಯ ಆತನ ಹೆಂಡತಿ ಬರುತ್ತೇವೆಂದು ಹೇಳಿದ್ದಕ್ಕೆ ನಾವು ಕಛೇರಿಯಲ್ಲಿ ಕಾದೆವು ಕಾದೆವು. ಅವರುಗಳ ಪತ್ತೆ ಇಲ್ಲ! ಅದು ಬೇರೆ ಆ ದಿವಸ ಪ್ರದರ್ಶನದ ಕೊನೆಯ ದಿನವಾಗಿತ್ತು. ಬರುತ್ತೇವೆಂದು ಹೇಳಿದವರನ್ನು ಬಿಟ್ಟು ಹೋಗುವಂತಿಲ್ಲ, ಹೋದರೆ ಇಡಿಯಾಗಿ ಪ್ರದರ್ಶನವನ್ನು ನೋಡುವಷ್ಟು ಸಮಯವಿರಲಿಲ್ಲ. ಇನ್ನೇನು ಮಾಡುವುದು? ಎಂದು ಮಂಡೆ ಬಿಸಿ ಮಾಡುತ್ತಾ ಕೂತೆವು. ಕೊನೆಗೆ "ಈ ಸಲ ಬೇಡ ಮುಂದಿನ ವರ್ಷ ಯಾರಿಗೂ ಕಾಯುವುದು ಬೇಡ ನಾವೇ ಹೋಗೋಣ ಈಗ ನನ್ನನ್ನು ಬಸ್ ಸ್ಟ್ಯಾಂಡ್ ತನಕ ಬಿಡು ಮನೆಗೆ ಹೋಗುತ್ತೇನೆ" ಎಂದು ಹೇಳಿ ಹೊರಟೆ.

ಘಟನೆ_೧

"ಬಂದ ದಾರಿಗೆ ಸುಂಕವಿಲ್ಲ" ಅಲ್ಲ. ಬಸ್‌ಗೆ ಕಂಡಕ್ಟರ್‌ಗೆ ಹತ್ತು ರೂಪಾಯಿ ಕೊಟ್ಟು ಕುಳಿತೆ.
ನನ್ನ ಪಕ್ಕದಲ್ಲೇ ಬಂದು ನಿಂತ ವ್ಯಕ್ತಿ ಆತನ ಕೆಲವು ದೊಡ್ಡ ದೊಡ್ಡ ಪುಸ್ತಕಗಳನ್ನು ನನ್ನ ಕೈಗಿತ್ತ. ಅರೆ! ನಂ ಮಂಗ್ಳೂರ್ ಬುದ್ದಿ ಜನ ಇಲ್ಲೂ ಇದಾರಾ? ಅಂತ ಮನ್ಸಲ್ಲೇ ಯೋಚಿಸ್ತಾ ಇದ್ದಾಗ "ಲೋ ಮಚಾ ಈ ಬಸ್ ಹಾಸ್ಟೇಲ್ ತನಕ ಹೋಗುತ್ತಲ್ಲ?"
ದಿಲ್ಲಿಯಲ್ಲಿ ಕನ್ನಡ ಮಾತಾಡೋರು? ನನ್ ಕಿವಿ ನೆಟ್ಟಗಾಯಿತು.
"ಏನೋ ಮಾರಾಯಾ ಥೂ ನಂ ಹಾಸ್ಟೇಲ್ ಅಂತೂ...ಈ ಸಲ ಬಿಟ್ ಬಿಡ್ತೀನಿ. ಕಣೋ. ಮೂರು ಸಾವಿರ ವಾಪಾಸ್ ಕೊಡ್ತಾರಲ್ಲ?ಕೊಡ್ದೆ ಏನು ನಂದು ಗವರ್‍ನಮೆಂಟ್ ಸೀಟ್ . ಏನು ನೀರಿಲ್ಲ ಏನಿಲ್ಲ.ಬೆಳಗ್ಗೆ ಬೇಗ ಹೋದ್ರೂ ಬಿಸಿ ನೀರಿಲ್ಲ ಕಣೋ. ನೆನ್ನೆ ಪಲ್ಯ ಚೆನಾಗ್ ಮಾಡಿದ್ರಲ್ಲ, ಅದೇನೋ ಸೊಪ್ಪಿಂದು..." ಹೀಗೆ ಸಂಭಾಷಣೆ ನಡೆಯುತ್ತಿತ್ತು.
ಅಪರೂಪಕ್ಕೆ ಪರವೂರಲ್ಲಿ ಕನ್ನಡದವರು ಸಿಕ್ಕಾಗ ಕರ್ನಾಟಕದಲ್ಲಿ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂತೆ ಕನ್ನಡ, ಕನ್ನಡಿಗರ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತದೆ. ಆದರೂ ನಾನು ಸುಮ್ಮನೆ ಕುಳಿತು ಅವರುಗಳ ಸಂಭಾಷಣೆ ಕೇಳುತ್ತಿದ್ದೆ.
ಆತ ಕೊಟ್ಟ ಪುಸ್ತಕದಲ್ಲಿ ಯಾವ್ದೋ ಮೇಲ್ ಐಡಿ ಇತ್ತು. ನನ್ನ ಕಾಲ ಮೇಲಿದ್ದ ಆ ಪುಸ್ತಕವನ್ನ ಇನ್ನೊಬ್ಬ ಇಣುಕಿ ನೋಡಿದ. (ಫಿಮೇಲ್ ಐಡಿ ಇರಬಹುದೇನೋ ಅಂತ)
"ಲೋ ಅದು ಅವ್ರ ಬುಕ್ ಅಲ್ಲ ಕಣೋ...ಅವ್ರ ಮೇಲ್ ಐಡಿ ಅಂತ ನೋಡ್ತಾ ಇದ್ಯಾ? ಅದು ನಂ ಸರ್‌ದು...ಈ ಬಸ್ ಚೆನ್ನಾಗಿದ್ಯಯಲ್ಲ. ಕೆಲವು ಬಸ್ ಏನು ಗಲೀಜಿರುತ್ತೆ ಮಾರಾಯ, ಯಾಕೆ ಬಸ್ ನಿಂತು ಬಿಡ್ತು?"
"ಅದೇ ಮೇಲಿಂದ ಟ್ರೇನ್ ಹೋಗ್ತಾ ಇದ್ಯಲ್ಲ!",
"ತಲೆ ನಿಂದು".
ಹೀಗೆ ಅವ್ರ ಡೈಲಾಗ್‌ಗಳು ಮುಂದುವರಿಯುತ್ತಿತ್ತು. ಕುಳಿತಲ್ಲೇ ನಂಗೆ ನಗು. ಈ ಹುಡುಗರು ನನ್ ಬಗ್ಗೆ ಇನ್ನು ಏನೆಲ್ಲಾ ಹೇಳ್ತಾರೆ ಅನ್ನೋ ಕುತೂಹಲ. ಅಷ್ಟೊತ್ತಿಗೆ ಅವರಿಗೆ ಹಿಂದೆ ಸೀಟ್ ಸಿಕ್ತು. ಆ ಹುಡುಗ ನನ್ನತ್ರ ಪುಸ್ತಕ ಕೇಳಿ "ಥ್ಯಾಂಕ್ಯೂ" ಅಂದಾಗ "ಪರವಾಗಿಲ್ಲ , ಥ್ಯಾಂಕ್ಯೂ ಎಲ್ಲ ಬೇಡ ಬಿಡಿ" ಅಂದೆ.
ನಿಂತಲ್ಲೇ ಶಾಕ್ ಕೊಟ್ಟಂಗಾಯ್ತು ಅವರಿಗೆ. "ಮೇಡಮ್ಮು ಕನ್ನಡದವ್ರಾ? ಮೊದಲೇ ಹೇಳೋದಲ್ವಾ?" ಅಂತ ಜೋರಾಗಿ ಹೇಳಿದಾಗ ಬಸ್ಸಲ್ಲಿದ್ದವರೆಲ್ಲ ನಮ್ಮತ್ತ ತಿರುಗಿ ನೋಡಿದರು.
"ಏನೇನು ಡಯಲಾಗ್ ಹೇಳ್ತೀರಾ ಅಂತ ಕೇಳ್ಕಂಡು ಮತ್ತೆ ನಿಮ್ಮತ್ರ ಮಾತಾಡುವ ಅಂತಿದ್ದೆ" ಅಂದೆ.
ಪಾಪ ಹುಡುಗರು ಐಎಸ್ ಕೋಚಿಂಗಿಗೆ ಮೈಸೂರು, ಕಾರವಾರದಿಂದ ಬಂದವರಂತೆ.

ಘಟನೆ_

ಹೀಗೇ ಇನ್ನೊಂದು ಘಟನೆ ನನಗಾಗಿತ್ತು. ಕಾಲೇಜಿಗೆ ಹೋಗುತ್ತಿದ್ದ ಸಮಯ. ನನ್ನ ಸೌಂಡ್ ಬಾಕ್ಸ್ ಒಳಗೆ ವಾಲ್ಯೂಮ್ ಸ್ವಲ್ಪ ದೊಡ್ಡದಾಗಿ ಫಿಕ್ಸ್ ಮಾಡಿದಾನೆ ಆ ಭಗವಂತ!
ಆಗ ಮಂಗಳೂರಿನಲ್ಲಿ ಮರಕಡ ಸ್ವಾಮಿಗಳ ಬಗ್ಗೆ ಏನೋ ಗುಸು ಗುಸು, ಬಿಸಿ ಬಿಸಿ ಚರ್ಚೆ ಜೋರಾಗೇ ನಡೆಯುತ್ತಿತ್ತು. ಅದನ್ನ ನನ್ನ ಮುಸ್ಲಿಂ ಗೆಳತಿಯೊಬ್ಬಳ ಹತ್ತಿರ ಹೇಳುತ್ತಿದ್ದೆ. ಆಕೆಗೆ ಮಾತ್ರವಲ್ಲ ಬಸ್ಸಲ್ಲಿದ್ದವರಿಗೆಲ್ಲ ಕೇಳುವಷ್ಟು ಜೋರಾಗಿ ಸ್ಪಿರಿಟ್ಟಲ್ಲಿ ಹೇಳುತ್ತಿದ್ದೆ. ಅದರ ಜೊತೆ ಒಡಿಯೂರು ಸ್ವಾಮಿಗಳು ಮರದ ಗೆಲ್ಲಿನಲ್ಲಿ ಮಂಗನಂತೆ ಹಾರಾಡುವುದನ್ನು (ಸ್ವತಃ ನಾನು ನೋಡಿಲ್ಲ. ನೋಡಿದವರು ಹೇಳಿದ್ದನ್ನು ಕೇಳಿದ್ದೇನೆ.) ಅವರ ಬಗೆಗಿನ ಊಹಾಪೋಹವನ್ನೆಲ್ಲ ನನಗೆ ಗೊತ್ತಿದ್ದ ಪಾಂಡಿತ್ಯವನ್ನು ಆಕೆಯ ಎದುರು ಪ್ರದರ್ಶಿಸುತ್ತಿದ್ದೆ. ಪ್ರಪಂಚದ ಗೊಡವೆಯೂ ಇಲ್ಲದೆ!
ಇದ್ದಕ್ಕಿದ್ದಂತೆ ನನ್ನ ಪಕ್ಕದ ಸೀಟಿನಲ್ಲಿ ಕುಳಿತ ಸುಮಾರು ೫೦ ವರ್ಷದ ಹೆಂಗಸೊಬ್ಬಳು "ಸ್ವಾಮಿಗಳ ಬಗ್ಗೆ ನಿಮಗೇನು ಗೊತ್ತು? ಅವ್ರ ಬಗ್ಗೆ ಹಾಗೆಲ್ಲ ಮಾತನಾಡಬೇಡಿ, ನಾವು ಅವರ ಭಕ್ತರು" ಅನ್ನಬೇಕೆ?
ನನ್ನ ಎದೆ ದಸಕ್ ಎಂದಿತು. ಕುಳಿತಲ್ಲೆ ಮೈ ಬಿಸಿಯಾಯಿತು. ಆಕೆ ಬಸ್ಸಲ್ಲಿದ್ದವರೆಲ್ಲರೆದುರು ನನ್ನ ಮೇಲೆ ಎಗರಾಡಿದರೆ? ನನ್ನತ್ರ ಎದುರುತ್ತರ ಕೊಡುವಷ್ಟು ಪಾಂಡಿತ್ಯವೂ ಇಲ್ಲ, ಧೈರ್ಯವೂ ಇಲ್ಲ. ನನ್ನ ಪುಣ್ಯಕ್ಕೆ ಹಾಗೇನೂ ಆಗಿಲ್ಲ.

ಘಟನೆ_೩

ನನ್ನ ಅತ್ತೆಗೂ ಹೀಗೇ ಆಗಿತ್ತಂತೆ. ಅಜ್ಜಿ ಮನೆಗೆ ಹೋದಾಗ ನಾವೆಲ್ಲ ನೆಂಟರು ಸೇರಿರುವಾಗ ಹಳೆಯ ಘಟನೆಗಳ ಕುರಿತು ಮೆಲುಕು ಹಾಕುವ ಪದ್ದತಿ.
ನನ್ನ ಸೋದರಮಾವನಿಗೆ ಪುತ್ತೂರಿನಲ್ಲಿ "ಕಲ್ಪವೃಕ್ಷ" ಅನ್ನುವ ಐಸ್ ಕ್ರೀಮ್ ಪಾರ್ಲರ್ ಇತ್ತು. ನಾನು ಸಣ್ಣದಿರುವಾಗ ಪುತ್ತೂರಿಗೆ ಹೋದರೆ ಖಾಯಂ ಮಾವನ ಅಂಗಡಿಯಲ್ಲಿ ಪುಕ್ಕಟೆ ಗಡ್‌ಬಡ್. ನನ್ನಂತವರು ಪುಕ್ಕಟೆ ತಿಂದು ತಿಂದು ಲಾಸ್ ಆಗಿ ಐಸ್ ಕ್ರೀಮ್ ಜೊತೆ ಅಂಗಡಿಯೂ ಕರಗಿ ಹೋಯಿತೋ? ಗೊತ್ತಿಲ್ಲ.
ಅತ್ತೆ ಕ್ಯಾಶಿಯರ್ ಕುರ್ಚಿಯಲ್ಲಿ ಕುಳಿತಿದ್ದ ದಿನ ನಾಲ್ಕೈದು ಹುಡುಗರು ಐಸ್ ಕ್ರೀಮ್ ತಿನ್ನುತ್ತಾ ಅತ್ತೆಯ ಜೊತೆ ಮಾತನಾಡಲು ತೊಡಗಿದರಂತೆ. ವಿಶಯ ಎಲ್ಲೆಲ್ಲೋ ಸುತ್ತಾಡಿ ಕೊನೆಗೆ ಧರ್ಮದ ಬಗ್ಗೆ ತಿರುಗಿತಂತೆ.
"ಮುಸ್ಲಿಂ ಜನರೇ ಮೋಸ, ಅವರ ವರ್ತನೆಯೇ ವಿಚಿತ್ರ, ಯಾರನ್ನು ನಂಬಿದರೂ ಅವರನ್ನು ನಂಬಬಾರದು" ಅಂತೆಲ್ಲಾ ಅತ್ತೆಯ ಭಾಷಣ.
ಅವರೆಲ್ಲಾ ಇಸ್ ಕ್ರೀಮ್ ತಿಂದು ದುಡ್ಡು ಕೊಡುವಾಗ "ಅಕ್ಕ ನಾವೂ ನೀವು ಬೈದ ಜಾತಿಗೇ ಸೇರಿದವರು." ಅಂದಾಗ ಅತ್ತೆ ಸುಸ್ತಂತೆ!
ಅದಕ್ಕೇ ಸಾರ್ವಜನಿಕ ಸ್ಥಳಗಳಲ್ಲಿ ಯಾರನ್ನೂ ದೂರುವ ವಿಶಯ ಮಾತಾಡಬೇಡಿ. ಮಾತನಾಡಿದರೂ ಹೊಗಳುವ ವಿಶಯ ಮಾತಾಡಿ.

12 January, 2009

ಚಳಿ ಚಳಿ ತಾಳೆನು ದಿಲ್ಲಿ ಚಳಿಯಾ...


ಮಂಕಿ ಕ್ಯಾಪ್, ಕೈಗೆ ಗ್ಲೌಸ್, ಮೈಗೆ ಥರ್ಮಲ್ ವೇರ್, ಮೇಲಿಂದ ಅಂಗಿ, ಅದರ ಮೇಲಿಂದ ಸ್ವೆಟರ್, ಶಾಲು. ಇದಿಷ್ಟು ಸಾಕಾಗಿಲ್ಲವೆಂದರೆ ಜಾಕೆಟ್ಟು, ಕಾಲಿಗೆ ಸಾಕ್ಸು. ಮಣದ ಭಾರದ ಬಟ್ಟೆ ಹೇರಿಕೊಂಡರೂ ಮೈ ನಡುಗಿಸುತ್ತದೆ ದಿಲ್ಲಿ ಚಳಿ.
ಜೀವನದಲ್ಲಿ ಈತನಕ ಇಷ್ಟು ಅಂಗಿ ಹಾಕಿಯೇ ಇಲ್ಲ. ಅದು ಬಿಡಿ ಸ್ವೆಟರ್ ಹಾಕಿದ ನೆನಪೂ ಇಲ್ಲ. ಕಳೆದ ವರ್ಷ ಅಮ್ಮಮ್ಮ (ಅಜ್ಜಿ) ಕಾಶಿಗೆ ಹೋಗಿದ್ದಾಗ ನನಗಾಗಿ ಒಂದು ಸ್ವೆಟರ್ ತಂದಿದ್ದರು. ಅಮ್ಮಮ್ಮ ಹೇಗೂ ಗಿಫ್ಟ್ ಕೊಡುವಾಗ ಉಪಯೋಗಕ್ಕೆ ಬಾರದ ಸ್ವೆಟರ್ ಕೊಡುವ ಬದಲು ಡ್ರೆಸ್ಸಾದರೂ ತಂದಿದ್ದರೆ ಚೆನ್ನಾಗಿತ್ತು ಅಂತ ಮನಸೊಳಗೇ ಅಂದುಕೊಂಡು, ಒಮ್ಮೆ ಹಾಕಿ ಕಪಾಟೊಳಗಿಟ್ಟಿದ್ದೆ.ಈಗ ಗೊತ್ತಾಯಯ್ತು. ಅಮ್ಮಮ್ಮನ ಸಿಕ್ಸ್ ಸೆನ್ಸಿಗೆ ಆಗಲೇ ಗೊತ್ತಿತ್ತೇನೊ ನಾನು ಮುಂದೆ ದಿಲ್ಲಿಯ ಚಳಿ ಅನುಭವಿಸಲಿರುವೆನೆಂದು. ಈಗ ಮನೆಯಲ್ಲಿ ದಿನಾ ನನ್ನನ್ನು ಚಳಿಯಿಂದ ಕಾಪಾಡ್ತಿರೋದು ಅದೇ ಸ್ವೆಟರ್. ಅಮ್ಮಮ್ಮನಿಗೆ ೪ ಡಿಗ್ರಿ ಸೆಲ್ಶಿಯಸ್ ಚಳಿಯಷ್ಟು ಆಳವಾದ ಥ್ಯಾಂಕ್ಸ್ ಹೇಳಲೇ ಬೇಕು.
ಇಲ್ಲಿ ತನಕ ಕಾಸರಗೋಡು, ಮಂಗಳೂರಲ್ಲಿದ್ದ ನಂಗೆ ಚಳಿ ಎಂದರೇನೆಂದು ಅನುಭವಿಸಿ ಖಂಡಿತಾ ಗೊತ್ತಿರಲಿಲ್ಲ. ಅಲ್ಲಿಂದ ನೇರ ಇಂಥ ಘನಘೋರ ಚಳಿ ಪ್ರದೇಶಕ್ಕೆ ಬಂದರೆ? ಬಾಣಲಿಯಿಂದ ಪ್ರಿಡ್ಜಿಗೆ ಬಿದ್ದಂತಾಗುತ್ತದೆ. ಅಬ್ಬಬ್ಬಾ! ಒಮ್ಮೆಯಂತೂ ಶರೀರದ ಕಂಡೆನ್ಸರ್ ವೀಕ್ ಆಗೋದು ಗ್ಯಾರೆಂಟಿ.
ಮೈಯಲ್ಲಿ ಜ್ವರ! ಮೂಗಲ್ಲಿ ಸೊರ ಸೊರ!
ಆದರೂ ಈ ವಾತಾವರಣವೂ ಒಂಥರಾ ಮಜಾ. ಇಷ್ಟಲ್ಲಾ ಅಂಗಿ ಹಾಕ್ಬೇಕಲ್ಲಾ ಅನ್ನೋ ಬೇಜಾರಿನ ಹೊರತಾಗಿ ದಿನಾ ಬಟ್ಟೆ ತೊಳೆಯೋ ಕೆಲಸ ಇಲ್ಲ. ಮನೆ ಎಸಿಗಿಂತ ಕೂಲ್. ಬೆಚ್ಚಗೆ ರಜಾಯಿ ಹೊದ್ದು ಮಲಗೋ ಸುಖ ಈಗಲೇ ಅನುಭವಿಸಬೇಕು. ಬೆಳಗ್ಗೆ ಗಂಟೆ ಎಂಟಾದರೂ ಬೆಳಕಿಲ್ಲ. ಬಿಸಿ ಬಿಸಿ ಹಬೆಯಾಡೋ ಚಾಹ ಕುಡಿಯಲು ಮಜಾ ಬರುವುದೇ ಈಗ.
ಬೆಳಗ್ಗೆ ಮನೆಯಿಂದ ಹೊರಗೆ ಕಾಲಿಟ್ಟೆಯೋ ನೂರು ಇನ್ನೂರು ಮೀಟರ್ ದೂರಕ್ಕಿಂತ ಆಚೆ ಏನು ಕಾಣಿಸೋದಿಲ್ಲ. ೨೦೦೭ರ ಗಿನ್ನಿಸ್ ವರ್ಲ್ಡ ರೆಕಾರ್ಡಿನ ಪ್ರಕಾರ ವಿಶ್ವದ ಅತಿ ದೊಡ್ಡ ಮತ್ತು ಅಗಲವಾಗ ಹಿಂದೂ ದೇವಾಲಯ ಎಂದು ಪ್ರಸಿದ್ದಿಪಡೆದ ಅಕ್ಷರಧಾಮ ದೇವಸ್ಥಾನವಿರುವುದು ನಮ್ಮ ಮನೆಯಿಂದ ೨ಕಿಮೀ. ದೂರದಲ್ಲಿ. ಸದ್ಯ ಒಂದು ಮಧ್ಯಾಹ್ನ ಆ ದಾರಿಯಾಲ್ಲಾಗಿ ಹೋದರೆ ಅಕ್ಷರಧಾಮ ನಾಪತ್ತೆ. ಪೂರ್ತಿಯಾಗಿ ಮಂಜು ಮುಸುಕು!
ಮಧ್ಯಾಹ್ನ ಹೋದರೆ ಇಂಡಿಯಾ ಗೇಟೂ ಇಲ್ಲ, ರಾಷ್ಟ್ರಪತಿ ಭವನವೂ ಇಲ್ಲ!
ದೇಶದ್ದಲ್ಲೆಲ್ಲ ಉಗ್ರಗಾಮಿಗಳ ಹಾವಳಿ. ಇಲ್ಲಿ ಜನರೆಲ್ಲ ಉಗ್ರಗಾಮಿಗಳಂತೆ, ಕಣ್ಣು ಮೂಗಿನ ಹೊರತಾಗಿ ಬೇರೆಲ್ಲ ಭಾಗ ಫುಲ್ ಪ್ಯಾಕ್.
ಡೆಲ್ಲಿಯ ಅಂದವಿರುವುದು ಇಲ್ಲಿನ ದೊಡ್ಡ ದೊಡ್ಡ ಪಾರ್ಕ್ ಮತ್ತು ವೃತ್ತ(ಸರ್ಕಲ್, ಗೋಲ್ ಚಕ್ಕರ್)ದಿಂದ. ಖಂಡಿತವಾಗಿಯೂ ನಮ್ಮ ಮಂಗಳೂರಿನ ಕದ್ರಿ ಪಾರ್ಕ್, ಪಂಪ್‌ವೆಲ್ ವೃತ್ತದಂತಿಲ್ಲ. ಚಂದವಾಗಿ ಇಟ್ಟಿದ್ದಾರೆ. ಚಳಿಗಾಲದಲ್ಲಿ ಇಂತಹ ಪಾರ್ಕು, ವೃತ್ತ, ಹೂದೋಟಗಳಿಗೆ ಹೋದರೆ ಅಂದದ ಹೂವುಗಳ ಚೆಂದದ ನೋಟ ಬೋನಸ್. ನಮುನಮೂನೆ ಕಣ್ಸೆಳೆವ ಬಣ್ಣಗಳ ಡೇಲಿಯಾ, ಸೇವಂತಿಗೆ ಹೂವು ಹಾಕಲು ಬೇಕಾದಷ್ಟು ಬಟ್ಟೆ, ಇರಲು ಸರಿಯಾದ ಮನೆ ಉಳಿದ ಎಲ್ಲ ಸೌಕರ್ಯ ಇದ್ದವರಿಗೆ ಮಾತ್ರ ಚಳಿಗಾಲದ ಈ ಮಜ. ಹೇಳಿಕೇಳಿ ನಮ್ಮದು ಬಡ ರಾಷ್ಟ್ರ! ಬಡತನ ನಮ್ಮ ದೇಶದ ರಾಜಧಾನಿಯನ್ನು ಬಿಡಲು ಸಾದ್ಯವೇ? ಚಂದದ ರಸ್ತೆಗಳ ನಡುವೆ ಅಷ್ಟೇ ಚಂದದ ವೃತ್ತ, ಪಕ್ಕದಲ್ಲಿ ಹರುಕಲು ಬಟ್ಟೆ ಹಾಕಿ ನಡುಗುವ ದೇಹ. ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಇಂತಹವರು ತಮ್ಮ ದೇಹವನ್ನು ಅದೆಷ್ಟು ಬಟ್ಟೆಗಳಿಂದ ರಕ್ಷಿಸಬಹುದು? ಊಟ, ಬಟ್ಟೆ, ಮನೆ ಸರಿಯಾಗಿಲ್ಲದ ಅದೆಷ್ಟೋ ಜನರು ಇಂತಹ ಘನಘೋರ ಚಳಿಯಲ್ಲಿ ಇನ್ನೇನಾಗಲು ಸಾದ್ಯ? "ಚಳಿಯಿಂದ ಉತ್ತರಭಾರತದಲ್ಲಿ ಇಷ್ಟು ಜನರ ಸಾವು" ಅಂತ ಪೇಪರಿನಲ್ಲಿ ಓದುವಾಗ ಮೊದಲು ಆಶ್ಚರ್ಯ ಆಗುತ್ತಿತ್ತು. ಈಗ ಅದರ ಅರ್ಥವೇನೆಂದು ತಿಳಿಯಿತು.
ಅದೇನಾದರೂ ಇರಲಿ, ಒಮ್ಮೆ ಡೆಲ್ಲಿಗೆ ಬಂದು ಚಳಿಯ ಅನುಭವ ಪಡೆಯಿರಿ.